ಶಿರಸಿ: 2023-24ನೇ ಹಂಗಾಮಿಗೆ ಸಂಬಂಧಿಸಿದ ಹವಾಮಾನ ಆಧರಿತ ಬೆಳೆವಿಮೆ ಪರಿಹಾರದ ಮೊತ್ತ ಇಂದಿಗೂ ತಮಗೆ ಲಭಿಸದಿರುವ ಕಾರಣಕ್ಕೆ ರೈತರು 2025-26ನೇ ಹಂಗಾಮಿನ ಬೆಳೆ ವಿಮೆ ಕಂತು ಭರಣ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಹವಾಮಾನ ಆಧರಿತ ಬೆಳೆ ವಿಮೆ ಯೋಜನೆ ನಿರ್ವಹಣೆಯ ಟೆಂಡರ್ ಅನ್ನು 3 ವರ್ಷ ಅವಧಿಗಾಗಿ ಪಡೆದಿರುವ ಕ್ಷೇಮ ಇನ್ಸುರೆನ್ಸ್ ಕಂಪೆನಿ ಕಳೆದ ಡಿಸೆಂಬರ್ ಒಳಗಾಗಿಯೇ ರೈತರ ಖಾತೆಗೆ ಜಮಾ ಮಾಡಬೇಕಿದ್ದ 2023ನೇ ಸಾಲಿನ ಪರಿಹಾರ ಮೊತ್ತ ಇದುವರೆಗೂ ಜಮಾ ಮಾಡಿಲ್ಲ. ಇದರಿಂದ 2024-25ರ ವಿಮಾ ಪರಿಹಾರ ಪಾವತಿಸುತ್ತದೆಯೆ ಇಲ್ಲವೆ ಎಂಬ ಅನುಮಾನ ಹುಟ್ಟಿದೆ. ಕಂಪನಿ ಈ ಜಿಲ್ಲೆಯ ರೈತರಿಗೆ ಈ ಎರಡೂ ವರ್ಷದ ಮೊತ್ತ ಪಾವತಿಸಲು ಕನಿಷ್ಠವೆಂದರೂ ಅಂದಾಜು ₹150 ಕೋಟಿ ಬಿಡುಗಡೆಮಾಡಬೇಕು. 2023ನೇ ಸಾಲಿಗೆ ಸಂಬಂದಿಸಿ ಕೇಂದ್ರ ಸರ್ಕಾರದಿಂದ ಎರಡು ಬಾರಿ ಆದೇಶ, ಎಚ್ಚರಿಕೆಯ ತರುವಾಯವೂ ಕಂಪನಿ ಸಮಯ ಕೇಳಿ ಪಲಾಯನೋಪಾಯ ಮಾಡುತ್ತಿದೆ. ಇನ್ನು 2024ರ ಪರಿಹಾರ ನೀಡುತ್ತದೆಯೆ? ಎಂಬ ಶಂಕೆ ರೈತರದಾಗಿದ್ದು, 2025-26 ರ ವಿಮೆ ಕಂತು ಕಟ್ಟಿದರೆ ತಾವು ಭರಿಸಿದ ವಂತಿಗೆಯಷ್ಟೂ ವಾಪಸ್ ಸಿಗಲಾರದು, ಹಾಗಾಗಿ ವಿಮೆ ಇರಿಸುವುದಾದರೂ ಏತಕ್ಕೆ? ಎಂಬ ಪ್ರಶ್ನೆ ಎತ್ತಿದ್ದಾರೆ.
ಕಳೆದ ಮಳೆಗಾಲದ ಅವಧಿಯಲ್ಲಿ ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಕೃಷಿ ಬೆಳೆಗಳು ಹಾನಿಯಾಗಿದ್ದು, ಹವಾಮಾನ ಆಧರಿತ ಬೆಳೆ ವಿಮೆಯ ಮೇಲೆ ರೈತರು ಹೆಚ್ಚಿನ ಭರವಸೆ ಇಟ್ಟುಕೊಂಡಿದ್ದರು. ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿಯೇ ರೈತರ ಖಾತೆಗೆ ಪರಿಹಾರ ಹಣ ಜಮಾ ಆಗಬೇಕಿತ್ತಾದರೂ, ಮಳೆ ಮಾಪನ ಸರಿಯಾಗಿಲ್ಲ ಎಂಬ ಸಬೂಬು ನೀಡಿ, ವಿಮಾ ಕಂಪನಿ ರೈತರಿಗೆ ಪರಿಹಾರ ನೀಡಲು ಒಂದಿಲ್ಲೊಂದು ಕಾರಣವನ್ನು ಹೇಳುತ್ತ ಮುಂದೂಡುತ್ತಿದೆ. ವಿಮಾ ಪರಿಹಾರಕ್ಕೆ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಲ್ಲದೇ, ಸಹಕಾರಿ ಸಂಘದ ಪ್ರತಿನಿಧಿಗಳು ಮೇಲಿಂದ ಮೇಲೆ ಸಭೆ ನಡೆಸಿ, ವಿಮಾ ಕಂಪೆನಿ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು. ನಂತರ ವಿಮಾ ಕಂಪನಿ ಕೆಲವೇ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಮಾತ್ರ ಪರಿಹಾರದ ಹಣ ನೀಡಿ ಕೈತೊಳೆದುಕೊಂಡಿದೆ.
