ಕಾರವಾರ: ಜಿಲ್ಲೆಯ ಆರ್ಥಿಕ ಚಟುವಟಿಕೆಗೆ ಬೆನ್ನೆಲುಬಾಗಿರುವ ಮೀನುಗಾರಿಕೆ ಕ್ಷೇತ್ರಕ್ಕೆ ನಿರೀಕ್ಷಿತ ಸೌಕರ್ಯ ಒದಗಿಸುವಲ್ಲಿ ಸರ್ಕಾರ ಎಡವುತ್ತಿದೆ ಎಂಬ ಆರೋಪ ಮೀನುಗಾರರದ್ದು. ಈ ಆರೋಪಗಳಿಗೆ ಬಂದರಿನಲ್ಲಿನ ಸೌಕರ್ಯಗಳ ಕೊರತೆ ಪುಷ್ಟಿ ನೀಡುತ್ತಿವೆ. ಎರಡು ದಶಕಗಳಿಂದ ಹೂಳೆತ್ತುವ ಕೆಲಸ ನಡೆಯದ ಕಾರಣ ದೋಣಿಗಳ ಸುರಕ್ಷಿತ ನಿಲುಗಡೆ ಸವಾಲಾಗಿದೆ.
ಇಲ್ಲಿನ ಬೈತಕೋಲ ಸೇರಿದಂತೆ ಜಿಲ್ಲೆಯಲ್ಲಿನ ಎಂಟು ಮೀನುಗಾರಿಕೆ ಬಂದರುಗಳಲ್ಲಿಯೂ ಕಾರ್ಮಿಕರಿಗೆ ವಿಶ್ರಾಂತಿ ಗೃಹ, ಶೌಚಾಲಯ, ಶುದ್ಧ ಕುಡಿಯುವ ನೀರಿಗೆ ಕೊರತೆ ಇದೆ. ಬೋಟುಗಳ ದುರಸ್ತಿಗೆ ಅಗತ್ಯ ವ್ಯವಸ್ಥೆಯೂ ಇಲ್ಲ ಎಂಬ ಕೊರಗು ಮೀನುಗಾರರದ್ದು.
ಬೈತಕೋಲ ಬಂದರಿನಲ್ಲಿ ಮಹಿಳೆಯರಿಗೆ ಸುಸಜ್ಜಿತ ವಿಶ್ರಾಂತಿ ಗೃಹವಿಲ್ಲ. ಮಳೆಗಾಲದಲ್ಲಿ ದುರಸ್ತಿ ಸಲುವಾಗಿ ದೋಣಿಗಳನ್ನು ದಡಕ್ಕೆ ಎಳೆದು ತರಲು ಟ್ರಾಲಿ ವ್ಯವಸ್ಥೆ ಮಾಡುವಂತೆ ಹಲವು ವರ್ಷದಿಂದ ಬೇಡಿಕೆ ಇಡಲಾಗುತ್ತಿದ್ದರೂ ಸ್ಪಂದಿಸಿಲ್ಲ ಎನ್ನುತ್ತಾರೆ ಮೀನುಗಾರರು.
‘ಮುದಗಾ ಬಂದರಿನಲ್ಲಿ ಹೂಳು ತುಂಬಿಕೊಂಡಿದ್ದು ದೋಣಿಗಳನ್ನು ಸುರಕ್ಷಿತವಾಗಿ ಬಂದರಿಗೆ ತರುವುದೂ ಕಷ್ಟವಾಗಿದೆ. ಕೆಲವೊಮ್ಮೆ ದೋಣಿಗಳು ಹೂಳಿನಲ್ಲಿ ಸಿಲುಕಿಕೊಂಡು ಹೊರತೆಗೆಯಲು ಲಕ್ಷಾಂತರ ಖರ್ಚು ಮಾಡಿದ ನಿದರ್ಶನಗಳಿವೆ’ ಎನ್ನುತ್ತಾರೆ ಮೀನುಗಾರ ಮುಖಂಡ ದೇವಾನಂದ ಚೆಂಡೇಕರ್.
