‘ಮಂಗನ ಕಾಯಿಲೆ’
ಹೊನ್ನಾವರ: ತಾಲ್ಲೂಕಿನ ಹಲವು ಭಾಗಗಳಲ್ಲಿ ಸಾಂಕ್ರಾಮಿಕ ಜ್ವರಗಳಿಂದ ಬಾಧಿತರಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿರುವುದು ಆರೋಗ್ಯ ಇಲಾಖೆ ಸಿಬ್ಬಂದಿಯ ನಿದ್ದೆಗೆಡಿಸಿದೆ.
‘ತಾಲ್ಲೂಕಿನಲ್ಲಿ ಮಂಗನ ಕಾಯಿಲೆಯಿಂದ (ಕೆಎಫ್‌ಡಿ) ನಾಲ್ಕು, ಡೆಂಗಿ ಕಾಯಿಲೆಯಿಂದ ಮೂವರು ಹಾಗೂ ಇಲಿಜ್ವರದಿಂದ ಓರ್ವರು ಬಳಲುತ್ತಿದ್ದಾರೆ. ಚಿಕ್ಕನಕೋಡ ಉಪ ಆರೋಗ್ಯ ಕೇಂದ್ರ ವ್ಯಾಪ್ತಿಯ ಚಿಕ್ಕೊಳ್ಳಿಯ ಇಬ್ಬರಲ್ಲಿ ಮಂಗನಕಾಯಿಲೆ ದೃಢಪಟ್ಟಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಜಲವಳ್ಳಿ ಗ್ರಾಮಸ್ಥರೊಬ್ಬರಿಗೆ ಇಲಿಜ್ವರ ದೃಢಪಟ್ಟಿದೆ’ ಎಂಬುದಾಗಿ ಆರೋಗ್ಯ ಇಲಾಖೆಯ ಮೂಲಗಳು ಖಚಿಪಡಿಸಿವೆ.
‘ಬೇಸಿಗೆಯ ತಾಪಮಾನದಲ್ಲಿ ತೀವ್ರ ಹೆಚ್ಚಳವಾಗಿದ್ದು, ಅರಣ್ಯ ಪ್ರದೇಶದಲ್ಲಿ ಮಂಗಗಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಚಿಕ್ಕೊಳ್ಳಿ, ಹಿರೇಬೈಲ್, ಹೊಸಾಡ, ನಗರಬಸ್ತಿಕೇರಿ ಮೊದಲಾದೆಡೆ ಮಂಗಗಳ ಕಳೇಬರ ಪತ್ತೆಯಾಗಿದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.
‘ಊರಿನಲ್ಲಿ ಕನಿಷ್ಠ ಐದು ಜನರು ಡೆಂಗಿ ಜ್ವರದಿಂದ ಬಳಲುತ್ತಿದ್ದು ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಜೊತೆಗೆ ಸಾಂಕ್ರಾಮಿಕ ರೋಗವಾದ ಸಿಡುಬು ಕೂಡ ಕಾಣಿಸಿಕೊಂಡಿದ್ದು ರೋಗದ ಬಾಧೆಗೆ ಜನರು ಹೈರಾಣಾಗಿದ್ದಾರೆ’ ಎಂದು ಕಡ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀಲ್ಕೋಡ ಗ್ರಾಮದ ಸೀತಾರಾಮ ಹೆಗಡೆ ಆತಂಕ ವ್ಯಕ್ತಪಡಿಸಿದರು.
‘ಜ್ವರ ಮತ್ತಿತರ ಸಾಂಕ್ರಾಮಿಕ ರೋಗದ ಕುರಿತು ಜನರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಮಾಹಿತಿ ನೀಡುತ್ತಿದ್ದೇವೆ. ಕೆಎಫ್‌ಡಿ ಪ್ರಕರಣಗಳ ಸಂಖ್ಯೆ ಏರುತ್ತಿರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಜನ ಹಾಗೂ ಜಾನುವಾರುಗಳು ಮಂಗಗಳ ಸಾವು ಕಂಡು ಬಂದ ಅರಣ್ಯ ಪ್ರದೇಶಕ್ಕೆ ಹೋಗಬಾರದು ಹಾಗೂ ಅನಿವಾರ್ಯ ಪ್ರಸಂಗದಲ್ಲಿ ಹೋಗುವ ಮುನ್ನ ಅಗತ್ಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಉಷಾ ಹಾಸ್ಯಗಾರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.