ಶಿರಸಿ: ಅಂಗನವಾಡಿ ಮೂಲಕ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ನೀಡುವ ಪೂರಕ ಪೌಷ್ಟಿಕ ಆಹಾರದ ಸಮರ್ಪಕ ವಿತರಣೆಗೆ ಫೇಸ್ ರೀಡಿಂಗ್ ಸಾಫ್ಟ್‌ವೇರ್ (ಎಫ್‍ಆರ್‌ಎಸ್) ತೀವ್ರ ತೊಡಕಾಗಿದೆ. ಹೀಗಾಗಿ ಹಲವೆಡೆ ಫಲಾನುಭವಿಗಳು ಪೌಷ್ಟಿಕ ಆಹಾರದಿಂದ ವಂಚಿತವಾಗುವ ಅಪಾಯ ಎದುರಾಗಿದೆ.
ಪೌಷ್ಟಿಕ ಆಹಾರ ತಯಾರಿಸಲು ಬೇಕಾದ ಬಹುತೇಕ ವಸ್ತುಗಳು ಅಂಗನವಾಡಿಯಿಂದ ಫಲಾನುಭವಿಗೆ ಸಿಗುತ್ತಿದೆ. ಆದರೆ ಇದೇ ವಸ್ತುಗಳನ್ನು ಪಡೆಯಲು ಫಲಾನುಭವಿ ಖುದ್ದಾಗಿ ಅಂಗನವಾಡಿಗೆ ಬಂದು ಫೋಟೋ ಗುರುತು ನೀಡಿ, ಒಟಿಪಿ ನೀಡಬೇಕೆಂಬ ನಿಯಮ ಕಡ್ಡಾಯ ಮಾಡಲಾಗಿದೆ. ಮಳೆ ಆರಂಭದೊಂದಿಗೆ ಅನೇಕ ಸಮಸ್ಯೆಗಳು ಉದ್ಭವಿಸಿವೆ.
‘ಭೌಗೋಳಿಕವಾಗಿ ಅರಣ್ಯ, ಗುಡ್ಡಗಾಡು ಹೊಂದಿರುವ ತಾಲ್ಲೂಕಿನಲ್ಲಿ ಅಂಗನವಾಡಿಗೆ ಬಂದು ಊಟ ಮಾಡಲು ಸಾಧ್ಯವಿಲ್ಲವೋ ಅಲ್ಲೆಲ್ಲ ಮೂಲ ವಸ್ತುಗಳನ್ನು ಮನೆಗೊಯ್ಯಲು ಅವಕಾಶ ನೀಡಲಾಗಿದೆ. ಆದರೆ ಫಲಾನುಭವಿ ಅಥವಾ ಮನೆಯವರು ಬಂದು ಕೊಂಡೊಯ್ಯಲು ಇದ್ದ ಅವಕಾಶ ರದ್ದುಪಡಿಸಿ, ಫಲಾನುಭವಿಯೇ ಬರಬೇಕೆಂಬ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಮಳೆ ಗಾಳಿಯ ವೇಳೆ ಅಂಗನವಾಡಿಗೆ ತೆರಳುವುದು ಕಷ್ಟವಾಗುತ್ತಿದೆ’ ಎಂದು ಫಲಾನುಭವಿಯೊಬ್ಬರು ದೂರಿದರು.
‘ಮಳೆಗಾಳಿಗೆ ವಿದ್ಯುತ್ ಕೈಕೊಟ್ಟು ಎದುರಾಗುವ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಎಫ್‌ಆರ್‌ಎಸ್ ಮೂಲಕ ಫೋಟೋ ತೆಗೆಯಲು ಕಷ್ಟವಾಗುತ್ತಿದೆ. ಅಂಗನವಾಡಿಗೆ ಬರಲಾಗದ ಗರ್ಭಿಣಿ, ಬಾಣಂತಿಯರು ಪೌಷ್ಟಿಕ ಆಹಾರ ಪಡೆಯಲು ತೀವ್ರ ತೊಂದರೆ ಅನುಭವಿಸುವಂತಾಗಿದೆ’ ಎಂದರು.