ಭಟ್ಕಳ ತಾಲ್ಲೂಕಿನ ಮಾವಿನಕುರ್ವೆ ಹಾಗೂ ಅಳ್ವೆಕೋಡಿ ಬಂದರುಗಳಲ್ಲಿ ಸೌಕರ್ಯಗಳ ಕೊರತೆ ಕಾಡುತ್ತಿದೆ. ಮಾವಿನಕುರ್ವೆ ಬಂದರಿನಲ್ಲಿ ಹೂಳು ತುಂಬಿಕೊಂಡಿದ್ದು, ಹೂಳೆತ್ತಲು ₹5 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಿದ್ದರೂ, ಗುತ್ತಿಗೆದಾರ ಹಳೆಯ ಮಾದರಿಯ ಹೂಳೆತ್ತುವ ಯಂತ್ರ ಉಪಯೋಗಿಸುತ್ತಿರುವ ಕಾರಣದಿಂದ ಇನ್ನೂ ತನಕ ಸಂಪೂರ್ಣ ಹೂಳೆತ್ತುವ ಕೆಲಸ ಮುಗಿದಿಲ್ಲ’ ಎಂಬುದು ಮೀನುಗಾರರ ಆರೋಪ.
ಅಳ್ವೇಕೋಡಿ ಬಂದರಿನಲ್ಲಿ ಅಂದಾಜು ₹75 ಲಕ್ಷ ವೆಚ್ಚದಲ್ಲಿ ಮಹಿಳೆಯರಿಗಾಗಿ ಹೈಟೆಕ್ ವಿಶ್ರಾಂತಿ ಗೃಹ ನಿರ್ಮಿಸಲು ಅನುದಾನ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಭಟ್ಕಳದ ಮಾವಿನಕರ್ವೆ ಬಂದರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಮೀನುಗಾರರು ಶುದ್ದ ಕುಡಿಯುವ ನೀರನ್ನು ಬ್ಯಾರೆಲ್ ಮೂಲಕ ತರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಗೋಕರ್ಣ ಸಮೀಪದ ತದಡಿಯ ಮೀನುಗಾರಿಕಾ ಬಂದರಿನಲ್ಲಿರುವ ಮೀನುಗಾರಿಕೆ ಇಲಾಖೆಯ ಕಟ್ಟಡವೇ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಬೀಳುವ ಹಂತದಲ್ಲಿದೆ. ದಕ್ಷಿಣ ಕನ್ನಡಕ್ಕೆ ಹೋಲಿಸಿದರೆ ಇಲ್ಲಿಯ ಮೀನುಗಾರರಿಗೆ ಯಾವುದೇ ಅನುಕೂಲ ಕಲ್ಪಿಸಿಕೊಟ್ಟಿಲ್ಲ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೀನುಗಾರರ ಮುಖಂಡ ಉಮಾಕಾಂತ ಹೊಸ್ಕಟ್ಟಾ ದೂರುತ್ತಾರೆ.
