ADVERTISEMENT

ಭಟ್ಕಳ: ಬಾವಿಗೆ ಸೇರುತ್ತಿರುವ ಒಳಚರಂಡಿ ನೀರು: ದೂರು

ಆಸರಕೇರಿ ವಾರ್ಡ್‌ನ ಹಲವರಿಗೆ ಜ್ವರ; ಸಾಮೂಹಿಕ ರಕ್ತ ಪರೀಕ್ಷೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 13:38 IST
Last Updated 10 ಜೂನ್ 2025, 13:38 IST
ಭಟ್ಕಳ ಪಟ್ಟಣದ ಆಸರಕೇರಿಯ ಸಾರ್ವಜನಿಕರು ಮಂಗಳವಾರ ತಹಶೀಲ್ದಾರ್‌ ನಾಗೇಂದ್ರ ಕೊಳಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು
ಭಟ್ಕಳ ಪಟ್ಟಣದ ಆಸರಕೇರಿಯ ಸಾರ್ವಜನಿಕರು ಮಂಗಳವಾರ ತಹಶೀಲ್ದಾರ್‌ ನಾಗೇಂದ್ರ ಕೊಳಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು   

ಭಟ್ಕಳ: ಪುರಸಭೆಯ ಅವೈಜ್ಞಾನಿಕ ಯುಜಿಡಿ ಕಾಮಗಾರಿಯಿಂದಾಗಿ ಪಟ್ಟಣದ ಆಸರಕೇರಿಯಲ್ಲಿ ಒಳಚರಂಡಿ ನೀರು ಸೋರಿಕೆಯಾಗಿ ಬಾವಿ ಸೇರಿ ನೀರು ಕಲುಷಿತಗೊಂಡಿದ್ದು, ಇದನ್ನು ಕುಡಿದ ಜನರು ಜ್ವರದಿಂದ ಆಸ್ಪತ್ರೆ ಸೇರುತ್ತಿದ್ದಾರೆ. ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಆಸರಕೇರಿ ವಾರ್ಡ್‌ನ ಸಾರ್ವಜನಿಕರು ತಹಶೀಲ್ದಾರ್‌ ನಾಗೇಂದ್ರ ಕೊಳಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.

‘ಪಟ್ಟಣದ ಆಸರಕೇರಿಯಲ್ಲಿ ಅವೈಜ್ಞಾನಿಕ ಯುಜಿಡಿ ಕಾಮಗಾರಿಯಿಂದಾಗಿ ಒಳಚರಂಡಿ ನೀರು ಸೋರಿಕೆಯಾಗಿ ಗ್ರಾಮದ ಸುತ್ತಮುತ್ತಲಿನ ಬಾವಿಗಳು ಕಲುಷಿತಗೊಂಡಿವೆ. ಇದರಿಂದಾಗಿ ನಿತ್ಯ ನಾವು ಕುಡಿಯುವ ನೀರಿಗಾಗಿ ಅಲೆದಾಡುವ ಸ್ಥಿತಿ ಇದೆ. ಅದರ ಜೊತೆಗೆ ಕಳೆದ ಕೆಲವು ದಿನಗಳ ಹಿಂದೆ ಮಳೆ ಆರಂಭವಾದ ಮೇಲೆ ಒಳಚರಂಡಿ ನೀರು ತುಂಬಿ ಬಂದು ರಸ್ತೆಯ ಮೇಲೆ ಹರಿದು ಮಳೆ ನೀರಿನ ಜೊತೆ ಬಾವಿಗಳಿಗೆ ಸೇರುತ್ತಿದೆ. ಇದನ್ನು ಕುಡಿದ ಹಲವರು ಅಸ್ವಸ್ಥಗೊಂಡು ಜ್ವರ ಬಾಧೆಯಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸರಕೇರಿ ವಾರ್ಡ್‌ನ ಪ್ರತಿ ಮನೆಯ ಸದಸ್ಯರು ಜ್ವರದಿಂದ ಬಳಲುತ್ತಿದ್ದು, ಬಾವಿ ನೀರು ಕಲುಷಿತಗೊಂಡಿರುವುದೇ ಸಾಮೂಹಿಕ ಜ್ವರಕ್ಕೆ ಕಾರಣ ಎಂದು ಅನಿಸುತ್ತಿದೆ. ಈಗಾಗಲೇ ಪುರಸಭೆಯವರಿಗೆ ಒಳಚರಂಡಿ ನೀರು ಸೋರಿಕೆ ಬಗ್ಗೆ ಮನವಿ ಮಾಡಿದ್ದರೂ ಕ್ರಮ ವಹಿಸಿಲ್ಲ. ಹೀಗಾಗಿ ತಾವು ಖುದ್ದಾಗಿ ಬಂದು ಪರಿಶೀಲಿಸಿ ಕ್ರಮ ಜರಗಿಸಬೇಕು’ ಎಂದು ಮನವಿ ಮಾಡಿದರು.

ಬಳಿಕ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ್‌ ಅವರಿಗೆ ಮನವಿ ಸಲ್ಲಿಸಿದ ಸಾರ್ವಜನಿಕರು ವಾರ್ಡ್‌ನ ಬಾವಿಗಳ ನೀರು ಮತ್ತು ಸಾಮೂಹಿಕ ರಕ್ತ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಪುರಸಭಾ ಮಾಜಿ ಸದಸ್ಯರಾದ ವೇಂಕಟೇಶ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ಪ್ರಮುಖರಾದ ಶ್ರೀಧರ ನಾಯ್ಕ, ಶ್ರೀಕಾಂತ ನಾಯ್ಕ, ಈಶ್ವರ ನಾಯ್ಕ, ಗಣಪತಿ ನಾಯ್ಮ, ಮನಮೋಹನ ನಾಯ್ಕ, ಪ್ರಕಾಶ ನಾಯ್ಕ ಇದ್ದರು.

ತುರ್ತು ಕ್ರಮಕ್ಕೆ ತಹಶೀಲ್ದಾರ್‌ ಸೂಚನೆ

  ಜನರ ಮನವಿಗೆ ಸ್ಪಂದಿಸಿದ ತಹಶೀಲ್ದಾರ್‌ ನಾಗೇಂದ್ರ ಕೊಳಶೆಟ್ಟಿ ಅವರು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ್‌ ಜೊತೆ ಆಸರಕೇರಿ ವಾರ್ಡ್‌ಗೆ ತೆರಳಿ ಪರಿಶೀಲನೆ ನಡೆಸಿದರು. ಸಾರ್ವಜನಿಕರು ಒಳಚರಂಡಿ ಸೋರಿಕೆಯನ್ನು ತೋರಿಸಿಕೊಟ್ಟರು. ಕೂಡಲೇ ಸೂಕ್ತ ಕ್ರಮ ವಹಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ತಹಶೀಲ್ದಾರ ನಾಗೇಂದ್ರ ಅವರು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.