ADVERTISEMENT

ಕೇಬಲ್ ಅಳವಡಿಸಲು ಚರಂಡಿಗೆ ಮಣ್ಣು; ಮಳೆಗಾಲದಲ್ಲಿ ಸಮಸ್ಯೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 20 ಮೇ 2019, 11:23 IST
Last Updated 20 ಮೇ 2019, 11:23 IST
ಕಾರವಾರ ತಾಲ್ಲೂಕಿನ ಕುರ್ನಿಪೇಟೆಯಿಂದ ಕೈಗಾದತ್ತ ಸಾಗುವ ರಸ್ತೆಯ ಅಂಚಿನಲ್ಲಿ ಕೇಬಲ್ ಅಳವಡಿಸಲು ಚರಂಡಿಯ ಸಮೀಪದಲ್ಲಿ ಹೊಂಡ ತೆಗೆದಿರುವುದು
ಕಾರವಾರ ತಾಲ್ಲೂಕಿನ ಕುರ್ನಿಪೇಟೆಯಿಂದ ಕೈಗಾದತ್ತ ಸಾಗುವ ರಸ್ತೆಯ ಅಂಚಿನಲ್ಲಿ ಕೇಬಲ್ ಅಳವಡಿಸಲು ಚರಂಡಿಯ ಸಮೀಪದಲ್ಲಿ ಹೊಂಡ ತೆಗೆದಿರುವುದು   

ಕಾರವಾರ:ತಾಲ್ಲೂಕಿನಕುರ್ನಿಪೇಟೆಯಿಂದ ಕೈಗಾಕ್ಕೆ ಹೋಗುವ ರಸ್ತೆಯ ಅಂಚಿನಲ್ಲಿ ಖಾಸಗಿ ದೂರವಾಣಿ ಸಂಸ್ಥೆಯ ಫೈಬರ್ ಕೇಬಲ್‌ಗಳನ್ನು ಅಳವಡಿಸಲಾಗುತ್ತಿದೆ. ಇದಕ್ಕಾಗಿ ಚರಂಡಿಯ ಸಮೀಪದಲ್ಲೇ ಹೊಂಡ ಅಗೆಯಲಾಗಿದ್ದು, ಮಣ್ಣನ್ನು ಅರೆಬರೆಯಾಗಿ ಮುಚ್ಚಲಾಗಿದೆ. ಇದು ಮಳೆಗಾಲದಲ್ಲಿ ಸಮಸ್ಯೆ ತಂದೊಡ್ಡುವ ಸಾಧ್ಯತೆಯಿದೆ.

ರಸ್ತೆಯ ಅಂಚಿನಲ್ಲಿ ಗುಡ್ಡದಿಂದ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆಈ ಮೊದಲೇ ಚರಂಡಿ ನಿರ್ಮಾಣ ಮಾಡಲಾಗಿತ್ತು. ಅದರ ಅಂಚಿನಲ್ಲೇ ಜಿಯೊ ಕಮ್ಯುನಿಕೇಷನ್ಸ್‌ನಿಂದ ಕೇಬಲ್ ಅಳವಡಿಸಲಾಗುತ್ತಿದೆ. ಆದರೆ, ಬಹುತೇಕ ಕಡೆಗಳಲ್ಲಿ ಮಣ್ಣನ್ನು ಚರಂಡಿಯಲ್ಲಿ ರಾಶಿ ಹಾಕಲಾಗಿದೆ. ಮತ್ತೊಂದಷ್ಟು ಪ್ರದೇಶಗಳಲ್ಲಿ ಅರ್ಧಂಬರ್ಧ ಕಾಮಗಾರಿ ಮಾಡಲಾಗಿದೆ.

ಮಳೆಗಾಲ ಆರಂಭವಾಗುವ ಮೊದಲೇಚರಂಡಿಯ ಮಣ್ಣನ್ನು ಸರಿಯಾಗಿ ಮುಚ್ಚದಿದ್ದರೆ ಮಳೆ ನೀರು ರಸ್ತೆಯಲ್ಲೇ ಹರಿದು ಬರಲಿದೆ. ಇದರಿಂದ ಉತ್ತಮವಾದ ರಸ್ತೆಯಲ್ಲಿ ಹೊಂಡ ಬಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಈ ರಸ್ತೆಯಲ್ಲಿ ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತವೆ. ಕೈಗಾ ಅಣುವಿದ್ಯುತ್ ಸ್ಥಾವರ, ಕದ್ರಾ ಅಣೆಕಟ್ಟೆಯ ಭಾಗಕ್ಕೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆಇದು ಪ್ರಮುಖ ರಸ್ತೆಯಾಗಿದೆ.

ADVERTISEMENT

ಮಣ್ಣನ್ನು ಸೂಕ್ತ ಕ್ರಮದಲ್ಲಿ ಮುಚ್ಚಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಇಲ್ಲದಿದ್ದರೆ ಅದರ ಕಾಮಗಾರಿಯ ವೆಚ್ಚವನ್ನು ಸಂಬಂಧಿಸಿದ ಸಂಸ್ಥೆಗಳಿಂದ ವಸೂಲಿ ಮಾಡಬೇಕು ಎಂದು ಗ್ರಾಮಸ್ಥ ರೋಹಿತ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.