ADVERTISEMENT

ಕ್ಷೇತ್ರದ 10 ಸಾವಿರ ಜನರಿಗೆ ಉದ್ಯೋಗ: ಸಚಿವ ಮಂಕಾಳ ವೈದ್ಯ

ನೀಡಲು ಜಾಗ ಖರೀದಿ :ಸಚಿವ ಮಂಕಾಳ ವೈದ್ಯ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 3:04 IST
Last Updated 13 ಅಕ್ಟೋಬರ್ 2025, 3:04 IST
ಭಟ್ಕಳದ ಬೈಲೂರಿನ ಮೋದಕಪ್ರಿಯದಲ್ಲಿ ನಡೆದ ತಾಲ್ಲೂಕು ಮಟ್ಟದ ಕಾಂಗ್ರೆಸ್ ಮಹಿಳಾ ಸಮಾವೇಶವನ್ನು ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು
ಭಟ್ಕಳದ ಬೈಲೂರಿನ ಮೋದಕಪ್ರಿಯದಲ್ಲಿ ನಡೆದ ತಾಲ್ಲೂಕು ಮಟ್ಟದ ಕಾಂಗ್ರೆಸ್ ಮಹಿಳಾ ಸಮಾವೇಶವನ್ನು ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು   

ಭಟ್ಕಳ: ‘ನನ್ನ ಕ್ಷೇತ್ರದಲ್ಲಿ ಸುಮಾರು ಹತ್ತು ಸಾವಿರ ಜನರಿಗೆ ಉದ್ಯೋಗ ಕೊಡುವ ಉದ್ದೇಶವನ್ನು ಹೊಂದಿದ್ದು, ಅದಕ್ಕಾಗಿ ಈಗಾಗಲೇ ಜಾಗ ಖರೀದಿ ಮಾಡಿದ್ದೇನೆ’ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಇಲ್ಲಿನ ಬಲ್ಸೆಯ ಮೋದಕಪ್ರಿಯ ಆವರಣದಲ್ಲಿ ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಬೀನಾ ವೈದ್ಯ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ತಾಲ್ಲೂಕು ಮಹಿಳಾ ಸಮಾವೇಶವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜು ಸೇರಿದಂತೆ ಮೆಡಿಕಲ್ ಹಬ್ ನಿರ್ಮಾಣಕ್ಕಾಗಿ ಸರ್ಕಾರದ ನಿಯಮಾವಳಿಯಂತೆ 30 ಎಕರೆ ಜಾಗ ಕೇಳಿದ್ದೇನೆ. ಅದಕ್ಕೂ ಅಪಸ್ವರ ಎತ್ತಿದವರಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಜನತೆಯೇ ಉತ್ತರ ಕೊಡಲಿದ್ದಾರೆ’ ಎಂದರು.

ADVERTISEMENT

‘ರಾಜಕೀಯವನ್ನು ನಾನು ಉದ್ಯೋಗವನ್ನಾಗಿ ಮಾಡಿಕೊಂಡಿಲ್ಲ, ನನ್ನ ಸಂಪಾದನೆಗೆ ನನ್ನದೇ ಆದ ಉದ್ಯೋಗ, ವ್ಯಾಪಾರ ವಹಿವಾಟುಗಳಿವೆ. ನಾನು ಪ್ರಾಮಾಣಿಕವಾಗಿ ತೆರಿಗೆ ಕಟ್ಟಿ ಬಂದವನು. ಹಣ ಮಾಡುವುದಿದ್ದರೆ ಅದಕ್ಕೆ ಬೇರೆಯದೇ ದಾರಿ ಇತ್ತು’ ಎಂದು ಪರೋಕ್ಷವಾಗಿ ಟೀಕಾಕಾರರಿಗೆ ಉತ್ತರ ನೀಡಿದರು.

‘ಈಗಾಗಲೇ ಅನಂತವಾಡಿಯಲ್ಲಿ 10 ಎಕರೆ ಜಾಗ ತೆಗೆದುಕೊಂಡು ದೊಡ್ಡದಾದ ಗಾರ್ಮೆಂಟ್ಸ್ ಫ್ಯಾಕ್ಟರಿ ಮಾಡಲು ಮುಂದಾಗಿದ್ದೇನೆ. ಎಲ್ಲವೂ ಸರಿಯಾಗಿ ನಡೆದರೆ ಇನ್ನೊಂದು ವರ್ಷದಲ್ಲಿ ಉದ್ಘಾಟನೆಗೆ ಸಜ್ಜಾಗಲಿದೆ. ಅದರಲ್ಲಿ 10 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ’ ಎಂದರು.

ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಹಾಗೂ ಆಡಳಿತ ನಿರ್ದೇಶಕಿ ಪುಷ್ಪಲತಾ ವೈದ್ಯ, ಭಟ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಗೇಶ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜು ನಾಯ್ಕ ಕೊಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಲ್ಬರ್ಟ ಡಿಕೋಸ್ತ, ಮಾಜಿ ಸದಸ್ಯೆ ಸಿಂಧು ಭಾಸ್ಕರ ನಾಯ್ಕ ಮಾತನಾಡಿದರು. ಬೈಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಾ ನಾಯ್ಕ, ಮೋಹಿನಿ ಗೊಂಡ, ಸಾರಾ ಫರ್ಜಾನಾ, ಲಕ್ಷಾವತಿ, ಉಷಾ ನಾಯ್ಕ ಮಂಕಿ, ನಾಗರತ್ನಾ ಪಡಿಯಾರ್ ಇದ್ದರು.

ಭಟ್ಕಳದಲ್ಲಿ ಮಹಿಳಾ ಕಾಂಗ್ರೆಸ್ ಬಲಪಡಿಸುವ ಉದ್ದೇಶ ಹಾಗೂ ಮಹಿಳೆಯರು ಸಮಾಜದಲ್ಲಿ ಮುಂದೆ ಬರಲು ವೇದಿಕೆ ಅಗತ್ಯ ಇರುವುದನ್ನು ಮನಗಂಡು ಸಮಾವೇಶ ಹಮ್ಮಿಕೊಳ್ಳಲಾಗಿದೆ
ಬೀನಾ ವೈದ್ಯ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.