ಗೋಕರ್ಣ: ಮಾಘ ಮಾಸದ ಅಮವಾಸ್ಯೆಯ ದಿನವಾದ ಗುರುವಾರ ಗೋಕರ್ಣದಲ್ಲಿ ಸಾವಿರಾರು ಭಕ್ತರು ಸಮುದ್ರ ತೀರದಲ್ಲಿ ತರ್ಪಣ, ದಾನ ಧರ್ಮ, ಪಡಿ ಸಮರ್ಪಿಸಿ ಕೃತಾರ್ಥರಾದರು.
ಕೆಲವರು ಸಮುದ್ರದಲ್ಲಿ ಸ್ನಾನ ಮಾಡಿ ದಡದಲ್ಲಿಕುಳಿತ ಭಿಕ್ಷುಕರಿಗೆ ಅಕ್ಕಿ, ಹಣ ದಾನ ಮಾಡಿದರು. ಇನ್ನು ಕೆಲವರು ಕೋಟಿತೀರ್ಥದಲ್ಲಿ ಸ್ನಾನ ಮಾಡಿ, ಮುಡಿ ಸಮರ್ಪಿಸಿ ಪಡಿ ನೀಡಿ ಧನ್ಯರಾದರು. ಈ ಪದ್ಧತಿ ಪರಂಪರಾಗತವಾಗಿ ನಡೆದುಕೊಂಡು ಬಂದಿದ್ದು, ಸುತ್ತಮುತ್ತಲಿನ ಹಳ್ಳಿಯ ಜನ ತಪ್ಪದೇ ಪಡಿ ಹಾಕುವ ಈ ಪದ್ಧತಿ ಮುಂದುವರೆಸಿಕೊಂಡು ಬಂದಿರುವುದು ವಿಶೇಷವಾಗಿದೆ.
ಗೋಕರ್ಣ ಪವಿತ್ರ ಕ್ಷೇತ್ರವಾದ್ದರಿಂದ ತಮ್ಮ ಪಿತೃಗಳ ಸಂತೃಪ್ತಿಗೋಸ್ಕರ ಸಮುದ್ರದಲ್ಲಿ ಸ್ನಾನ ಮಾಡಿ ತೆಂಗಿನಕಾಯಿ, ಅಕ್ಕಿ, ಹಣ ದಾನ ಮಾಡುವ ಪದ್ಧತಿ ಮೊದಲಿನಿಂದಲೂ ರೂಢಿಯಿಂದ ಬೆಳೆದು ಬಂದಿದೆ.
ತಿಲ ತರ್ಪಣ:- ತಮ್ಮ ಮೂರು ತಲೆಮಾರಿನ ಪಿತೃಗಳಿಗೆ ಹಾಗೂ ಬಂಧುಗಳಿಗೆ ಸಮುದ್ರ ದಂಡೆಯಲ್ಲಿ ತಿಲ ತರ್ಪಣ ನೀಡುವುದು ನಡೆದು ಬಂದ ಪದ್ಧತಿ. ಅದೇ ರೀತಿ ಈ ವರ್ಷವೂ ಸುತ್ತಮುತ್ತಲಿನ ಹಳ್ಳಿಯ ಜನರು ಪುರೋಹಿತರ ಸಹಾಯದೊಂದಿಗೆ ತಮ್ಮ ಪೂರ್ವಜರಿಗೆ ತರ್ಪಣ, ಪಿಂಡಪ್ರಧಾನ ಮಾಡಿ ಪಿತೃಗಳ ಆಶೀರ್ವಾದಕ್ಕೆ ಪಾತ್ರರಾದರು.
ಶುಕ್ರವಾರ ಬ್ರಹ್ಮರಥೋತ್ಸವ ನಡೆಯಲಿದೆ. ರಥ ಕಟ್ಟುವ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.