ADVERTISEMENT

ಕಾರವಾರ: 15 ವರ್ಷಗಳ ಬಳಿಕ ಅಧಿಕಾರ ಬದಲು

ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟದ ಚುನಾವಣೆಯಲ್ಲಿ ರಾಜು ತಾಂಡೇಲ ಬಣಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 16:07 IST
Last Updated 28 ಅಕ್ಟೋಬರ್ 2020, 16:07 IST
ಕಾರವಾರದಲ್ಲಿ ಬುಧವಾರ ನಡೆದ ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ರಾಜು ತಾಂಡೇಲ ಅವರನ್ನು ಬೆಂಬಲಿಗರು ಅಭಿನಂದಿಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಚೈತ್ರಾ ಕೊಠಾರಕರ ಚಿತ್ರದಲ್ಲಿದ್ದಾರೆ.
ಕಾರವಾರದಲ್ಲಿ ಬುಧವಾರ ನಡೆದ ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ರಾಜು ತಾಂಡೇಲ ಅವರನ್ನು ಬೆಂಬಲಿಗರು ಅಭಿನಂದಿಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಚೈತ್ರಾ ಕೊಠಾರಕರ ಚಿತ್ರದಲ್ಲಿದ್ದಾರೆ.   

ಕಾರವಾರ: ಜಿಲ್ಲೆಯಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟದ ಚುನಾವಣೆಯಲ್ಲಿ ಮುಖಂಡ ರಾಜು ತಾಂಡೇಲ ಅವರ ಬಣ ಗೆಲುವು ಸಾಧಿಸಿದೆ. ಈ ಮೂಲಕ 15 ವರ್ಷಗಳ ಬಳಿಕ ಒಕ್ಕೂಟದಲ್ಲಿ ಅಧಿಕಾರ ಬದಲಾವಣೆಯಾಗಿದೆ.

ಒಕ್ಕೂಟದಲ್ಲಿ ಒಟ್ಟು 15 ನಿರ್ದೇಶಕ ಸ್ಥಾನಗಳಿದ್ದು, ಆರರಲ್ಲಿ ಈಗಾಗಲೇ ಅವಿರೋಧ ಆಯ್ಕೆ ಮಾಡಲಾಗಿದೆ. ಪರಿಶಿಷ್ಟ ಪಂಗಡದ ಒಂದು ಸ್ಥಾನ, ‘ಕ’ ವರ್ಗದ ಹಿಂದುಳಿದ ‘ಬ’ ವರ್ಗದ ಒಂದು ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ. ಹಾಗಾಗಿ ಏಳು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು.

‘ಕ’ ವರ್ಗದ ಸಾಮಾನ್ಯ ಮತದಾರರ ಕ್ಷೇತ್ರದ ಮೂರು ಸ್ಥಾನಗಳಿಗೆ ಆರು ಮಂದಿ ಸ್ಪರ್ಧಿಸಿದ್ದರು. ಅವರಲ್ಲಿ ಪ್ರಸ್ತುತ ಅಧ್ಯಕ್ಷರಾಗಿರುವ ಗಣಪತಿ ಮಾಂಗ್ರೆ ಮತ್ತು ಚಿತ್ತಾಕುಲಾ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ ರಾಜು ತಾಂಡೇಲ ನಡುವೆ ಭಾರಿ ಪೈಪೋಟಿ ನಡೆದಿತ್ತು. ಬೆಳಿಗ್ಗೆ 11ಕ್ಕೆ ಚುನಾವಣಾ ಪ್ರಕ್ರಿಯೆಗಳು ಆರಂಭವಾಗುತ್ತಿದ್ದಂತೆ, ಮತದಾನ ಅವಕಾಶ ಹೊಂದಿರುವ ಸದಸ್ಯರು ತಮ್ಮ ಹಕ್ಕು ಚಲಾವಣೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಆಯ್ಕೆಯಾದವರು:

‘ಕ’ ವರ್ಗದ ಸಾಮಾನ್ಯ ವಿಭಾಗದಿಂದ ಚಿತ್ತಾಕುಲಾ ಸೀಬರ್ಡ್ ಕಾಲೊನಿಯ ರಾಜು ತಾಂಡೇಲ, ಬಿಣಗಾದ ವೆಂಕಟೇಶ ಈರಾ ಹರಿಕಂತ್ರ, ಕುಮಟಾದ ಬೀರಪ್ಪ ಈರಾ ಹರಿಕಂತ್ರ ಗೆಲುವು ಸಾಧಿಸಿದ್ದಾರೆ. ‘ಕ’ ವರ್ಗದ ಹಿಂದುಳಿದ ವರ್ಗ ‘ಅ’ ವಿಭಾಗದಿಂದ ಚಿತ್ತಾಕುಲಾದ ಸುಧಾಕರ ಚಾರಾ ಹರಿಕಂತ್ರ ಆಯ್ಕೆಯಾಗಿದ್ದಾರೆ.