‘2025ರ ಮಾರ್ಚ್‌ನಲ್ಲಿ ಎಫ್ಆರ್‌ಎಸ್ ಅನುಷ್ಠಾನಕ್ಕೆ ಬಂದಿದ್ದು, ಆರಂಭದಲ್ಲಿ ಐಚ್ಛಿಕವಿದ್ದು, ಈಗ ಕಡ್ಡಾಯವಾಗಿದೆ. ಅದರಂತೆ ತಾಲ್ಲೂಕಿನಲ್ಲಿ 888 ಗರ್ಭಿಣಿಯರು, 933 ಬಾಣಂತಿಯರು ಖುದ್ದಾಗಿ ಬಂದು ಆಧಾರ್ ಒಟಿಪಿ ಪಡೆಯಬೇಕು. ಬಳಿಕ ಅವರ ಫೋಟೋ ತೆಗೆಯಲಾಗುತ್ತದೆ. ಕಣ್ ರೆಪ್ಪೆ ಮಿಟುಕಿಸುವ ಮೂಲಕ ಎಫ್ಆರ್‌ಎಸ್ ಪೂರ್ಣಗೊಂಡ ಮೇಲೆ ಪೂರಕ ಪೌಷ್ಟಿಕ ವಸ್ತುಗಳನ್ನು ಗ್ರಾಂ ಲೆಕ್ಕದಲ್ಲಿ ತೂಕ ಮಾಡಿ ನೀಡಬೇಕು. 3 ರಿಂದ 6 ವರ್ಷದೊಳಗಿನ 4,521 ಮಕ್ಕಳಿದ್ದಾರೆ. ಅವರಿಗೂ ಪುಷ್ಟಿ ಪೌಡರ್, ಬೆಲ್ಲದ ಹುಡಿ, ಸಕ್ಕರೆ, ಹಾಲಿನ ಹುಡಿ ನೀಡಲಾಗುತ್ತಿದ್ದು, ಇದನ್ನು ಪಡೆಯಲು ಕೂಡ ಮಗು ಇಲ್ಲವೇ ಪಾಲಕರು ಬಂದು ಎಫ್‌ಆರ್‌ಎಸ್ ಮಾಡಿಸಿಕೊಳ್ಳಬೇಕು’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಶಿರಸಿಕರ್ ತಿಳಿಸಿದರು.
ಗ್ರಾಂ ಲೆಕ್ಕದಲ್ಲಿ ವಸ್ತುಗಳನ್ನು ತೂಕ ಮಾಡಿಕೊಡುವುದೇ ಹರಸಾಹಸ. ಎಲ್ಲ ವಸ್ತುಗಳೂ ಕಿಟ್ ರೂಪದಲ್ಲಿ ಸಿಗುತ್ತಿದ್ದರೆ ಚೆನ್ನಾಗಿತ್ತು. ನೆಟ್‌ವರ್ಕ್ ಸಮಸ್ಯೆಯಿಂದ ಎಫ್ ಆರ್ ಎಸ್ ಸವಾಲಾಗಿದೆಹೆಸರು ಹೇಳಲಿಚ್ಛಿಸದ ಅಂಗನವಾಡಿ ಕಾರ್ಯಕರ್ತೆ
ಆಫ್‍ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು ಬಳಿಕ ನೆಟ್‍ವರ್ಕ್ ಇರುವ ಪ್ರದೇಶದಲ್ಲಿ ಸಿಂಕ್ ಮಾಡಲು ಅವಕಾಶ ಕಲ್ಪಿಸಲಾಗಿದೆವೀಣಾ ಶಿರಸಿಕರ ಶಿಶು ಅಭಿವೃದ್ಧಿ ಯೋಜನಾಧಿಕಾರಿ
ಕಿಟ್‌ನಲ್ಲಿ ಏನೇನಿವೆ?
‘ಗರ್ಭಿಣಿಯರು ಬಾಣಂತಿಯರಿಗೆ ನೀಡುವ ಕಿಟ್‌ನಲ್ಲಿ ಮೊಟ್ಟೆ ಅಕ್ಕಿ ತೊಗರಿಬೇಳೆ ಉಪ್ಪು ಎಣ್ಣೆ ಸೋಯಾ ಮಿಕ್ಸ್ ಸಾಂಬಾರು ಮಸಾಲೆ ಹೆಸರು ಕಾಳು ಕಡ್ಲೆ ಮೆಣಸು ಸಾಸಿವೆ ಬೆಲ್ಲ ಹಾಲಿನ ಹುಡಿ ಸಕ್ಕರೆ ಮಿಲ್ಲೆಟ್ ಲಡ್ಡು ನೀಡಲಾಗುತ್ತಿದೆ’ ಎಂದು ಅಂಗನವಾಡಿ ಕಾರ್ಯಕರ್ತರೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.