ADVERTISEMENT

ಅಗ್ನಿ ಅವಘಡ: ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿ ಹಾನಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 3:19 IST
Last Updated 8 ಡಿಸೆಂಬರ್ 2025, 3:19 IST
ಮುಂಡಗೋಡ ಪಟ್ಟಣದ ಬನ್ನಿಕಟ್ಟೆ ಸನಿಹ ಆಕಸ್ಮಿಕ ಬೆಂಕಿಯಿಂದ ಹಾನಿಯಾದ ಸಾಗವಾನಿ ಪೀಠೋಪಕರಣ ಅಡ್ಡೆಗೆ ಶಾಸಕ ಶಿವರಾಮ ಹೆಬ್ಬಾರ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು
ಮುಂಡಗೋಡ ಪಟ್ಟಣದ ಬನ್ನಿಕಟ್ಟೆ ಸನಿಹ ಆಕಸ್ಮಿಕ ಬೆಂಕಿಯಿಂದ ಹಾನಿಯಾದ ಸಾಗವಾನಿ ಪೀಠೋಪಕರಣ ಅಡ್ಡೆಗೆ ಶಾಸಕ ಶಿವರಾಮ ಹೆಬ್ಬಾರ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು   

ಮುಂಡಗೋಡ: ಪಟ್ಟಣದ ಖಾದರಲಿಂಗ ದೇವಸ್ಥಾನದ ಸನಿಹ, ಪೀಠೋಪಕರಣಗಳ ತಯಾರಿಕಾ ಅಡ್ಡೆಯಲ್ಲಿ ಭಾನುವಾರ ನಸುಕಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, ಲಕ್ಷಾಂತರ ರೂಪಾಯಿ ಮೌಲ್ಯದ ಸಾಗವಾನಿ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ.

ಇದೇ ಮಳಿಗೆಯ ಅಕ್ಕಪಕ್ಕದಲ್ಲಿದ್ದ ಎರಡು ಹಾರ್ಡವೇರ್‌ ಸಾಮಗ್ರಿಗಳ ದಾಸ್ತಾನು ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದ್ದರಿಂದ, ಅಪಾರ ಪ್ರಮಾಣದ ಸಾಮಗ್ರಿಗಳು ಸುಟ್ಟಿವೆ. ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ವ್ಯಾಪಾರಿಗಳಾದ ಯುನುಸ್‌, ಜಾಫರ್‌ ಹಾಗೂ ಆಯಾನ್‌ ಎಂಬುವರಿಗೆ ಸೇರಿದ ಮಳಿಗೆಗಳು ಹಾನಿಯಾಗಿವೆ. ಪೀಠೋಪಕರಣಗಳ ತಯಾರಿಕಾ ಅಡ್ಡೆಯಲ್ಲಿದ್ದ ಬೆಲೆಬಾಳುವ ಮಷಿನ್‌ಗಳು, ಸರಬರಾಜಿಗೆ ಸಿದ್ಧವಾಗಿದ್ದ ಪೀಠೋಪಕರಣಗಳು, ಸಂಗ್ರಹಿಸಿಟ್ಟಿದ್ದ ಸಾಗವಾನಿ ಕಟ್ಟಿಗೆ ಎಲ್ಲವೂ ಬೆಂಕಿಯಲ್ಲಿ ಸುಟ್ಟಿವೆ. ನಸುಕಿನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಸ್ಥಳೀಯರು ಆತಂಕಗೊಂಡು, ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಗಾಳಿಯ ಜೊತೆ ಬೆಂಕಿಯ ವೇಗ ಹೆಚ್ಚಾಗತೊಡಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ತೀವ್ರ ಪ್ರಯತ್ನ ನಡೆಸಿದರು. ಅಷ್ಟರಲ್ಲಿಯೇ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು.

ADVERTISEMENT

ಶಾಸಕ ಶಿವರಾಮ ಹೆಬ್ಬಾರ ಸ್ಥಳಕ್ಕೆ ಭೇಟಿ ನೀಡಿ, ಬೆಂಕಿಯಿಂದ ಹಾನಿಯಾಗಿರುವುದನ್ನು ಪರಿಶೀಲಿಸಿದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿ, ‘ಅಗ್ನಿ ಅವಘಡದಿಂದ ದೊಡ್ಡ ಪ್ರಮಾಣದ ಹಾನಿಯಾಗಿದೆ. ಬಡಕುಟುಂಬ ಇದರಿಂದ ತತ್ತರಿಸಿದೆ. ಸರ್ಕಾರದಿಂದ ಗರಿಷ್ಠ ಪ್ರಮಾಣದ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹಾನಿಯ ಪಂಚನಾಮೆ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇಂತಹ ಉದ್ಯೋಗ ಮಾಡುವವರು ವಿಮೆ ಮಾಡಿಸಿದ್ದರೆ, ಇಂತಹ ಸಮಯದಲ್ಲಿ ಅನುಕೂಲವಾಗುತ್ತಿತ್ತು. ಸರ್ಕಾರದಿಂದ ಸಿಗುವ ಪರಿಹಾರದಿಂದ ಪೂರ್ಣ ಪ್ರಮಾಣದಲ್ಲಿ ಹಾನಿಯನ್ನು ಭರಿಸಲು ಆಗುವುದಿಲ್ಲ. ಆದರೂ, ಸಾಧ್ಯವಾದ ಎಲ್ಲ ಪ್ರಯತ್ನ ಮಾಡಲಾಗುವುದುʼ ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ತಹಶೀಲ್ದಾರ್‌ ಶಂಕರ ಗೌಡಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಮಹ್ಮದಗೌಸ್‌ ಮಕಾನದಾರ, ರಜಾಖಾನ ಪಠಾಣ, ಮುಖಂಡರಾದ ರಫೀಕ್‌ ಇನಾಂದಾರ, ಉಪವಲಯ ಅರಣ್ಯಾಧಿಕಾರಿ ಅರುಣಕುಮಾರ ಕಾಶಿ, ಅಜ್ಜಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.