ADVERTISEMENT

ಮಾರಿಕಾಂಬಾ ನಗರಕ್ಕೆ ನೀರಿನ ಸಮಸ್ಯೆ

ವಾರ್ಡ್ ನಂ.31ರ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2022, 16:22 IST
Last Updated 8 ಮಾರ್ಚ್ 2022, 16:22 IST
ಶಿರಸಿಯ ಮಾರಿಕಾಂಬಾ ನಗರದಲ್ಲಿ ಬಿಎಸ್ಎನ್ಎಲ್ ಸಂಸ್ಥೆಯ ಕಟ್ಟಡ ಬಳಕೆಯಾಗದ ಕಾರಣ ಸುತ್ತ ಗಿಡಗಂಟಿ ಬೆಳೆದುಕೊಂಡಿರುವುದು
ಶಿರಸಿಯ ಮಾರಿಕಾಂಬಾ ನಗರದಲ್ಲಿ ಬಿಎಸ್ಎನ್ಎಲ್ ಸಂಸ್ಥೆಯ ಕಟ್ಟಡ ಬಳಕೆಯಾಗದ ಕಾರಣ ಸುತ್ತ ಗಿಡಗಂಟಿ ಬೆಳೆದುಕೊಂಡಿರುವುದು   

ಶಿರಸಿ: ನಗರದ ವಾರ್ಡ್ ನಂ.31ರ ವ್ಯಾಪ್ತಿಯ ಮಾರಿಕಾಂಬಾ ನಗರ ಪ್ರದೇಶದಲ್ಲಿ ನಾಡಿನ ಶಕ್ತಿದೇವಿ ಮಾರಿಕಾಂಬಾ ದೇವಸ್ಥಾನವಿದೆ. ವಾರ್ಡ್ ಸದಸ್ಯರೇ ನಗರಸಭೆಯ ಅಧ್ಯಕ್ಷರೂ ಆಗಿದ್ದಾರೆ. ಆದರೂ ಇಲ್ಲಿ ಹಲವು ಸಮಸ್ಯೆಗಳು ಇನ್ನೂ ಜೀವಂತವಾಗಿದೆ.

ಮಾರಿಕಾಂಬಾ ನಗರ, ಅಟಲ್‍ಜಿ ನಗರ, ಚಲವಾದಿ ಗಲ್ಲಿ, ಮುಂತಾದ ಪ್ರದೇಶವನ್ನೊಳಗೊಂಡಿರುವ ಈ ವಾರ್ಡ್‍ನಲ್ಲಿ 900ಕ್ಕೂ ಹೆಚ್ಚು ಮನೆಗಳಿವೆ. ಸುಮಾರು 2 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ನಗರದಲ್ಲಿ ಎತ್ತರದ ಪ್ರದೇಶಗಳ ಪೈಕಿ ಈ ಭಾಗವೂ ಒಂದಾಗಿದ್ದರಿಂದ ಕುಡಿಯುವ ನೀರಿನ ಪೂರೈಕೆಯಲ್ಲಿ ಆಗಾಗ ಸಮಸ್ಯೆಗಳು ತಲೆದೋರುತ್ತಿವೆ.

ಅಟಲ್‍ಜಿ ನಗರದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ ಎಂಬುದು ಜನರ ದೂರು. ರಸ್ತೆಯ ಒಂದು ಬದಿಯಲ್ಲಿ ಚರಂಡಿ ಇದ್ದರೆ, ಇನ್ನೊಂದು ಬದಿಯಲ್ಲಿ ಈವರೆಗೂ ಕಾಲುವೆ ನಿರ್ಮಿಸಿಲ್ಲ. ಪ್ರತಿಬಾರಿ ದೂರು ನೀಡಿ ಸೋತಿದ್ದೇವೆ ಎನ್ನುತ್ತಾರೆ ಸ್ಥಳೀಯರು.

