ADVERTISEMENT

ಭಟ್ಕಳ | ಪ್ರಯೋಜನಕ್ಕೆ ಬಾರದ ಜಲಸಂಗ್ರಹಾಗಾರ: ಬೇಸಿಗೆ ಆರಂಭದಲ್ಲೇ ನೀರಿಗೆ ಬರ

ಮೋಹನ ನಾಯ್ಕ
Published 6 ಮಾರ್ಚ್ 2025, 6:06 IST
Last Updated 6 ಮಾರ್ಚ್ 2025, 6:06 IST
ಭಟ್ಕಳದ ಮುಂಡಳ್ಳಿಯಲ್ಲಿ ನಿರ್ಮಿಸಿದ ಓವರ್‌ ಹೆಡ್‌ ಟ್ಯಾಂಕ್‌ ಸಾಂದರ್ಭಿಕ ಚಿತ್ರ
ಭಟ್ಕಳದ ಮುಂಡಳ್ಳಿಯಲ್ಲಿ ನಿರ್ಮಿಸಿದ ಓವರ್‌ ಹೆಡ್‌ ಟ್ಯಾಂಕ್‌ ಸಾಂದರ್ಭಿಕ ಚಿತ್ರ   

ಭಟ್ಕಳ: ಬಿಸಿಲು ಏರಿದಂತೆ ತಾಲ್ಲೂಕಿನಲ್ಲಿ ಕುಡಿಯವ ನೀರಿಗೂ ಬರ ಕಾಡತೊಡಗಿದೆ. ವಿವಿಧೆಡೆ ನಿರ್ಮಿಸಿದ ಮೇಲ್ಮಟ್ಟದ  ಜಲಸಂಗ್ರಹಾಗಾರಗಳು (ಓವರ್ ಹೆಡ್ ಟ್ಯಾಂಕ್) ಬಳಕೆಗೆ ಬಾರದ ಸ್ಥಿತಿಯಲ್ಲಿರುವ ದೂರುಗಳಿವೆ.

ತಾಲ್ಲೂಕಿನ ಹೆಜ್ಜಿಲು, ಹಾಡುವಳ್ಳಿ, ಬೆಳಕೆ, ಮುಂಡಳ್ಳಿ, ಬೈಲೂರು, ಮುರುಡೇಶ್ವರ, ಪುರವರ್ಗ ಹಾಗೂ ಯಲ್ವಡಿಕವೂರ ಸೇರಿದಂತೆ ಅಂದಾಜು 20 ಕಡೆ ನೀರು ಮೇಲ್ಮಟ್ಟದ ಜಲ ಸಂಗ್ರಹಾಗಾರವನ್ನು ಜಲಜೀವನ್ ಮಿಷನ್ ಯೋಜನೆಯಡಿ ಅಂದಾಜು ₹50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅವುಗಳಿಂದ ಸಮೀಪದ ಗ್ರಾಮಗಳ ಮನೆಗಳಿಗೆ ನಲ್ಲಿ ಸಂಪರ್ಕ ಕೂಡ ಒದಗಿಸಲಾಗಿದೆ. ಆದರೆ, ನೀರು ಪೂರೈಕೆ ಆಗುತ್ತಿಲ್ಲ ಎಂಬುದು ಜನರ ದೂರು.

‘ಗ್ರಾಮದಲ್ಲಿ ಎತ್ತರದ ನೀರಿನ ಟ್ಯಾಂಕ್ ನಿರ್ಮಿಸಿದ್ದರಿಂದ ಬೇಸಿಗೆಯಲ್ಲಿ ನೀರು ಪೂರೈಕೆಗೆ ಸಮಸ್ಯೆ ಬಾರದು ಎಂಬ ವಿಶ್ವಾಸವಿತ್ತು. ಆದರೆ, ಬೇಸಿಗೆ ಆರಂಭಕ್ಕು ಮುನ್ನವೇ ನೀರಿನ ಕೊರತೆ ಎದುರಾಗಿದೆ’ ಎನ್ನುತ್ತಾರೆ ಹೆಜ್ಜಿಲು ಗ್ರಾಮದ ನಾಗರಾಜ ಮರಾಠಿ.

ADVERTISEMENT

‘ಜಲಮೂಲ ಹುಡುಕುವ ಪೂರ್ವದಲ್ಲಿ ಮೇಲ್ಮಟ್ಟದ ಜಲಸಂಗ್ರಹಾಗಾರ ನಿರ್ಮಿಸಿ, ಪೈಪ್‍ಲೈನ್ ಸಂಪರ್ಕ ಒದಗಿಸಿದ್ದರು. ಜಲಮೂಲ ಸರಿಯಾಗಿ ದೊರೆಯದೆ ಕೊಳವೆಬಾವಿ ತೋಡಿ ನೋರು ಬರುತ್ತಿಲ್ಲ ಎಂಬ ಕಾರಣ ನೀಡಿ ಮರಳಿದ್ದಾರೆ. ಜನರ ತೆರಿಗೆಯ ಲಕ್ಷಾಂತರ ಮೊತ್ತ ಗುತ್ತಿಗೆದಾರರಿಗೆ ಆದಾಯವಾಗಿದೆಯೇ ಹೊರತು ಯೋಜನೆ ಜನರ ನೆರವಿಗೆ ಒದಗಿಲ್ಲ’ ಎಂದು ದೂರಿದರು.

‘ಯಲ್ವಡಿಕವೂರ, ಮುಂಡಳ್ಳಿ, ಬೈಲೂರು, ಶಿರಾಲಿ, ಬೆಳ್ಕೆ, ಕಾಯ್ಕಿಣಿ, ಹಾಗೂ ಮಾವಳ್ಳಿ ಭಾಗದಲ್ಲಿ ಬೇಸಿಗೆಯಲ್ಲಿ ನೀರಿನ ಬರ ಕಾಣಿಸುತ್ತದೆ. ಸರ್ಕಾರದ ಯೋಜನೆಯಡಿ ಈ ಭಾಗಗಳಲ್ಲಿ ಕೊಳವೆಬಾವಿ ಕೊರೆದು, ನೀರು ಸಂಗ್ರಹಕ್ಕೆ ಮೇಲ್ಮಟ್ಟದ ಜಲಸಂಗ್ರಹಾಗಾರ ನಿರ್ಮಿಸಲಾಗಿದೆ. ಬೇಸಿಗೆಯಲ್ಲಿ ಜನರ ಅವಶ್ಯಕತೆ ತಕ್ಕಷ್ಟು ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ಮಲ್ಲಪ್ಪ ಪ್ರತಿಕ್ರಿಯಿಸಿದರು.

ಹೊನ್ನಾವರದ ಶರಾವತಿ ನದಿ ನೀರನ್ನು ಭಟ್ಕಳಕ್ಕೆ ಪೂರೈಸುವ ಯೋಜನೆ ಕಾರ್ಯಗತಗೊಳಿಸುತ್ತಿದ್ದು ಕೆಲವು ತಾಂತ್ರಿಕ ತೊಂದರೆಯಿಂದ ಕಾಮಗಾರಿ ವಿಳಂಬವಾಗಿದೆ
ಮಂಕಾಳ ವೈದ್ಯ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.