ADVERTISEMENT

ಕದ್ರಾ ಸಂತ್ರಸ್ತರಿಗೆ ಪುನರ್ವಸತಿಗೆ ಸೈಲ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 15:35 IST
Last Updated 26 ಸೆಪ್ಟೆಂಬರ್ 2022, 15:35 IST
ಕದ್ರಾ ಜಲಾಶಯದಿಂದ ಹೊರ ಬಿಟ್ಟ ನೀರಿನಿಂದ ಸಂತ್ರಸ್ತರಾದವರಿಗೆ ಕೆ.ಪಿ.ಸಿ ವಸತಿಗೃಹಗಳ ಆವರಣದಲ್ಲೇ ಪುನರ್ವಸತಿ ಕಲ್ಪಿಸುವಂತೆ ಮಾಜಿ ಶಾಸಕ ಸತೀಶ ಸೈಲ್ ಅವರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು
ಕದ್ರಾ ಜಲಾಶಯದಿಂದ ಹೊರ ಬಿಟ್ಟ ನೀರಿನಿಂದ ಸಂತ್ರಸ್ತರಾದವರಿಗೆ ಕೆ.ಪಿ.ಸಿ ವಸತಿಗೃಹಗಳ ಆವರಣದಲ್ಲೇ ಪುನರ್ವಸತಿ ಕಲ್ಪಿಸುವಂತೆ ಮಾಜಿ ಶಾಸಕ ಸತೀಶ ಸೈಲ್ ಅವರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು   

ಕಾರವಾರ: ‘2019ರಲ್ಲಿ ಕದ್ರಾ ಜಲಾಶಯದಿಂದ ಹೊರಬಿಟ್ಟ ಅಪಾರ ಪ್ರಮಾಣದ ನೀರಿನಿಂದ ಸಂತ್ರಸ್ತರಾದ ಕದ್ರಾ, ಮಲ್ಲಾಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ನಿವಾಸಿಗಳಿಗೆ, ಕೆ.ಪಿ.ಸಿ ಆವರಣದ ಖಾಲಿ ಜಾಗದಲ್ಲೇ ಪುನರ್ವಸತಿ ಕಲ್ಪಿಸಬೇಕು’ ಎಂದು ಮಾಜಿ ಶಾಸಕ ಸತೀಶ ಸೈಲ್ ಒತ್ತಾಯಿಸಿದ್ದಾರೆ.

ಸಂತ್ರಸ್ತರೊಂದಿಗೆ ಜಿಲ್ಲಾಧಿಕಾರಿಯನ್ನು ಸೋಮವಾರ ಭೇಟಿ ಮಾಡಿದ ಅವರು, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

‘30ಕ್ಕೂ ಅಧಿಕ ಕುಟುಂಬಗಳು ಸರ್ಕಾರಿ ಜಾಗದಲ್ಲಿ ಅತಿಕ್ರಮಣ ಮಾಡಿ ಮನೆ ಕಟ್ಟಿ ವಾಸಿಸುತ್ತಿದ್ದಾರೆ. ಪ್ರವಾಹದ ಸಮಯದಲ್ಲಿ ಅವರಿಗೆ ಪುನರ್ವಸತಿ ಕಲ್ಪಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು’ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

‘ಸ್ವಂತ ಜಮೀನಿನಲ್ಲಿ ವಾಸ ಮಾಡುತಿದ್ದ ಸಂತ್ರಸ್ತರು ಸರ್ಕಾರದಿಂದ ಅನುದಾನ ಪಡೆದು ತಮ್ಮ ಸ್ವಂತ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಅರಣ್ಯ ಜಾಗದಲ್ಲಿ ಹಲವು ದಶಕಗಳಿಂದ ಮನೆ ಕಟ್ಟಿಕೊಂಡಿದ್ದವರಿಗೆ ಇದುವರೆಗೂ ಪುನರ್ವಸತಿಯಾಗಿಲ್ಲ. ಸರ್ಕಾರದ ಪರಿಹಾರವೂ ಸಿಕ್ಕಿಲ್ಲ. ಕೆ.ಪಿ.ಸಿ ಮತ್ತು ಎನ್.ಪಿ.ಸಿ.ಐ.ಎಲ್.ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವಿಸುತ್ತಿದ್ದಾರೆ’ ಎಂದು ವಿವರಿಸಿದ್ದಾರೆ.

‘ಕೆ.ಪಿ.ಸಿ.ಯವರು ಹಲವು ಬಾರಿ ಅವರ ಕ್ವಾರ್ಟರ್ಸ್‌ನಿಂದ ಈ ನಿರಾಶ್ರಿತರನ್ನು ಹೊರದಬ್ಬಲು ಪ್ರಯತ್ನಿಸಿದ್ದರು. ಆಗ ಜಿಲ್ಲಾಧಿಕಾರಿ ಮತ್ತು ನಾನು ಮಧ್ಯ ಪ್ರವೇಶಿಸಿ ರಕ್ಷಣೆ ನೀಡಿದ್ದೇವೆ. ಆದರೆ, ಈ ವ್ಯವಸ್ಥೆ ತಾತ್ಕಾಲಿಕವಾಗಿದ್ದು, ಸಂತ್ರಸ್ತರ ಬದುಕು ತೂಗುಯ್ಯಾಲೆಯಲ್ಲಿದೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.