ADVERTISEMENT

ಕಾಡಿನಲ್ಲಿ ಆಹಾರ ಅಭದ್ರತೆ: ಅಧ್ಯಯನ ಅಗತ್ಯ: ಶಾಸಕ ಭೀಮಣ್ಣ ನಾಯ್ಕ

ವನ್ಯಜೀವಿ ಸಂರಕ್ಷಣಾ ಜಾಗೃತಿ ಜಾಥಾಕ್ಕೆ ಶಾಸಕ ಭೀಮಣ್ಣ ನಾಯ್ಕ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 7:36 IST
Last Updated 5 ಅಕ್ಟೋಬರ್ 2025, 7:36 IST
ಶಿರಸಿಯ ಮಕ್ಕಳ ಉದ್ಯಾನವನದಲ್ಲಿ ನಡೆದ ವನ್ಯಜೀವಿ ಸಂರಕ್ಷಣಾ ಜಾಗೃತಿ ಜಾಥಾದ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯ ವಿಜೇತರಿಗೆ ಶಾಸಕ ಭೀಮಣ್ಣ ನಾಯ್ಕ ಬಹುಮಾನ ವಿತರಿಸಿದರು
ಶಿರಸಿಯ ಮಕ್ಕಳ ಉದ್ಯಾನವನದಲ್ಲಿ ನಡೆದ ವನ್ಯಜೀವಿ ಸಂರಕ್ಷಣಾ ಜಾಗೃತಿ ಜಾಥಾದ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯ ವಿಜೇತರಿಗೆ ಶಾಸಕ ಭೀಮಣ್ಣ ನಾಯ್ಕ ಬಹುಮಾನ ವಿತರಿಸಿದರು   

ಶಿರಸಿ: ‘ಅರಣ್ಯ ಭೂಮಿಯಲ್ಲಿನ ಹುಲ್ಲುಗಾವಲು ಪ್ರದೇಶ ಕ್ಷೀಣವಾಗುತ್ತಿರುವುದು ವನ್ಯಜೀವಿಗಳ ಆಹಾರ ಅಭದ್ರತೆಗೆ ಕಾರಣವಾಗುತ್ತಿದೆಯೇ ಎಂಬ ಬಗ್ಗೆ ಕೂಲಂಕಷ ಅಧ್ಯಯನ ಆಗುವ ಅಗತ್ಯವಿದೆ’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. 

ನಗರದ ಮಕ್ಕಳ ಉದ್ಯಾನವನದಲ್ಲಿ ಶನಿವಾರ ಅವರು ವನ್ಯಜೀವಿ ಸಂರಕ್ಷಣಾ ಜಾಗೃತಿ ಜಾಥಾಕ್ಕೆ ಚಾಲನೆ‌ ನೀಡಿ ಮಾತನಾಡಿದರು. ‘ಇತ್ತೀಚಿನ ವರ್ಷಗಳಲ್ಲಿ ಕಾಡುಪ್ರಾಣಿಗಳು ನಾಡಿಗೆ ಬರುವ ಪ್ರಮಾಣ ಹೆಚ್ಚುತ್ತಿದೆ. ಇದು ಕಾಡೊಳಗೆ ಆಹಾರ ಕೊರತೆಯನ್ನು ಸಾಕ್ಷೀಕರಿಸುತ್ತಿದೆ. ಕೇವಲ ಮಾಂಸಾಹಾರಿ ಪ್ರಾಣಿಗಳಷ್ಟೇ ಅಲ್ಲದೇ ಸಸ್ಯಾಹಾರಿ ಜೀವಿಗಳು ಕೂಡ ಕೃಷಿಕರ ಜಮೀನುಗಳಿಗೆ ಲಗ್ಗೆ ಇಡುತ್ತಿವೆ. ಇದು ವನ್ಯಜೀವಿ, ಮಾನವ ಸಂಘರ್ಷಕ್ಕೂ ಕಾರಣವಾಗುತ್ತಿದೆ. ಕಾರಣ ಕಾಡೊಳಗೆ ಆಹಾರ ಕೊರತೆಯಾಗದಂತೆ ಇಲಾಖೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಹುಲ್ಲುಗಾವಲು ಭೂಮಿಯಲ್ಲಿ ಗಿಡ ನೆಡುವ ಕೆಲಸ ತಪ್ಪಬೇಕಿದೆ. ವನ್ಯಜೀವಿಗಳ ಸಂರಕ್ಷಣೆ ಇಲಾಖೆ ಹಾಗೂ ಜನ ಸಾಮಾನ್ಯರ ಜಂಟಿ ಕರ್ತವ್ಯವಾಗಿದೆ’  ಎಂದರು.

‘ಹೊಸದಾಗಿ ಅರಣ್ಯ ಅತಿಕ್ರಮಣಕ್ಕೆ ಅವಕಾಶ ಇಲ್ಲ. ಆದರೆ, ಹಳೆಯ ಅತಿಕ್ರಮಣ ಇದ್ದೂ, ಜಿಪಿಎಸ್ ಆಗದೇ ಇದ್ದರೂ ತೆರವು ಮಾಡದೇ ಮಾನವೀಯತೆ ತೋರಬೇಕು’ ಎಂದು ಸೂಚಿಸಿದ ಅವರು, ‘ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಜನಪ್ರತಿನಿಧಿಗಳು ಇಲ್ಲದ ಕಾರಣ ಅಕ್ರಮ–ಸಕ್ರಮದಡಿ ಅರ್ಜಿ ಸಲ್ಲಿಸಿ ಜಿಪಿಎಸ್ ಮಾಡಿದ ಅತಿಕ್ರಮಣದಾರರ ಅರ್ಜಿ ವಿಲೆವಾರಿ ಮಾಡಲು ಆಗುವದಿಲ್ಲ ಎಂಬ‌ ಸ್ಥಿತಿ ಇದೆ. ಶೀಘ್ರದಲ್ಲಿ ಈ ಕುರಿತು ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

ADVERTISEMENT

ಕೆನರಾ ವೃತ್ತದ ಅರಣ್ಯ‌ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ ಮಾತನಾಡಿ, ‘ವನ್ಯಜೀವಿ ಸಂರಕ್ಷಣೆ ಆಗಬೇಕು. ಜನರ ಸಹಭಾಗಿತ್ವದಲ್ಲಿ ವನ್ಯಜೀವಿ ಸಂರಕ್ಷಣೆ ಮಾಡಬೇಕಿದೆ’ ಎಂದರು.

ನಗರಸಭೆ ಅಧ್ಯಕ್ಷೆ ಶರ್ಮಿಳಾ‌ ಮಾದನಗೇರಿ, ನಗರದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಡಿಸಿಎಫ್ ಸಂದೀಪ ಸೂರ್ಯವಂಶಿ, ನಗರಸಭೆ ಸದಸ್ಯ‌ ಪ್ರದೀಪ ಶೆಟ್ಟಿ ಇತರರು‌ ಇದ್ದರು.

ಜಾಥಾದಲ್ಲಿ ಅಧಿಕಾರಿಗಳು, ಸಾರ್ವಜನಿಕರು, ಅರಣ್ಯ  ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವೇಳೆ ನಡೆಸಲಾದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.