‘ತದಡಿ ಬಂದರಿನ ಅಳಿವೆ ಸಂಪೂರ್ಣ ಹೂಳಿನಿಂದ ತುಂಬಿದೆ. ಇಲ್ಲಿ ಮೀನುಗಾರಿಕೆ ನಡೆಸುವುದೇ ಕಷ್ಟದ ಕೆಲಸವಾಗಿದೆ. ಮೀನುಗಾರರು ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ಹೋಗಲೂ ಹೆದರುವ ಸ್ಥಿತಿ ಇದೆ. ಮೀನುಗಾರಿಕೆಗೆ ಹೊರಗೆ ಹೋದರೆ ಮರಳಿ ಬರುವವರೆಗೆ ಆತಂಕ ಇದ್ದೇ ಇದೆ. ಅಘನಾಶಿನಿ ನದಿ ಮತ್ತು ಸಮುದ್ರ ಸೇರುವ ಅಳಿವೆಯಲ್ಲಿ ಹೂಳು ತುಂಬಿರುವುದೇ ಇದಕ್ಕೆ ಕಾರಣ. ಸುಮಾರು 20 ವರ್ಷದ ಹಿಂದೆ ಒಮ್ಮೆ ಹೂಳೆತ್ತಿದ್ದರು. ಮೀನುಗಾರಿಕೆಗೆ ಹೋದ ಮೀನುಗಾರರು ಅಳಿವೆಯ ಒಳಗೆ ಪ್ರವೇಶಿಸಲು ಸಾಧ್ಯವಾಗದೇ ಕಾರವಾರದ ಮುದಗಾ ಬಂದರಿಗೆ ಹೋಗುತ್ತಿದ್ದಾರೆ’ ಎಂದು ಇಲ್ಲಿನ ಮೀನುಗಾರರು ಸಮಸ್ಯೆ ವಿವರಿಸುತ್ತಾರೆ.
‘ಇಲ್ಲಿ ಕೇವಲ 250 ಮೀಟರ್ ಜಟ್ಟಿಯಿದೆ. 400 ಮೀಟರ್ ವಿಸ್ತರಿಸಿ ಎಂದು ಮನವಿ ನೀಡಿದ್ದೇವೆ. ರಾತ್ರಿಯ ಸಮಯದಲ್ಲಿ ಮೀನುಗಾರಿಕೆಗೆ ತೆರಳಲು ಸರಿಯಾದ ವಿದ್ಯುತ್ ವ್ಯವಸ್ಥೆಯೂ ಇಲ್ಲ. ಮಹಿಳಾ ಮೀನುಗಾರರಿಗೆ ಸರಿಯಾದ ಕಟ್ಟಡದವಿಲ್ಲ. ಬೇಕಾದ ಮೂಲಭೂತ ಸೌಕರ್ಯವಂತೂ ಮೊದಲೇ ಇಲ್ಲ. ₹225 ಕೋಟಿ ವೆಚ್ಚದ ಎರಡನೇ ಹಂತದ ಅಭಿವೃದ್ಧಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದೇವೆ ಎಂದು ಹಿಂದಿನ ಸರ್ಕಾರದ ಮಿನುಗಾರಿಕೆ ಸಚಿವರು ಭರವಸೆ ನೀಡಿದ್ದರು. ಈವರೆಗೆ ಯಾವುದೇ ಯೋಜನೆ ಕಾರ್ಯಗತಗೊಂಡಿಲ್ಲ’ ಎಂದು ತದಡಿ ಮೀನುಗಾರಿಕೆ ಸಹಕಾರ ಸಂಘದ ಅಧ್ಯಕ್ಷ ಮಹೇಶ ಮೂಡಂಗಿ ಬೇಸರ ವ್ಯಕ್ತಪಡಿಸಿದರು.
ಅಂಕೋಲಾ ತಾಲ್ಲೂಕಿನ ಬೆಲೇಕೇರಿ ಬಂದರಿನಲ್ಲಿ ಚಂಡಮಾರುತ ಹಾಗೂ ಜೋರಾಗಿ ಗಾಳಿ ಬಿಸಿದಾಗ ದೋಣಿಗಳನ್ನು ನಿಲ್ಲಿಸಲಾಗದೇ, ಮೀನುಗಳನ್ನು ಮುದಗಾ ಹಾಗೂ ಕಾರವಾರಕ್ಕೆ ತೆರಳಿ ಖಾಲಿ ಮಾಡುವ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಸ್ಥಳೀಯ ಮೀನುಗಾರರು.
‘200 ಮೀಟರ್ ನಷ್ಟು ಅಲೆ ತಡೆಗೋಡೆ ನಿರ್ಮಿಸಿದರೆ ಸಮಸ್ಯೆ ಬಗೆಹರಿಯಲಿದೆ. ಹಲವು ವರ್ಷದಿಂದ ಈ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ’ ಎನ್ನುತ್ತಾರೆ ಬೆಲೇಕೇರಿ ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಪ್ರಮೋದ್ ಬಾನಾವಳಿಕರ್.
