ಹಳಿಯಾಳ: ಸರ್ಕಾರಿ ಆಸ್ತಿಗಳ ಸಂರಕ್ಷಣೆ ಮಾಡುವುದು ಅಧಿಕಾರಿಗಳ ಜವಾಬ್ದಾರಿ. ಪಂಚಾಯಿತಿ ವ್ಯಾಪ್ತಿಯಲ್ಲಿ ಗಾಂವಟಾಣಾ ಮತ್ತಿತ್ತರ ಭಾಗದಲ್ಲಿ ಅತಿಕ್ರಮಣ ಮಾಡಿದ್ದಲ್ಲಿ ಕೂಡಲೇ ತೆರವುಗೊಳಿಸಿ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ.ದೇಶಪಾಂಡೆ ಸೂಚನೆ ನೀಡಿದರು.
ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಳಿಯಾಳ, ದಾಂಡೇಲಿಯಲ್ಲಿಯ ಮಳೆ, ಬೆಳೆ ಹಾನಿ, ಕುರಿತು ಗುರುವಾರ ನಡೆದ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
‘ಈಚೆಗೆ ಸರ್ಕಾರಿ ಜಾಗದಲ್ಲಿ ಅತಿಕ್ರಮಣ ಹೆಚ್ಚಾಗುತ್ತಿದ್ದು, ಕೆಲವು ಇಲಾಖೆ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಭಾಗಿಯಾಗುತ್ತಿದ್ದಾರೆ ಎಂಬ ಆರೋಪಗಳಿವೆ. ಹೀಗೆ ಆದಲ್ಲಿ ಅಧಿಕಾರಿಗಳ ಮೇಲೆಯೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮದ್ನಳ್ಳಿ ಗ್ರಾಮದ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿಕ್ರಮಣವಾಗುತ್ತಿದೆ. ಕೂಡಲೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತೆರವುಗೊಳಿಸಿ’ ಎಂದರು.
ಹಳಿಯಾಳ ತಾಲ್ಲೂಕಿನಲ್ಲಿ ಈವರೆಗೆ 44.5 ಸೆಂ.ಮೀ, ದಾಂಡೇಲಿಯಲ್ಲಿ 64.5 ಸೆಂ.ಮೀ ಮಳೆಯಾಗಿದೆ. ಸಾಂಬ್ರಾಣಿ ಹೋಬಳಿ ಮಟ್ಟದಲ್ಲಿ ಕಡಿಮೆ ಮಳೆಯಾಗಿದೆ. ಕಬ್ಬು, ಭತ್ತ ಚೆನ್ನಾಗಿದ್ದು, ಅಧಿಕ ಮಳೆಯಿಂದ ಮೆಕ್ಕೆಜೋಳ ಸೇರಿದಂತೆ ಕೆಲ ಬೆಳೆಗೆ ಹಾನಿಯಾಗುವ ಸಂಭವವಿರುತ್ತದೆ. ಯೂರಿಯಾ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆಯಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಪಿ.ಐ.ಮಾನೆ ಹೇಳಿದರು.
ಏಪ್ರಿಲ್‌ನಿಂದ ಈವರೆಗೆ ಹಳಿಯಾಳ ತಾಲ್ಲೂಕಿನಲ್ಲಿ 150 ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದ್ದು, 19 ವಿದ್ಯುತ್ ಪರಿವರ್ತಕಗಳನ್ನು ಬದಲಾವಣೆ ಮಾಡಲಾಗಿದೆ . ದಾಂಡೇಲಿಯಲ್ಲಿ 5 ವಿದ್ಯುತ್ ಪರಿವರ್ತಕಗಳನ್ನು ಬದಲಾವಣೆ ಮಾಡಲಾಗಿದೆ. ಪ್ರತಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ’ ಎಂದು ಹೆಸ್ಕಾಂ ಅಧಿಕಾರಿ ತಿಳಿಸಿದರು.
ಹಳಿಯಾಳ ಹಾಗೂ ದಾಂಡೇಲಿ ತಾಲ್ಲೂಕಿನಲ್ಲಿ ಶಾಲೆಗಳಲ್ಲಿ ತೊಂದರೆ ಕಂಡು ಬಂದಲ್ಲಿ ದುರಸ್ತಿ ಮಾಡಿ. ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಮಕ್ಕಳ ಪಾಲಕರ ಸಹಾಯ ಪಡೆದು ಶಾಲೆ ಅಭಿವೃದ್ಧಿ ಕೈಗೊಳ್ಳಿ. ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ತಹಶೀಲ್ದಾರರು ತಾಲ್ಲೂಕಿನ ಎಲ್ಲ ಶಾಲೆಗಳಿಗೆ ಭೇಟಿ ನೀಡಿ ಶಾಲೆ ಸಮಸ್ಯೆಗಳನ್ನು ಕುರಿತು 15 ದಿನಗಳ ಒಳಗೆ ವರದಿ ಸಲ್ಲಿಸಿ’ ಎಂದು ಶಾಸಕರು ಆದೇಶಿಸಿದರು.
ಅಂಗನವಾಡಿ, ಶಾಲಾ ಕಟ್ಟಡ ಹಾಗೂ ನಿವೇಶನಗಳ ಕೊರತೆ ಇದ್ದಲ್ಲಿ ಕೂಡಲೇ ನಿವೇಶನಗಳ ಬಗ್ಗೆ ಆಯಾ ಗ್ರಾಮ ಪಂಚಾಯಿತಿ ಮತ್ತು ಪಟ್ಟಣದ ವಾರ್ಡ್‌ಗಳಲ್ಲಿ ಗುರುತಿಸಲು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಗೂ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ , ನಗರ ನೀರು ಸರಬರಾಜು ,ಗ್ರಾಮೀಣ ನೀರು ಸರಬರಾಜು, ಪಶು ಸಂಗೋಪನಾ ಇಲಾಖೆ ಮತ್ತಿತರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.
ಹಳಿಯಾಳ ತಹಶೀಲ್ದಾರ್ ಪ್ರವೀಣ ಹುಚ್ಚಣ್ಣವರ , ದಾಂಡೇಲಿ ತಹಶೀಲ್ದಾರ್ ಶೈಲೇಶ ಪರಮಾನಂದ ವಿವಿಧ ಇಲಾಖೆಯ ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.