ADVERTISEMENT

ಮಹಿಳೆ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಅತಿಕ್ರಮಣ ತೆರವಿಗೆ ಮುಂದಾದ ಅರಣ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 20 ಮೇ 2019, 15:33 IST
Last Updated 20 ಮೇ 2019, 15:33 IST
ರವೀಂದ್ರ ನಾಯ್ಕ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೀತಾ ನಾಯ್ಕ ಅವರ ಆರೋಗ್ಯ ವಿಚಾರಿಸಿದರು
ರವೀಂದ್ರ ನಾಯ್ಕ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೀತಾ ನಾಯ್ಕ ಅವರ ಆರೋಗ್ಯ ವಿಚಾರಿಸಿದರು   

ಶಿರಸಿ: ಅರಣ್ಯ ಭೂಮಿಯಲ್ಲಿದ್ದ ಹಳೆಯ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣ ಮಾಡುತ್ತಿದ್ದ ಮಹಿಳೆಗೆ ಅರಣ್ಯ ಇಲಾಖೆ ಸಿಬ್ಬಂದಿ, ತೊಂದರೆ ನೀಡಿದ ಪರಿಣಾಮ ಆ ಮಹಿಳೆ ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಾಲ್ಲೂಕಿನ ಗಡಿಭಾಗದ ಕಾನಸೂರು ಬಾಳೇಕೈ ನಿವಾಸಿ ಗೀತಾ ಗಣಪತಿ ನಾಯ್ಕ ಸೋಮವಾರ ಹಳೆಯ ಮನೆಯನ್ನು ಕೆಡವಿ, ಹೊಸ ಮನೆಯನ್ನು ಕಟ್ಟಲು ಸಿದ್ಧತೆ ನಡೆಸಿದ್ದರು. ಆ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ, ಆಕೆಯನ್ನು ಬಂಧಿಸಿ ಕರೆ ತಂದಿದ್ದಾರೆ. ಆಕೆಗೆ ಸರಿಯಾಗಿ ಊಟ–ತಿಂಡಿ ನೀಡದೇ, ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಗೀತಾ ಕುಟುಂಬಸ್ಥರು ತಿಳಿಸಿದ್ದಾರೆ.

‘ಗೀತಾ ಜ್ವರದಿಂದ ಬಳಲುತ್ತಿರುವುದನ್ನು ತಿಳಿಸಿದಾಗ, ಚಿಕಿತ್ಸೆ ಕೊಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಹಾರವಿಲ್ಲದೇ ಅಶಕ್ತಳಾಗಿದ್ದ ಗೀತಾ, ಮೆಟ್ಟಿಲಿನಿಂದ ಕೆಳಗೆ ಬಿದ್ದು, ಸೊಂಟ ಮತ್ತು ತಲೆಗೆ ಪೆಟ್ಟು ಮಾಡಿಕೊಂಡಿದ್ದಾಳೆ’ ಎಂದು ಅವರು ದೂರಿದ್ದಾರೆ.

ADVERTISEMENT

ರೋಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೀತಾ ಮಾತನಾಡಿ, ‘ಮಾವನ ಕಾಲದಿಂದಲೂ ಅತಿಕ್ರಮಣ ಮಾಡಿಕೊಂಡು ಬಂದಿರುವ ಜಾಗದಲ್ಲಿ ನಮ್ಮ ಮನೆಯಿದೆ. ಇಲ್ಲಿದ್ದ ಹಳೆಯ ಮನೆಯನ್ನು ತೆಗೆದು ಹೊಸ ಮನೆ ಕಟ್ಟಬೇಕೆಂದಿದ್ದೆವು. ಜ್ವರದಿಂದ ಬಳಲುತ್ತಿದ್ದ ನನಗೆ ಗುಳಿಗೆ ತೆಗೆದುಕೊಳ್ಳಲೂ ಸಮಯ ನೀಡಲಿಲ್ಲ. ಮಗನಿಗೆ ಕಾಲ್ ಮಾಡುವುದಾಗಿ ಹೇಳಿದರೂ ಅವಕಾಶ ಕೊಡದೇ ಕಳ್ಳರಂತೆ ನಡೆಸಿಕೊಂಡರು’ ಎಂದರು.

ಅರಣ್ಯ ಅತಿಕ್ರಮಣದಾರ ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ ಆಸ್ಪತ್ರೆಗೆ ಭೇಟಿ ನೀಡಿ ನ್ಯಾಯ ಒದಗಿಸುವ ಭರವಸೆ ನೀಡಿದರು. ಇಲಾಖೆಯ ಸಿಬ್ಬಂದಿ ಗೀತಾ ನಾಯ್ಕ ಜೊತೆಯಲ್ಲಿದ್ದು, ಚಿಕಿತ್ಸೆಯ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.