ಹೊನ್ನಾವರ ತಾಲ್ಲೂಕಿನ ಕಾಸರಕೋಡ ಬಂದರಿಗೆ ಸಾಗಲು ಈಚೆಗೆ ರಸ್ತೆ ನಿರ್ಮಿಸಲಾಗಿದೆಯಾದರೂ ಶೌಚಾಲಯ, ವಿಶ್ರಾಂತಿ ಗೃಹ ಮೊದಲಾದ ಅಗತ್ಯ ಸೌಕರ್ಯಗಳು ಮೀನುಗಾರರಿಗೆ ಮರೀಚಿಕೆಯಾಗಿವೆ.
ಬಂದರು ಧಕ್ಕೆಯನ್ನು ವೈಜ್ಞಾನಿಕ ವಿಧಾನದಲ್ಲಿ ನಿರ್ಮಾಣ ಮಾಡದಿರುವುದರಿಂದ ಬೋಟು ನಿಲ್ಲಿಸಲು ತೊಂದರೆಯಾಗುತ್ತದೆ. ಉಳಿದೆಲ್ಲ ಸಮಸ್ಯೆಗಳಿಗಿಂತ ಮಿಗಿಲಾಗಿರುವ ಹೂಳಿನ ಸಮಸ್ಯೆ ಮೀನುಗಾರರ ಜೀವಕ್ಕೇ ಸಂಚಕಾರ ತರುತ್ತಿದೆ. ಅಲಡೆ ತಡೆಗೋಡೆ ನಿರ್ಮಿಸಿ ಹೂಳಿನ ಸಮಸ್ಯೆ ಪರಿಹರಿಸಬೇಕು’ ಎನ್ನುತ್ತಾರೆ ಮೀನುಗಾರ ಮುಖಂಡ ಹಮ್ಜಾ ಪಟೇಲ.
ಪೂರಕ ಮಾಹಿತಿ: ರವಿ ಸೂರಿ, ಮೋಹನ ನಾಯ್ಕ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಅಜಿತ್ ನಾಯಕ.
ತದಡಿ ಮತ್ತು ಮುದಗಾ ಮೀನುಗಾರಿಕೆ ಬಂದರು ಹೂಳೆತ್ತಲು ಆಡಳಿತಾತ್ಮಕವಾಗಿ ಯೋಜನೆಗೆ ಅನುಮೋದನೆ ಸಿಕ್ಕಿದೆ. ಆದರೆ ಸಿಆರ್‌ಝಡ್ ಅನುಮತಿಗಾಗಿ ಕಾಯುತ್ತಿದ್ದೇವೆರವೀಂದ್ರ ತಳೇಕರ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ
ಕುಮಟಾದಲ್ಲಿ ಅಳಿವೆಯಲ್ಲಿ ತುಂಬಿಕೊಂಡಿರುವ ಹೂಳು ತೆಗೆಯಲು ಈವರೆಗೆ ಕೆಲಸ ನಡೆದಿಲ್ಲ. ಹಲವು ಬಾರಿ ಸರ್ಕಾರದ ಗಮನಸೆಳೆಯಲಾಗಿದ್ದರೂ ಪ್ರಯೋಜನವಾಗಿಲ್ಲಜೈವಿಠ್ಠಲ ಕುಬಲ ಕುಮಟಾ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ
ಅಳ್ವೇಕೋಡಿ ಬಂದರಿನಲ್ಲಿ ಹೂಳಿನ ಸಮಸ್ಯೆ ಕಾಡುತ್ತಿದ್ದು ಬೇಸಿಗೆಯಲ್ಲಿ ದೋಣಿಗಳು ಅಳ್ವೇಕೋಡಿ ಬಂದರಿನಲ್ಲಿ ಲಂಗರು ಹಾಕಲು ಸಮಸ್ಯೆಯಾಗುತ್ತಿದೆರಾಮ ಖಾರ್ವಿ ಮೀನುಗಾರ
ಕುಸಿದ ಜಟ್ಟಿಯಿಂದ ಅಪಾಯದ ಆತಂಕ
