ADVERTISEMENT

ಶಿರಸಿ: ವನ ನಿರ್ಮಾಣಕ್ಕೆ ಚಾಲನೆ, ಮಾರಿಕಾಂಬಾ ದೇವಿಯ ಭಕ್ತ ಸಮೂಹದ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 15:21 IST
Last Updated 27 ಜುಲೈ 2020, 15:21 IST
ಶಿರಸಿ ತಾಲ್ಲೂಕಿನ ಎಸಳೆಯಲ್ಲಿ ಮಾರಿಕಾಂಬಾ ವನ ನಿರ್ಮಾಣವಾಗಲಿರುವ ಜಾಗ
ಶಿರಸಿ ತಾಲ್ಲೂಕಿನ ಎಸಳೆಯಲ್ಲಿ ಮಾರಿಕಾಂಬಾ ವನ ನಿರ್ಮಾಣವಾಗಲಿರುವ ಜಾಗ   

ಶಿರಸಿ: ಜನರ ಬಹುವರ್ಷಗಳ ನಿರೀಕ್ಷೆಯಾಗಿದ್ದ ನಾಡದೇವಿ ಮಾರಿಕಾಂಬೆಯ ಹೆಸರಿನಲ್ಲಿ ವನ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ತಾಲ್ಲೂಕಿನ ಎಸಳೆಯಲ್ಲಿ ಜುಲೈ 28ರಂದು ಸಸಿ ನೆಡುವ ಮೂಲಕ ‘ಮಾರಿಕಾಂಬಾ ವನ’ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ.

ಅರಣ್ಯ ಇಲಾಖೆ, ಮಾರಿಕಾಂಬಾ ದೇವಾಲಯದ ಧರ್ಮದರ್ಶಿ ಮಂಡಳಿ, ಬಾಬುದಾರು, ಸಮಗ್ರ ವಿಕಾಸ ಟ್ರಸ್ಟ್ ಹಾಗೂ ಲಂಡಕನಹಳ್ಳಿ ಗ್ರಾಮ ಅರಣ್ಯ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

‘ಎರಡು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ಜಾತ್ರೆಯ ವೇಳೆ ದೇವಿಯ ರಥ ಕಟ್ಟಲು ಮರ ಕಡಿಯಬೇಕಾಗುತ್ತದೆ. ಕಳೆದ ಮಾರ್ಚ್‌ನಲ್ಲಿ ನಡೆದ ಜಾತ್ರೆಯ ವೇಳೆ ಮರ ಕಡಿಯಲು ಸಮಸ್ಯೆಯಾಯಿತು. ಬರುವ ವರ್ಷಗಳಲ್ಲಿ ಈ ಸಮಸ್ಯೆ ಆಗಬಾರದೆಂಬ ಉದ್ದೇಶದಿಂದ, ರಥಕ್ಕೆ ಮರ ಕಡಿಯುವ ಎಸಳೆ ಊರಿನಲ್ಲೇ ವನ ನಿರ್ಮಾಣಕ್ಕೆ ಮುಂದಾಗಿದ್ದೇವೆ’ ಎಂದು ಗ್ರಾಮ ಅರಣ್ಯ ಸಮಿತಿ ಸದಸ್ಯರೂ ಆಗಿರುವ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ಎಸಳೆ ತಿಳಿಸಿದರು.

ADVERTISEMENT

ಅರಣ್ಯ ಇಲಾಖೆಯ ಐದು ಎಕರೆ ಜಾಗದಲ್ಲಿ 100ಕ್ಕೂ ಹೆಚ್ಚು ಸಸಿ ನಾಟಿ ಮಾಡಲಾಗುತ್ತದೆ. ರಥಕ್ಕೆ ಬಳಸುವ ತಾರೆ, ನಂದಿ, ಹೊನಲು ಜಾತಿಯ ಸಸಿಗಳಿಗೆ ಆದ್ಯತೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಧಾರ್ಮಿಕ ವನಗಳನ್ನು ಇಲ್ಲಿ ಬೆಳೆಸಲಾಗುವುದು ಎಂದು ತಿಳಿಸಿದರು.

‘ಸದ್ಯ ಸಾಂಕೇತಿಕವಾಗಿ ವನ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತದೆ. ವನ ನಿರ್ಮಾಣಕ್ಕೆ 100 ಎಕರೆಯಷ್ಟು ಜಾಗ ನೀಡುವಂತೆ ಅರಣ್ಯ ಇಲಾಖೆಯನ್ನು ವಿನಂತಿಸಲಾಗುವುದು. ಧಾರ್ಮಿಕ ಪರಿಕಲ್ಪನೆಯಲ್ಲಿ ನೈಸರ್ಗಿಕ ಅರಣ್ಯ ಬೆಳೆಸುವ ಆಶಯ ಹೊಂದಲಾಗಿದೆ. ಮೇವು, ಹಣ್ಣಿನ ಗಿಡಗಳನ್ನೊಳಗೊಂಡು ದೇವಿಯ ವನ ರಚಿಸಿದರೆ, ಪ್ರಾಣಿ–ಪಕ್ಷಿಗಳು, ದನಕರುಗಳಿಗೆ ಅನುಕೂಲವಾಗುತ್ತದೆ’ ಎಂದು ದೇವಾಲಯದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ. ವೆಂಕಟೇಶ ನಾಯ್ಕ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.