ADVERTISEMENT

ಉತ್ತರ ಕನ್ನಡ | ಗಂಗಾಷ್ಟಮಿ: ಜಿಲ್ಲೆಯ ವಿವಿಧೆಡೆ ನದಿ ಪೂಜೆ

ಪಶ್ಚಿಮ ಘಟ್ಟ ರಕ್ಷಣೆಗೆ ಸ್ವರ್ಣವಲ್ಲೀ ಶ್ರೀಗಳ ಕರೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 6:57 IST
Last Updated 22 ಜನವರಿ 2026, 6:57 IST
<div class="paragraphs"><p>ನದಿ ಜೋಡಣೆ ವಿರುದ್ಧ ಹೋರಾಟದ ಮುಂದಿನ ಹಾದಿಯನ್ನು ರೂಪಿಸಲು ಶಿರಸಿಯ ಸ್ವರ್ಣವಲ್ಲೀಯಲ್ಲಿ ಆಯೋಜಿಸಿದ್ದ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಪ್ರಮುಖರ ಸಭೆಯಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿದರು</p></div>

ನದಿ ಜೋಡಣೆ ವಿರುದ್ಧ ಹೋರಾಟದ ಮುಂದಿನ ಹಾದಿಯನ್ನು ರೂಪಿಸಲು ಶಿರಸಿಯ ಸ್ವರ್ಣವಲ್ಲೀಯಲ್ಲಿ ಆಯೋಜಿಸಿದ್ದ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಪ್ರಮುಖರ ಸಭೆಯಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿದರು

   

ಶಿರಸಿ: ಬೇಡ್ತಿ-ಅಘನಾಶಿನಿ ಕಣಿವೆ ಉಳಿಸುವ ಜನಾಂದೋಲನವನ್ನು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಇನ್ನಷ್ಟು ಬಲಪಡಿಸಲು ಗಂಗಾಷ್ಟಮಿಯಂದು ಎಲ್ಲೆಡೆ ನದಿ ಪೂಜೆ ನಡೆಸುವಂತೆ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕರೆ ನೀಡಿದ್ದಾರೆ.

ಶಿರಸಿಯಲ್ಲಿ ನಡೆದ ಬೃಹತ್ ಜನಸಮಾವೇಶದ ಯಶಸ್ಸಿನ ನಂತರ, ಹೋರಾಟದ ಮುಂದಿನ ಹಾದಿಯನ್ನು ರೂಪಿಸಲು ಸ್ವರ್ಣವಲ್ಲೀ ಮಠದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಪ್ರಮುಖರ ಸಭೆಯಲ್ಲಿ ಸ್ವಾಮೀಜಿ ಈ ಕುರಿತು ಕರೆ ನೀಡಿದರು.

ADVERTISEMENT

‘ಪಶ್ಚಿಮ ಘಟ್ಟಗಳ ರಕ್ಷಣೆ ಎಂಬುದು ಕೇವಲ ಒಂದು ಪ್ರತಿಭಟನೆಯಾಗದೆ, ಅದು ಸಕಾರಾತ್ಮಕ ಮತ್ತು ಅಹಿಂಸಾತ್ಮಕ ಆಂದೋಲನವಾಗಿ ಮೂಡಿಬರಬೇಕು. ಎಲ್ಲ ಸಮುದಾಯಗಳ ಒಗ್ಗೂಡುವಿಕೆಯೊಂದಿಗೆ ದೀರ್ಘಕಾಲದ ಚಳವಳಿಯಾಗಿ ಇದು ಸಾಗಲಿದೆ. ಗಂಗಾಷ್ಟಮಿ ಹಾಗೂ ಶಿವರಾತ್ರಿಯಂತಹ ಪವಿತ್ರ ಸಂದರ್ಭಗಳಲ್ಲಿ ನದಿಗಳಿಗೆ ಪೂಜೆ ಸಲ್ಲಿಸುವ ಮೂಲಕ ನದಿಗಳ ಒಡನಾಟ ಮತ್ತು ಅವುಗಳ ಸಂರಕ್ಷಣೆಯ ಮಹತ್ವವನ್ನು ಜನರಲ್ಲಿ ಜಾಗೃತಗೊಳಿಸಬೇಕಿದೆ’ ಎಂದು ತಿಳಿಸಿದರು.

‘ಬೇಡ್ತಿ ಅಘನಾಶಿನಿ, ಶರಾವತಿ ಕಣಿವೆ ರಕ್ಷಣೆಯ ಜವಾಬ್ದಾರಿ ನೇರವಾಗಿ ಜಿಲ್ಲೆ ಹಾಗೂ ಪಶ್ಚಿಮ ಘಟ್ಟದ ಜನ ಪ್ರತಿನಿಧಿಗಳ ಮೇಲಿದೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಏಕಧ್ವನಿಯಿಂದ ಬೇಡ್ತಿ- ಅಘನಾಶಿನಿ ನದಿ ತಿರುವು ಯೋಜನೆಗಳನ್ನು ಸರ್ಕಾರ ಕೈಬಿಡುವಂತೆ ಕಾರ್ಯತತ್ಪರರಾಗಬೇಕು’ ಎಂದು ಸೂಚಿಸಿದರು.

