ADVERTISEMENT

ಮಹಿಳೆ ಮೇಲಿನ ದೌರ್ಜನ್ಯ: ಅಪರಾಧ ಪ್ರಕರಣ ದಾಖಲಿಸಲು ಒತ್ತಾಯ

ಪೊಲೀಸ್ ಇಲಾಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಮೇ 2019, 10:47 IST
Last Updated 22 ಮೇ 2019, 10:47 IST
ರವೀಂದ್ರ ನಾಯ್ಕ ಅವರು ಡಿವೈಎಸ್ಪಿ ಭಾಸ್ಕರ ವಿ.ಬಿ ಅವರ ಜತೆ ಚರ್ಚಿಸಿದರು
ರವೀಂದ್ರ ನಾಯ್ಕ ಅವರು ಡಿವೈಎಸ್ಪಿ ಭಾಸ್ಕರ ವಿ.ಬಿ ಅವರ ಜತೆ ಚರ್ಚಿಸಿದರು   

ಶಿರಸಿ: ಕಾನಸೂರು ಬಳಿಯ ಬಾಳೆಕೈ ನಿವಾಸಿ ಗೀತಾ ನಾಯ್ಕ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯ ನಡೆಸಿದ ಬಗ್ಗೆ ಲಿಖಿತ ದೂರು ನೀಡಿ ಎರಡು ದಿನ ಕಳೆದರೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ.‌ ಬದಲಿಗೆ ಅರಣ್ಯ ಅಧಿಕಾರಿಗಳ ಪರ ವಕಾಲತ್ತು ವಹಿಸುತ್ತಿದೆ ಎಂದು ಆರೋಪಿಸಿದ ಜಿಲ್ಲಾ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಅವರು, ಡಿವೈಎಸ್ಪಿ ಭಾಸ್ಕರ ವಿ.ಬಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಗೀತಾ ಅವರ ಸಂಬಂಧಿಗಳೊಡನೆ ಬುಧವಾರ ಡಿವೈಎಸ್ಪಿ ಕಚೇರಿಗೆ ಭೇಟಿ ನೀಡಿದ ಅವರು, ಆರೋಪಿತರ ಮೇಲೆ ಪ್ರಕರಣ ದಾಖಲಿಸದಿದ್ದರೆ, ಮೇ 40ರಂದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಗೀತಾ ನಾಯ್ಕ ಅಕ್ರಮವಾಗಿ ಮನೆ ಕಟ್ಟುತ್ತಿದ್ದಾರೆ ಎಂದು ಆರೋಪಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಆಕೆಯನ್ನು ಬಂಧಿಸಿ, ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗೀತಾ ನಾಯ್ಕ ಸಹೋದರ ರಾಜು ನಾಯ್ಕ ಘಟನೆ ನಡೆದ ದಿನವೇ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಡಿವೈಎಸ್ಪಿ ಕಚೇರಿಗೆ ದೂರು ಸಲ್ಲಿಸಿದ್ದರು. ಎರಡು ದಿನಗಳಾದರೂ ಯಾವುದೇ ಕ್ರಮ ಆಗಿಲ್ಲ ಎಂದು ರವಿ ನಾಯ್ಕ ಆಕ್ಷೇಪಿಸಿದರು.

ಅನುಮತಿಯಿಲ್ಲದೇ ಮನೆಗೆ ನುಗ್ಗಿ ಗೀತಾ ಅವರನ್ನು ಕರೆದುಕೊಂಡು ಬಂದಿದ್ದಾರೆ. ಕುಡಿಯಲು ನೀರೂ ನೀಡದೇ, ಶೌಚಾಲಯಕ್ಕೂ ತೆರಳಲು ಬಿಡದೇ ಹಿಂಸೆ ನೀಡಿದ್ದಾರೆ. ‌ಮನೆಗೆ ನುಗ್ಗಿದ ಸಿಬ್ಬಂದಿಯನ್ನು ಕರೆಸಿ ವಿಚಾರಣೆ ನಡೆಸುವ ಬದಲಾಗಿ ಹಿರಿಯ ಅಧಿಕಾರಿಗಳನ್ನು ಕರೆಯಿಸಿ ಕೈ ಕುಲುಕಿರುವುದು ಪೊಲೀಸರೂ ಸಹ ಅರಣ್ಯ ಇಲಾಖೆಯ ಜೊತೆಯಲ್ಲಿ ಶಾಮೀಲು ಆಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರಿಂದ ಹೆಣ್ಣು ಮಗಳ ತೊಂದರೆಗೆ ಕಿಮ್ಮತ್ತಿಲ್ಲ ಎನ್ನುವಂತಾಗಿದೆ. ಎರಡೂ ಇಲಾಖೆಯವರು ಈ ವಿಷಯದಲ್ಲಿ ವಿಫಲರಾಗಿದ್ದಾರೆ. ಇದೊಂದು ಕ್ರಿಮಿನಲ್ ಪ್ರಕರಣವಾಗಿದ್ದು, ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ADVERTISEMENT

ದೌರ್ಜನ್ಯ ನಡೆಸಿದವರನ್ನು ಅಮಾನತುಗೊಳಿಸುವ ತನಕ ಹೋರಾಟ ನಡೆಸಲಾಗುತ್ತದೆ. ಮೇ 24ರಂದು ಡಿಸಿಎಫ್ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು. ನೂರಾರು ಮರ ಕಡಿದವರಿಗೆ ವಿಶೇಷ ಬೇಲ್ ನೀಡಲು ಆಗುತ್ತದೆ. ಹಿರಿಯ ಕಾಲದಲ್ಲಿ ಅತಿಕ್ರಮಣ ಮಾಡಿದ್ದ ಭೂಮಿಯಲ್ಲಿ ಮನೆ ದುರಸ್ತಿಗೊಳಿಸುತ್ತಿದ್ದ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಸಿಪಿಐ ಬಿ.ಗಿರೀಶ ಇದ್ದರು.

* ಸಿದ್ದಾಪುರ ಸಿಪಿಐಗೆ ಪ್ರಕರಣದ ಬಗ್ಗೆ ತಿಳಿಸಲಾಗಿದೆ. ಪೊಲೀಸ್ ಇಲಾಖೆ ಯಾರೊಂದಿಗೂ ಶಾಮೀಲಾಗಿಲ್ಲ. ಪ್ರಕರಣದ ಬಗ್ಗೆ ಕೂಲಂಕಷ ಮಾಹಿತಿ ನಡೆದು ನ್ಯಾಯ ನೀಡಲಾಗುವುದು
-ಭಾಸ್ಕರ ವಿ.ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.