ಕಾರವಾರ: ಕಾಳಿ ನದಿ ಮಧ್ಯೆ ಇರುವ ತಾಲ್ಲೂಕಿನ ಉಮಳೆಜೂಗ ಗ್ರಾಮದಲ್ಲಿ ಗುರುವಾರ ವೃದ್ಧರೊಬ್ಬರ ಶವವನ್ನು ಗ್ರಾಮಸ್ಥರು ದೋಣಿಗೆ ಕಟ್ಟಿಕೊಂಡು, ಇನ್ನೊಂದು ದಡದಲ್ಲಿರುವ ಸ್ಮಶಾನಕ್ಕೆ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಿದರು.
‘ನಮ್ಮ ಗ್ರಾಮವು ದ್ವೀಪದಂತಿದ್ದು, 15 ಮನೆಗಳಿವೆ. ಸುತ್ತಲೂ ಕಾಳಿ ನದಿ ಹರಿಯುತ್ತಿದೆ. ಸ್ಮಶಾನವಿಲ್ಲ. ಹೀಗಾಗಿ ಗ್ರಾಮದ ನಿವಾಸಿ ಗುಲ್ಬಾ ಕೊಳಂಬಕರ್ (82) ಎಂಬುವರ ಶವವನ್ನು ಇನ್ನೊಂದು ದಡದಲ್ಲಿರುವ ಸಿದ್ದರ ಗ್ರಾಮದಲ್ಲಿನ ಸ್ಮಶಾನಕ್ಕೆ ದೋಣಿಯಲ್ಲಿ ಒಯ್ದು ಅಂತ್ಯಕ್ರಿಯೆ ನೆರವೇರಿಸಿದೆವು’ ಎಂದು ಗ್ರಾಮಸ್ಥ ಶರದ ತಾಮ್ಸೆ ತಿಳಿಸಿದರು.
‘2021ರಲ್ಲೇ ಗ್ರಾಮಕ್ಕೆ ಎತ್ತರವಾದ ಸೇತುವೆ ನಿರ್ಮಿಸಲಾಗಿದ್ದರೂ ಅದಕ್ಕೆ ಗ್ರಾಮದಿಂದ ಸಂಪರ್ಕ ರಸ್ತೆ ಕಲ್ಪಿಸಿಲ್ಲ. ಹೀಗಾಗಿ ಸೇತುವೆ ಬಳಕೆಗೆ ಬಾರದಂತಾಗಿದೆ. ಪ್ರತಿ ಸಲವೂ ಯಾರಾದರೂ ಮೃತಪಟ್ಟಾಗ, ಶವವನ್ನು ದೋಣಿಗೆ ಕಟ್ಟಿಕೊಂಡು ಇನ್ನೊಂದು ದಡಕ್ಕೆ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸುತ್ತೇವೆ’ ಎಂದು ಅವರು ಹೇಳಿದರು.
‘ಖಾಸಗಿ ಜಮೀನಿನ ಮಾಲೀಕರೊಬ್ಬರ ತಕರಾರಿನಿಂದ ಸಂಪರ್ಕ ರಸ್ತೆ ನಿರ್ಮಾಣವಾಗಿಲ್ಲ. ಗ್ರಾಮದ ಮಕ್ಕಳು ಹರಸಾಹಸ ಪಟ್ಟು ಸೇತುವೆಯನ್ನು ಏರಿ, ಶಾಲೆಗೆ ಹೋಗುತ್ತಾರೆ. ಗ್ರಾಮಸ್ಥರೂ ನಿತ್ಯ ಸಂಕಷ್ಟಪಡುತ್ತಾರೆ’ ಎಂದರು.
‘ಸೇತುವೆಗೆ ಸಂಪರ್ಕ ರಸ್ತೆ ನಿರ್ಮಿಸಲು ಅನುದಾನವಿದೆ. ಖಾಸಗಿ ಜಮೀನು ಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ. ಜಮೀನು ಮಾಲೀಕರ ಮನವೊಲಿಸಲು ಪ್ರಯತ್ನ ನಡೆದಿದೆ’ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಮು ಅರ್ಗೇಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.