ADVERTISEMENT

ಬಾಣಂತಿ ಸಾವು ಪ್ರಕರಣ: ಅನಿರ್ದಿಷ್ಟಾವಧಿ ಧರಣಿಯ ಎಚ್ಚರಿಕೆ

ತಪ್ಪಿತಸ್ಥರ ಹೆಸರು ತಿಳಿಸಲು ಒಂದು ವಾರದ ಗಡುವು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 11:35 IST
Last Updated 1 ಮಾರ್ಚ್ 2021, 11:35 IST
ಗೀತಾ ಬಾನಾವಳಿ ಸಾವಿನ ತನಿಖೆ ಹೋರಾಟ ಸಮಿತಿಯ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರಿಗೆ ಸೋಮವಾರ ಕಾರವಾರದಲ್ಲಿ ಮನವಿ ಸಲ್ಲಿಸಿದರು
ಗೀತಾ ಬಾನಾವಳಿ ಸಾವಿನ ತನಿಖೆ ಹೋರಾಟ ಸಮಿತಿಯ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರಿಗೆ ಸೋಮವಾರ ಕಾರವಾರದಲ್ಲಿ ಮನವಿ ಸಲ್ಲಿಸಿದರು   

ಕಾರವಾರ: ‘ಬಾಣಂತಿ ಗೀತಾ ಬಾನಾವಳಿ ಸಾವಿನ ಪ್ರಕರಣದಲ್ಲಿ ತಪ್ಪಿತಸ್ಥರು ಯಾರು ಎಂದು ಸಾರ್ವಜನಿಕರಿಗೆ ಇನ್ನೊಂದು ವಾರದಲ್ಲಿ ತಿಳಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು’ ಎಂದು ಗೀತಾ ಬಾನಾವಳಿ ಸಾವಿನ ತನಿಖೆ ಹೋರಾಟ ಸಮಿತಿಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ನಗರದಲ್ಲಿ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕಾರವಾರದ ಸರ್ವೋದಯ ನಗರದ ಮೀನುಗಾರರ ಕುಟುಂಬದ ಗೀತಾ, ಜಿಲ್ಲಾ ಆಸ್ಪತ್ರೆಯಲ್ಲಿ 2020ರ ಸೆ.3ರಂದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಮೃತಪಟ್ಟಿದ್ದರು.

ADVERTISEMENT

ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೀನುಗಾರರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ ತನಿಖೆ ನಡೆಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸಮಿತಿಯೊಂದನ್ನು ರಚಿಸಿದ್ದರು. ಅದರ ವರದಿಯು ಎರಡು ತಿಂಗಳ ಹಿಂದೆ ಸಲ್ಲಿಕೆಯಾಗಿತ್ತು. ಆದರೆ, ಅದರಲ್ಲೂ ತಪ್ಪಿತಸ್ಥರು ಯಾರು ಎಂಬ ಬಗ್ಗೆ ಉಲ್ಲೇಖವಿರಲಿಲ್ಲ.

‘ಬಾಣಂತಿ ಮೃತಪಟ್ಟು ಆರು ತಿಂಗಳೇ ಕಳೆದರೂ ಅವರ ಸಾವಿಗೆ ಕಾರಣರಾದವರ ಬಗ್ಗೆ ಮಾಹಿತಿ ನೀಡುತ್ತಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ ನಿರಂತರ ಹೋರಾಟ ನಡೆಸಿದರು ಪ್ರಯೋಜನವಾಗುತ್ತಿಲ್ಲ. ಜಿಲ್ಲಾಧಿಕಾರಿ ನೇಮಿಸಿದ ಸಮಿತಿಯು ನಿಜವಾಗಿಯೂ ತನಿಖೆ ನಡೆಸಿದೆಯೇ ಇಲ್ಲವೇ ಎಂಬುದೂ ತಿಳಿಯುತ್ತಿಲ್ಲ’ ಎಂದು ‍ಪ್ರತಿಭಟನಾಕಾರರು ಅನುಮಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ, ನಗರಸಭೆ ಸದಸ್ಯೆಯರಾದ ರೇಷ್ಮಾ, ಶಿಲ್ಪಾ ನಾಯ್ಕ, ಗುರುದಾಸ ಬಾನಾವಳಿ, ಸುಲಕ್ಷಾ ನಾಗರಾಜ ಬಾನಾವಳಿ ಸೇರಿದಂತೆ ಹಲವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.