ADVERTISEMENT

ಒಂದು ಮಗುವನ್ನು ವೇದಾಧ್ಯಯನಕ್ಕೆ ಮೀಸಲಿಡಿ: ಸ್ವರ್ಣವಲ್ಲಿ ಶ್ರೀಗಳ ಸಲಹೆ

ಕ್ಷೇತ್ರೀಯ ವೇದ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 11:53 IST
Last Updated 2 ನವೆಂಬರ್ 2019, 11:53 IST
ಶಿರಸಿ ತಾಲ್ಲೂಕಿನ ಸ್ವರ್ಣವಲ್ಲಿಯಲ್ಲಿ ನಡೆದ ವೇದ ಸಮ್ಮೇಳನದಲ್ಲಿ ಶಂಕರ ಭಟ್ಟಜೋಶಿ ದಂಪತಿಯನ್ನು ಸ್ವರ್ಣವಲ್ಲಿ ಶ್ರೀಗಳು ಸನ್ಮಾನಿಸಿದರು
ಶಿರಸಿ ತಾಲ್ಲೂಕಿನ ಸ್ವರ್ಣವಲ್ಲಿಯಲ್ಲಿ ನಡೆದ ವೇದ ಸಮ್ಮೇಳನದಲ್ಲಿ ಶಂಕರ ಭಟ್ಟಜೋಶಿ ದಂಪತಿಯನ್ನು ಸ್ವರ್ಣವಲ್ಲಿ ಶ್ರೀಗಳು ಸನ್ಮಾನಿಸಿದರು   

ಶಿರಸಿ: ಪ್ರತಿ ಕುಟುಂಬದಲ್ಲಿ ಒಂದು ಮಗುವನ್ನು ವೇದಾಧ್ಯಯನಕ್ಕೆ ಮೀಸಲಿಡಬೇಕು ಎಂದು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಕರೆ ನೀಡಿದರು.

ತಾಲ್ಲೂಕಿನ ಸ್ವರ್ಣವಲ್ಲಿಯಲ್ಲಿ ಆಯೋಜಿಸಿರುವ ಶನಿವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಕ್ಷೇತ್ರೀಯ ವೇದ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೃಷಿ ಮುಂದುವರಿಸಿಕೊಂಡು ಹೋಗಲು ಮನೆಯಲ್ಲಿ ಉಳಿಸಿಕೊಳ್ಳುವ ಮಗುವನ್ನು ವೇದ ಅಧ್ಯಯನಕ್ಕೆ ಕಳುಹಿಸಬೇಕು ಎಂದು ಬಹಳ ಹಿಂದೆ ಹೇಳಿದ್ದ ಫಲವಾಗಿ, ಕೆಲವು ಪಾಲಕರು ಮಕ್ಕಳನ್ನು ವೇದಾಧ್ಯಯನಕ್ಕೆ ಕಳುಹಿಸಿದ್ದಾರೆ. ಯುವ ತಲೆಮಾರಿನಲ್ಲಿ ವೇದ ಕಲಿಯುವ ಆಸಕ್ತಿ ಬೆಳೆಯುತ್ತಿರುವುದು ಆಶಾದಾಯಕವಾಗಿದೆ ಎಂದರು.

ಸೋದೆ ವಾದಿರಾಜ ಮಠಾಧೀಶ ವಿಶ್ವವಲ್ಲಭತೀರ್ಥ ಸ್ವಾಮೀಜಿ ಮಾತನಾಡಿ, ‘ಬ್ಮಾಹ್ಮಣನಾದವನು ವೇದಾಧ್ಯಯನ ಮಾಡಬೇಕು. ವೇದಗಳ ಅಧ್ಯಯನದ ಜತೆಗೆ ಸಂಸ್ಕೃತ ಭಾಷೆಯ ಅಧ್ಯಯನವೂ ಆಗಬೇಕು. ವೇದ ವಿದ್ವಾಂಸರು ಸಂಸ್ಕೃತ ಕಲಿಯುವ ಜತೆಗೆ, ಪಠಿಸುವ ಮಂತ್ರದ ಅರ್ಥ ತಿಳಿದಿರಬೇಕು’ ಎಂದರು.