ಕಾರವಾರ ತಾಲ್ಲೂಕಿನ ‘ಬ’ ವರ್ಗದ ಪ್ರತಿನಿಧಿಗಳಾಗಿ ದಿಲೀಪ ಹರಿಶ್ಚಂದ್ರ ಚಂಡೇಕರ್, ಶ್ರೀಧರ ಮಹಾಬಲೇಶ್ವರ ಹರಿಕಂತ್ರ ಹಾಗೂ ಕುಮಟಾ ತಾಲ್ಲೂಕಿನ ‘ಬ’ ವರ್ಗದ ಪ್ರತಿನಿಧಿಯಾಗಿ ಮಹೇಶ ನಾರಾಯಣ ಮೂಡಂಗಿ ಜಯ ಸಾಧಿಸಿದ್ದಾರೆ.

ಅವಿರೋಧ ಆಯ್ಕೆಯಾದವರು:

‘ಕ’ ವರ್ಗದ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಭಟ್ಕಳ ಬೆಳ್ವೆಯ ದಿವಾಕರ ದಾಸಿ ಮೊಗೇರ, ‘ಕ’ ವರ್ಗದ ಮಹಿಳಾ ಕ್ಷೇತ್ರದಿಂದ ಕಾರವಾರದ ಸವಿತಾ ನಿತಿನ್ ಗಾಂವ್ಕರ್ ಮತ್ತು ಆಶಾ ಶ್ರೀಧರ ಹರಿಕಂತ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

‘ಬ’ ವರ್ಗದ ಮೀನುಗಾರ ಸಹಕಾರ ಸಂಘದ ಮತದಾರರ ಕ್ಷೇತ್ರದಿಂದ ಅಳ್ವೆಕೋಡಿಯ ವಿಠ್ಠಲ ಶನಿಯಾರ ದೈಮನೆ, ಹೊನ್ನಾವರ ‘ಬ’ ವರ್ಗದ ಮೀನುಗಾರ ಸಹಕಾರ ಕ್ಷೇತ್ರದಿಂದ ಹೊನ್ನಾವರ ತಾಲ್ಲೂಕಿನ ಮಂಕಿಯ ಉಮೇಶ ಅಣ್ಣಪ್ಪ ಖಾರ್ವಿ, ಅಂಕೋಲಾ ‘ಬ’ ವರ್ಗದ ಮೀನುಗಾರ ಸಹಕಾರ ಕ್ಷೇತ್ರದಿಂದ ರಾಜು ತಿಮ್ಮಣ್ಣ ಹರಿಕಂತ್ರ ಆಯ್ಕೆಯಾಗಿದ್ದಾರೆ.

ಭಾರಿ ಭದ್ರತೆ:‌

ಒಕ್ಕೂಟದ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೊಬಸ್ತ್ ಒದಗಿಸಲಾಗಿತ್ತು. ಡಿವೈಎಸ್‌ಪಿ ಅರವಿಂದ ಕಲಗುಜ್ಜಿ, ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ ಶೆಟ್ಟಿ, ನಗರ ಠಾಣೆ ಇನ್‌ಸ್ಪೆಕ್ಟರ್ ಸಂತೋಶ ಕುಮಾರ್, ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್ ರೇವಣಸಿದ್ದಪ್ಪ ಹಾಗೂ ಪೊಲೀಸ್ ಸಿಬ್ಬಂದಿ ಬೆಳಿಗ್ಗೆಯಿಂದಲೇ ಸ್ಥಳದಲ್ಲಿ ಹಾಜರಿದ್ದರು.

ಕಾರ್ಯಗಳಿಗೆ ಸಹಕಾರ:

ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಗಣಪತಿ ಮಾಂಗ್ರೆ, ‘ಒಕ್ಕೂಟವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ನನ್ನ ಸಂಪೂರ್ಣ ಬೆಂಬಲವನ್ನು ರಾಜು ತಾಂಡೇಲ ಅವರಿಗೆ ನೀಡುತ್ತೇನೆ. ಮೀನುಗಾರರ ಸಮುದಾಯಕ್ಕೆ ಹೊಸ ಪದಾಧಿಕಾರಿಗಳಿಂದ ಮತ್ತಷ್ಟು ಉತ್ತಮ ಕಾರ್ಯಗಳಾಗಲಿ’ ಎಂದು ಹಾರೈಸಿದರು.

ಇದೇವೇಳೆ ಮಾತನಾಡಿದ ರಾಜು ತಾಂಡೇಲ, ‘15 ವರ್ಷಗಳಿಂದ ಒಕ್ಕೂಟವನ್ನು ಗಣಪತಿ ಮಾಂಗ್ರೆ ಅವರು ಮುನ್ನಡೆಸಿಕೊಂಡು ಬಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಮುದಾಯದ ಪರವಾದ ಮತ್ತಷ್ಟು ಕೆಲಸಗಳನ್ನು ಮಾಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.