ADVERTISEMENT

ರೈತರ ಬೆಳೆ ಬೆಂಕಿಗೆ ಆಹುತಿ: ₹ 35 ಲಕ್ಷ ಹಾನಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 14:59 IST
Last Updated 17 ಏಪ್ರಿಲ್ 2019, 14:59 IST
ಶಿರಸಿ ತಾಲ್ಲೂಕಿನ ತಲ್ಲೀಮನೆಯಲ್ಲಿ ಸುಟ್ಟಿರುವ ಮನೆಯನ್ನು ತೋರಿಸಿದ ಗಜಾನನ ಹೆಗಡೆ
ಶಿರಸಿ ತಾಲ್ಲೂಕಿನ ತಲ್ಲೀಮನೆಯಲ್ಲಿ ಸುಟ್ಟಿರುವ ಮನೆಯನ್ನು ತೋರಿಸಿದ ಗಜಾನನ ಹೆಗಡೆ   

ಶಿರಸಿ: ತಾಲ್ಲೂಕಿನ ಹುಲೇಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಲ್ಲೀಮನೆಯಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಒಂದು ಮನೆ ಸಂಪೂರ್ಣ, ಇನ್ನೊಂದು ಮನೆ ಅರ್ಧದಷ್ಟು ಸುಟ್ಟಿದೆ. ಚೀಲದಲ್ಲಿ ತುಂಬಿಟ್ಟಿದ್ದ ಹಾಗೂ ಒಣಗಿಸಿಟ್ಟಿದ ಅಡಿಕೆ ಬೆಂಕಿಗೆ ಆಹುತಿಯಾಗಿದೆ. ₹ 35 ಲಕ್ಷ ಹಾನಿ ಅಂದಾಜಿಸಲಾಗಿದೆ.

ಗಜಾನನ ಮಹಾದೇವ ಹೆಗಡೆ ಅವರ ಇಡೀ ಮನೆ ಸುಟ್ಟುಕರಕಲಾಗಿದೆ. ಮನೆಯಲ್ಲಿದ್ದ 20 ಕ್ವಿಂಟಲ್ ಚಾಲಿ, 3 ಕ್ವಿಂಟಲ್ ಕೆಂಪಡಿಕೆ, 10 ಕೆ.ಜಿ ಸುಮಾರು ಕಾಳುಮೆಣಸು ಬೆಂಕಿಗೆ ಆಹುತಿಯಾಗಿದ್ದು, ಹಾನಿ ಅಂದಾಜು ₹ 15 ಲಕ್ಷದಷ್ಟಾಗಿದೆ.

ಗಣಪತಿ ಮಹಾಬಲೇಶ್ವರ ಹೆಗಡೆ ಅವರ ಮನೆಯ ಮೊದಲ ಮಹಡಿಯಲ್ಲಿ ಬೆಂಕಿ ಹೊತ್ತಿ ಉರಿದಿದೆ. ಅಲ್ಲಿದ್ದ 5 ಕ್ವಿಂಟಲ್ ಅಡಿಕೆ ಸುಟ್ಟಿದೆ. ₹ 20 ಲಕ್ಷ ನಷ್ಟವಾಗಿದೆ. ರಾತ್ರಿ 1.30ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಮನೆಯೊಳಗಿದ್ದ ಸಿಲೆಂಡರ್ ಅನ್ನು ಹೊರಕ್ಕೆ ತರಲಾಯಿತು. ಕೊಟ್ಟಿಗೆಯಲ್ಲಿದ್ದ ದನ–ಕರುಗಳನ್ನು ಬಿಟ್ಟು ರಕ್ಷಿಸಲಾಯಿತು. ಊರವರೆಲ್ಲ ಸೇರಿ ಸಾಲುಮನೆಯಗಳ ಕೇರಿಯಲ್ಲಿದ್ದ ಇನ್ನುಳಿದ ಮನೆಗಳಿಗೆ ಬೆಂಕಿ ವ್ಯಾಪಿಸದಂತೆ ತಡೆಯಲು ಪ್ರಯತ್ನಿಸಿದರು. ಊರವರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿ ಆರಿಸಲು ಯಶಸ್ವಿಯಾದರು. ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ನಿಂದ ಈ ಅನಾಹುತ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.