ADVERTISEMENT

ಚನ್ನೇನಹಳ್ಳಿ ವೇದವಿಜ್ಞಾನ ಗುರುಕುಲ ಮುಖ್ಯಸ್ಥ ಡಾ.ರಾಮಚಂದ್ರ ಭಟ್ಟ ಕೋಟೆಮನೆ ದಿಕ್ಸೂಚಿ ಭಾಷಣ ಮಾಡಿದರು. ಋಷಿ ವಿಜ್ಞಾನವೇಭಾರತ ದೇಶದ ಸಂಪತ್ತು. ವೇದದ ವಿಚಾರದಲ್ಲಿ ದಿಕ್ಕನ್ನು ಸೂಚಿಸಿದವರು ಈ ಋಷಿಗಳು. ಅಂಥ ಮಹಾಪರಂಪರೆಯ ಧಾರೆ ಇಂದಿಗೂ ಹರಿಯುತ್ತಿದೆ. ಆಗ ಋಷಿಗಳು ಹೇಳಿರುವ ನಾಲ್ಕು ಪದಗಳಿಗೆ ಇಂದು ಬೆಲೆ ಸಿಗುತ್ತಿದೆ. ಸಂಸ್ಕೃತ ಶಿಕ್ಷಕರು, ಪ್ರಾಧ್ಯಾಪಕರು ಪಠ್ಯಕ್ರಮಕ್ಕೆ ಸೀಮಿತವಾಗದೇ, ವೇದ ವಾಙ್ಮಯ, ಸೂತ್ರ, ಭಾಷ್ಯದ ಅಧ್ಯಯನ ಮಾಡಬೇಕು. ಆ ಮೂಲಕ ಸಂಸ್ಕೃತಕ್ಕೆ ಆಗುತ್ತಿರುವ ಆಘಾತವನ್ನು ಸರಿಪಡಿಸಬೇಕು ಎಂದು ಹೇಳಿದರು.

ಉದ್ಯಮಿ ಡಾ.ವಿಜಯ ಸಂಕೇಶ್ವರ ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ, 58 ವರ್ಷಗಳ ಕಾಲ ಭಾರತೀಯ ಪರಂಪರೆ ವಿರೋಧಿಸಿದ್ದವರ ಕೈಯಲ್ಲಿ ದೇಶ ಇತ್ತು. ಆದರೂ ದೇಶದಲ್ಲಿ ಸನಾತನ ಧರ್ಮ ಗಟ್ಟಿಯಾಗಿ ಉಳಿದಿದೆ’ ಎಂದರು. ಉಜ್ಜಿಯಿನಿ ವೇದವಿದ್ಯಾ ಪ್ರತಿಷ್ಠಾನದ ಕಾರ್ಯದರ್ಶಿ ವಿರೂಪಾಕ್ಷ ಜಡ್ಡಿಪಾಲ ಮಾತನಾಡಿ, ‘ವೇದಗಳ ಪ್ರಚಾರ ಮತ್ತು ಪ್ರಸಾರ ಪ್ರತಿಷ್ಠಾನದ ಮೂಲ ಉದ್ದೇಶವಾಗಿದೆ. ದೇಶದ ವಿವಿಧೆಡೆಗಳಲ್ಲಿ ವೇದ ಸಂಬಂಧಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸಿ.ಡಿ, ಡಿವಿಡಿ ಜೊತೆಗೆ ಮಾನವ ಸಂಪನ್ಮೂಲ ಬಳಸಿಕೊಂಡು ವೇದ ಪ್ರಸಾರ ಕಾರ್ಯ ಮಾಡಲಾಗುತ್ತಿದೆ’ ಎಂದರು.

ಕೃಷ್ಣ ಯಜುರ್ವೇದ ವಿದ್ವಾಂಸ ಅನಂತಕೃಷ್ಣ ಘನಪಾಠಿ ಅವರ ಎರಡು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ವಿದ್ವಾಂಸರಾದ ಶಂಕರ ಭಟ್ಟಜೋಶಿ, ಶ್ರೀಧರ ಅಡಿ ಗೋಕರ್ಣ ಅವರನ್ನು ಶ್ರೀಗಳು ಸನ್ಮಾನಿಸಿದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಇದ್ದರು. ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಎನ್.ಜಿ.ಭಟ್ಟ ಭಟ್ರಕೇರಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.