ಭಟ್ಕಳದ ಮಾವಿನಕುರ್ವೆ ಹಾಗೂ ಅಳ್ವೆಕೋಡಿ ಬಂದರಿನಲ್ಲಿ ದೋಣಿಗಳು ಲಂಗರು ಹಾಕುವ ಜಟ್ಟಿ ಕುಸಿದು ಹೋಗಿದ್ದು ಮರು ನಿರ್ಮಾಣದ ಅಗತ್ಯ ಇದೆ. ಮೀನುಗಾರಿಕೆ ಇಲಾಖೆಯಿಂದ ಎರಡು ಬಂದರಿನಲ್ಲಿ ಜಟ್ಟಿ ಕುಸಿತದ ಬಗ್ಗೆ ಪರಿಶೀಲಿನೆ ನಡೆಸಿ ಅಂದಾಜು ವೆಚ್ಚದ ಬಗ್ಗೆ ಯೋಜನೆ ರೂಪಿಸಲಾಗಿದೆ ಎನ್ನುತ್ತಾರೆ ಮೀನುಗಾರರ ಮುಖಂಡರಾದ ವೆಂಕಟ್ರಮಣ ಮೊಗೇರ. ಆದರೆ ಈ ಜಟ್ಟಿ ಸಂಪೂರ್ಣ ಕುಸಿತವಾದರೆ ದೋಣಿ ಹಾಗೂ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಇರುವುದರಿಂದ ಶೀಘ್ರವಾಗಿ ಇದಕ್ಕೆ ಅನುದಾನ ಒದಗಿಸಿ ಕಾಮಗಾರಿ ಆರಂಭಿಸಬೇಕು ಎನ್ನುವುದು ಮೀನುಗಾರರ ಆಗ್ರಹ.
ಮೀನು ಸಂಸ್ಕರಣಾ ಘಟಕಕ್ಕೆ ವಿರೋಧ
ತದಡಿಯಲ್ಲಿ ₹13 ಕೋಟಿ ವೆಚ್ಚದಲ್ಲಿ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮವು ಮೀನು ಸಂಸ್ಕರಣಾ ಘಟಕವನ್ನು ಈಚೆಗೆ ನಿರ್ಮಿಸಿದೆ. ಇದಕ್ಕೆ ಸ್ಥಳೀಯ ಶಾಸಕ ದಿನಕರ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಈ ಯೋಜನೆ ತದಡಿಯಲ್ಲಿ ಅವಶ್ಯಕತೆ ಇಲ್ಲ. ಸ್ಥಳೀಯವಾಗಿ ಈ ಘಟಕಕ್ಕೆ ಸಾಕಾಗುವಷ್ಟು ಮೀನು ಸಹ ಲಭ್ಯವಿಲ್ಲ. ಇದೇ ಮೊತ್ತದಲ್ಲಿ ಮೀನುಗಾರರಿಗೆ ಹಲವು ಅಭಿವೃದ್ಧಿ ಕಾರ್ಯವನ್ನು ಮಾಡಬಹುದಿತ್ತು. ಅಧಿಕಾರಿಗಳು ಸಮರ್ಪಕವಾಗಿ ಯೋಚನೆ ಮಾಡದೇ ಈ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ. ಇದರಿಂದ ಸರ್ಕಾರದ ಹಣವೂ ನಿರುಪಯುಕ್ತವಾಗಲಿದೆ. ಈ ಯೋಜನೆ ರೂಪಿಸುವಾಗ ಅಧಿಕಾರಿಗಳು ಮೀನುಗಾರರ ಅಭಿಪ್ರಾಯವನ್ನೂ ಸಹ ಕೇಳಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.