ADVERTISEMENT

‘ಇ– ಸ್ವತ್ತು ತಂತ್ರಾಂಶದಿಂದ ವಿನಾಯಿತಿ ನೀಡಿ’

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2018, 13:24 IST
Last Updated 4 ಅಕ್ಟೋಬರ್ 2018, 13:24 IST
ಇ–ಸ್ವತ್ತು ತಂತ್ರಾಂಶದಿಂದ ಜಿಲ್ಲೆಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ, ಗ್ರಾಮ ಪಂಚಾಯ್ತಿ ಒಕ್ಕೂಟಗಳ ಸದಸ್ಯರು ಶಿರಸಿಯಲ್ಲಿ ಪ್ರತಿಭಟನೆ ನಡೆಸಿದರು
ಇ–ಸ್ವತ್ತು ತಂತ್ರಾಂಶದಿಂದ ಜಿಲ್ಲೆಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ, ಗ್ರಾಮ ಪಂಚಾಯ್ತಿ ಒಕ್ಕೂಟಗಳ ಸದಸ್ಯರು ಶಿರಸಿಯಲ್ಲಿ ಪ್ರತಿಭಟನೆ ನಡೆಸಿದರು   

ಶಿರಸಿ: ಇ–ಸ್ವತ್ತು ತಂತ್ರಾಂಶ ಅನುಷ್ಠಾನಗೊಂಡಾಗಿನಿಂದ ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆ ಆಗುತ್ತಿದ್ದು, ಸಮಸ್ಯೆ ನಿವಾರಿಸಬೇಕು ಎಂದು ಒತ್ತಾಯಿಸಿ, ತಾಲ್ಲೂಕು ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಒಕ್ಕೂಟದ ಸದಸ್ಯರು ಗುರುವಾರ ಇಲ್ಲಿ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ತಂತ್ರಾಂಶ ತಂದ ಮೇಲೆ ಗ್ರಾಮೀಣ ಭಾಗದಲ್ಲಿ ಮನೆಗಳ ವಾರಸಾ ನೋಂದಣಿ ಆಗುತ್ತಿಲ್ಲ. ಅವಿಭಕ್ತ ಕುಟುಂಬಗಳು ವಿಭಕ್ತಗೊಂಡಾಗ ಮನೆ ಸಂಖ್ಯೆ ವಿಭಾಗಿಸಿಕೊಳ್ಳಲು ಆಗದೇ, ತೊಂದರೆಯಾಗುತ್ತಿದೆ. ಆಸ್ತಿ ಪರಭಾರೆ ಮಾಡಿದರೆ, ಖರೀದಿಸಿದ ವ್ಯಕ್ತಿಯ ಹೆಸರಿಗೆ ವರ್ಗಾವಣೆ ಆಗುತ್ತಿಲ್ಲ. ಹೊಸದಾಗಿ ಮನೆ ಕಟ್ಟಿದರೆ, ಮನೆ ಸಂಖ್ಯೆ ಪಡೆಯಲು ಆಗುತ್ತಿಲ್ಲ.

ಜಿಲ್ಲೆಯಲ್ಲಿ ಬಹುತೇಕ ಮನೆಗಳು ಬೆಟ್ಟ, ಅರಣ್ಯ ಜಾಗದಲ್ಲಿವೆ. ಅವುಗಳಿಗೆ ಇ–ಸ್ವತ್ತು ತಂತ್ರಾಂಶ ಬಳಕೆ ಮಾಡಲು ಆಗುತ್ತಿಲ್ಲ. ಸರ್ಕಾರ ಕ್ರಮ ಕೈಗೊಂಡು, ಈ ನಿಯಮದಿಂದ ಜಿಲ್ಲೆಗೆ ವಿನಾಯಿತಿ ನೀಡಬೇಕು. ಅರಣ್ಯ ಪ್ರದೇಶದಲ್ಲಿ ವಾಸಿಸುತ್ತ, ಪಂಚಾಯ್ತಿಗೆ ಕರ ಪಾವತಿಸುವವರಿಗೆ ಸರ್ಕಾರದ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ADVERTISEMENT

ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ, ಕಾನಗೋಡ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಲಜಾಕ್ಷಿ ಹೆಗಡೆ, ಇಟಗುಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೀತಾ ಬೋವಿ ನೇತೃತ್ವ ವಹಿಸಿದ್ದರು. ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.