ಸಭೆಯಲ್ಲಿ ಈ ಆಂದೋಲನವನ್ನು ವ್ಯವಸ್ಥಿತವಾಗಿ ಸಂಘಟಿಸಲು ವಿವಿಧ ಕಾರ್ಯಪಡೆಗಳನ್ನು ರಚಿಸಲಾಯಿತು. ಕಾನೂನು ತಜ್ಞರ ತಂಡ ಮತ್ತು ಸಾಮಾಜಿಕ ಮಾಧ್ಯಮ ತಂಡಗಳು ಇನ್ನು ಮುಂದೆ ಹೋರಾಟಕ್ಕೆ ತಾಂತ್ರಿಕ ಹಾಗೂ ಪ್ರಚಾರದ ಬಲ ನೀಡಲು ಸೂಚಿಸಲಾಯಿತು. ಜ.27 ರಂದು ಮಧ್ಯಾಹ್ನ 3 ಗಂಟೆಗೆ ಅಘನಾಶಿನಿ ಪ್ರದೇಶದ ಕಾರ್ಯಕರ್ತರ ಸಭೆಯನ್ನು ನೆಲೆಮಾವು ಮಠದಲ್ಲಿ ಆಯೋಜಿಸಲು ತೀರ್ಮಾನಿಸಲಾಯಿತು. ಅಲ್ಲದೆ, ಶಿವರಾತ್ರಿಯಂದು ಸಹಸ್ರಲಿಂಗದಲ್ಲಿ ಶಾಲ್ಮಲಾ ನದಿ ಪೂಜೆಯ ಮೂಲಕ ಪರಿಸರ ರಕ್ಷಣೆಯ ಸಂಕಲ್ಪ ಮಾಡಲಾಗುವುದು ಎಂದು ಸಮಿತಿ ಪ್ರಕಟಿಸಿತು.

ಸಮಾವೇಶಕ್ಕೆ ಸಹಕರಿಸಿದ 24 ಸಾವಿರಕ್ಕೂ ಹೆಚ್ಚು ಜನರಿಗೆ ಹಾಗೂ ನಿರಂತರ ಶ್ರಮಿಸಿದ 400ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಸಭೆ ಕೃತಜ್ಞತೆ ಸಲ್ಲಿಸಿತು. ಪರಿಸರ ತಜ್ಞ ಕೇಶವ ಕೊರ್ಸೆ, ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಸಮಿತಿಯ ಪದಾಧಿಕಾರಿಗಳಾದ ಆರ್.ಎಸ್. ಹೆಗಡೆ ಭೈರುಂಬೆ, ಜಿ.ಎಂ.ಹೆಗಡೆ ಹೆಗ್ನೂರು ಹಾಗೂ ಇತರರು ಮುಂಬರುವ ಹೋರಾಟದ ಸ್ವರೂಪದ ಬಗ್ಗೆ ಮಾಹಿತಿ ನೀಡಿದರು.

ನದಿ ತೀರದ ಹೋರಾಟ ಸಂಬಂಧ ಕರಾವಳಿ ತೀರಗಳಲ್ಲಿ ಜಾಗೃತಿ ಅಭಿಯಾನ ತೀವ್ರಗೊಳಿಸಲು ಹಾಗೂ ಅರಣ್ಯ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಸಭೆಯಲ್ಲಿ ನಿರ್ಧರಿಸಲಾಗಿದೆ
ಅನಂತ ಹೆಗಡೆ ಅಶೀಸರ, ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ

‘ಯೋಜನೆ ರಾಜಕೀಯಗೊಳಿಸದಿರಿ’

‘ಜನಪ್ರತಿನಿಧಿಗಳು ನದಿ ತಿರುವು ಯೋಜನೆಯನ್ನು ರಾಜಕೀಯಗೊಳಿಸದಂತೆ ಸಭೆಯು ಆಗ್ರಹಿಸಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಜವಾಬ್ದಾರಿಯಲ್ಲಿ ಈ ಯೋಜನೆಗಳಿರುವುದರಿಂದ, ಜಿಲ್ಲೆಯ ಎಲ್ಲ ಸಚಿವರು, ಸಂಸದರು ಹಾಗೂ ಶಾಸಕರು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ದೆಹಲಿ ಮತ್ತು ಬೆಂಗಳೂರಿನಲ್ಲಿ ಒತ್ತಡ ಹೇರಬೇಕು. ಯಾವುದೇ ರಾಜಕೀಯ ಹೇಳಿಕೆ, ಪ್ರತಿಹೇಳಿಕೆಗಳಿಗೆ ಆಸ್ಪದ ನೀಡದೆ, ಯೋಜನೆಗಳನ್ನು ಶಾಶ್ವತವಾಗಿ ಕೈಬಿಡುವಂತೆ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯ’ ಎಂದು ಸಮಿತಿ ನಿರ್ಣಯಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.