‘2024-25ರಲ್ಲಿ ಜಿಲ್ಲೆಯ ಒಟ್ಟೂ 194 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 41 ಸಾವಿರ ರೈತರು ಹವಾಮಾನ ಆಧರಿತ ಬೆಳೆ ವಿಮೆಗೆ ₹12.1 ಕೋಟಿ ಕಂತು ಪಾವತಿ ಮಾಡಿದ್ದರು. ಮಳೆಯಿಂದಾಗಿ ಈ ಪಂಚಾಯಿತಿಗಳಲ್ಲಿ ಬೆಳೆ ಹಾನಿ ತೀವ್ರವಾಗಿ, ಹವಾಮಾನ ಆಧರಿತ ಬೆಳೆ ವಿಮೆಯ ಮಾನದಂಡಗಳ ಪ್ರಕಾರ ಬೆಳೆ ವಿಮೆ ಪಡೆಯಲು ಅರ್ಹರಾಗಿದ್ದರು. ಆದರೆ, ವಿಮಾ ಕಂಪೆನಿಯು ಕೇವಲ 58 ಗ್ರಾಪಂ ವ್ಯಾಪ್ತಿಯ ರೈತರಿಗೆ ಒಟ್ಟೂ ₹10.59 ಕೋಟಿ ಮಾತ್ರ ಪರಿಹಾರ ವಿತರಿಸಿದೆ. ಇನ್ನೂ 136 ಗ್ರಾಪಂಗಳ ರೈತರಿಗೆ ಸುಮಾರು ₹78 ಕೋಟಿ ಪರಿಹಾರ ಬಿಡುಗಡೆ ಬಾಕಿ ಉಳಿದಿದೆ’ ಎಂಬುದು ತೋಟಗಾರಿಕಾ ಇಲಾಖೆ ಅಧಿಕಾರಿಯೊಬ್ಬರ ಮಾಹಿತಿ.
ವಿಮಾ ಅವಧಿ ಪ್ರತಿ ವರ್ಷ ಆಗಸ್ಟ್ 1ರಿಂದ ಜುಲೈ ಅಂತ್ಯದವರೆಗಿದೆ. ರೈತರ ಬೆಳೆ ಸಾಲ ಮರುಪಾವತಿ, ಹೊಸ ಬೆಳೆ ಸಾಲ ಮಂಜೂರಿಯ ದಿನಗಳು ಇದಾಗಿವೆ. ಹೀಗಾಗಿ, ಬೆಳೆ ಸಾಲ ನೀಡುವ ಸಹಕಾರಿ ಸಂಘಗಳು ಈ ಅವಧಿಯಲ್ಲೇ ರೈತರಿಂದ ಹವಾಮಾನ ಆಧರಿತ ಬೆಳೆ ವಿಮೆಯ ಕಂತು ಸಂಗ್ರಹಿಸಿಕೊಂಡು ಆಗಸ್ಟ್ ತಿಂಗಳಿನಲ್ಲಿ ವಿಮಾ ಕಂಪೆನಿಗೆ ತುಂಬುತ್ತಿದ್ದವು. ಆದರೆ, ಈ ವರ್ಷ ಬೆಳೆ ವಿಮೆ ತುಂಬಲು ರೈತರೂ ನಿರಾಸಕ್ತಿ ತೋರುತ್ತಿದ್ದಾರೆ. ಸಹಕಾರಿ ಸಂಘಗಳೂ ಪ್ರತಿ ವರ್ಷದಂತೆ ರೈತರಿಂದ ಕಂತು ಸಂಗ್ರಹಿಸಲು ಆಸಕ್ತಿ ತೋರುತ್ತಿಲ್ಲ. ಮಳೆ ಮಾಪನ ಕೇಂದ್ರಗಳ ದುರವಸ್ಥೆ, ವಿಮಾ ಕಂಪೆನಿಯ ರೈತ ನಿರ್ಲಕ್ಷ್ಯ ಧೋರಣೆ ಎಲ್ಲವೂ ವಿಮೆ ವ್ಯವಸ್ಥೆಗೆ ಜಿಲ್ಲೆಯಲ್ಲಿ ಸಮಸ್ಯೆ ಉಂಟುಮಾಡಿದೆ’ ಎಂಬುದು ರೈತ ದೇವೇಂದ್ರ ನಾಯ್ಕ ಮಾತಾಗಿದೆ.
ರಾಜ್ಯ ಸರ್ಕಾರದ ನಿರ್ವಹಣೆಯಲ್ಲಿರುವ ಗ್ರಾಪಂ ವ್ಯಾಪ್ತಿಯ ಮಳೆಮಾಪನ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ವಿಮಾ ಕಂಪೆನಿ ಹೇಳುತ್ತಿದೆ. ಒಟ್ಟಾರೆ 2025-26 ನೇ ಸಾಲಿನ ವಿಮಾ ಕಂತು ತುಂಬುವ ದಿನ ಸಮೀಪಿಸುತ್ತಿದ್ದರೂ 2 ವರ್ಷದ ಪರಿಹಾರ ಬಿಡುಗಡೆಗೆ ಬಾಕಿ ಉಳಿದ ಕಾರಣ ರೈತರು ವಿಮಾ ಕಂತು ಕಟ್ಟಲು ನಿರಾಸಕ್ತಿ ತೋರುತ್ತಿದ್ದಾರೆ. ಸದಾನಂದ ಹೆಗಡೆ ಕೃಷಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.