ADVERTISEMENT

‘ವಾರ್ಡ್ ವ್ಯಾಪ್ತಿಯಲ್ಲಿ ಇನ್ನೂ ಕೆಲವು ರಸ್ತೆಗಳು ಸುಧಾರಣೆ ಕಾಣಬೇಕಿದೆ. ಬೇಸಿಗೆಯ ಆರಂಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚು ತಲೆದೋರುತ್ತದೆ. ಬಿಎಸ್ಎನ್ಎಲ್ ಸಂಸ್ಥೆಗೆ ಸೇರಿದ ಕಟ್ಟಡಗಳು ಪಾಳುಬಿದ್ದಿವೆ. ಇಲ್ಲಿ ಗಿಡಗಂಟಿಗಳು ಬೆಳೆದುಕೊಂಡಿದ್ದು ಸರಿಸೃಪಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ’ ಎನ್ನುತ್ತಾರೆ ಅಟಲ್‍ಜಿ ನಗರದ ರಾಮಚಂದ್ರ ಕಿಣಿ.

‘ಚಲವಾದಿ ಗಲ್ಲಿ ಭಾಗದಲ್ಲಿ ಚರಂಡಿಗಳ ಸುಧಾರಣೆಯಾಗಬೇಕು. ಜನರಿಗೆ ಅಗತ್ಯ ಪ್ರಮಾಣದ ನೀರು ಒದಗಿಸುವ ಕೆಲಸವಾಗಬೇಕು’ ಎಂಬುದು ಮಹಾದೇವ ಚಲವಾದಿ ಅವರ ಆಗ್ರಹ.

‘ವಾರ್ಡ್ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಈಚೆಗೆ ಹತ್ತಕ್ಕೂ ಹೆಚ್ಚು ರಸ್ತೆಗಳನ್ನು ನಿರ್ಮಿಸಲಾಗಿದೆ. ಕೆಲವು ರಸ್ತೆಗಳಿಗೆ ಮರುಡಾಂಬರೀಕರಣ ಮಾಡಿಸಲಾಗಿದೆ. ಚರಂಡಿಗಳ ನಿರ್ಮಾಣಕ್ಕೂ ಒತ್ತು ನೀಡಲಾಗಿದೆ. ಜನರ ಸಮಸ್ಯೆಗಳಿಗೆ ಆದ್ಯತೆ ಮೇರೆಗೆ ಸ್ಪಂದಿಸಲಾಗುತ್ತಿದೆ’ ಎನ್ನುತ್ತಾರೆ ವಾರ್ಡ್ ಸದಸ್ಯರೂ ಆಗಿರುವ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ.

ಜಲಸಂಗ್ರಹಾಗಾರ ಸ್ಥಾಪನೆಗೆ ಯತ್ನ:

‘ವಾರ್ಡ್ ನಂ.31ರ ವ್ಯಾಪ್ತಿಯ ಹಲವು ಪ್ರದೇಶಗಳು ಎತ್ತರದಲ್ಲಿರುವುದರಿಂದ ಕುಡಿಯುವ ನೀರು ಸರಬರಾಜು ಸಮಸ್ಯೆ ಆಗುತ್ತಿದೆ. ಈ ಸಮಸ್ಯೆ ಹೋಗಲಾಡಿಸಲು ಮಾರಿಕಾಂಬಾ ನಗರ ಅಥವಾ ಅಟಲ್‍ಜಿ ನಗರದಲ್ಲಿ ಮೇಲ್ಮಟ್ಟದ ಜಲಸಂಗ್ರಹಾಗಾರ ಸ್ಥಾಪನೆಗೆ ಪ್ರಯತ್ನಿಸಲಾಗುತ್ತಿದೆ’ ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಹೇಳಿದರು.

‘ಬಿಎಸ್ಎನ್ಎಲ್ ಸಂಸ್ಥೆಗೆ ಸೇರಿದ ಜಾಗ ಬಳಕೆಗೆ ಬಾರದೆ ವ್ಯರ್ಥವಾಗುತ್ತಿದೆ. ಇಲ್ಲಿ ಕನಿಷ್ಠ 2 ಗುಂಟೆ ಒದಗಿಸುವಂತೆ ಸಂಸದರು, ವಿಧಾನಸಭಾ ಅಧ್ಯಕ್ಷರಿಗೆ ಮನವಿ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.