ಕಾರವಾರ: ‘ಗೋವು ತಾಯಿಗೆ ಸಮಾನ. ಅವುಗಳನ್ನು ಅನಾಥವಾಗಿ ಬಿಡದೇ, ಸೂಕ್ತ ರೀತಿಯಲ್ಲಿ ರಕ್ಷಣೆ ಮಾಡುವ ಕೆಲಸ ಸರ್ಕಾರ ಮಾಡಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ತಾಲ್ಲೂಕಿನ ಕಣಸಗಿರಿ ಗ್ರಾಮದಲ್ಲಿ ನಿರ್ಮಿಸಲಾದ ಸರ್ಕಾರಿ ಗೋಶಾಲೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಗೋವುಗಳನ್ನು ಸಲಹುವವರ ಸಂಖ್ಯೆ ವೃದ್ಧಿಯಾಗಬೇಕಾಗಿದೆ. ವಯಸ್ಸಾದ ಬಳಿಕ ಗೋವುಗಳನ್ನು ಸಾಕಲಾಗದೆ, ರಸ್ತೆಗೆ ಅಟ್ಟುವ ಕೆಲಸ ಯಾರಿಂದಲೂ ನಡೆಯಬಾರದು. ಕೃಷಿ, ಹೈನುಗಾರಿಕೆ ಚಟುವಟಿಕೆಗೆ ಪ್ರಯೋಜನ ಪಡೆದು ಬಳಿಕ ಗೋವು ಮರೆಯುವುದು ಮನುಷ್ಯತ್ವ ಅಲ್ಲ’ ಎಂದರು.
‘ಗೋವುಗಳನ್ನು ಸಲಹಲು ಸಾರ್ವಜನಿಕರು ಮುಂದೆ ಬರಬೇಕು. ಸಾಧ್ಯವಾಗದಿದ್ದರೆ ಬೀಡಾಡಿ ಗೋವುಗಳನ್ನು ಸರ್ಕಾರಿ ಗೋಶಾಲೆ ಸುಪರ್ದಿಗೆ ಒಪ್ಪಿಸಬೇಕು. ಜಿಲ್ಲೆಯಲ್ಲಿ ಈಗಾಗಲೇ 6 ಕಡೆ ಗೋಶಾಲೆ ತೆರೆಯಲಾಗಿದೆ. ಅನಾಥ ಗೋವುಗಳನ್ನು ರಕ್ಷಿಸಿ, ಗೋಶಾಲೆಗಳಲ್ಲಿ ಸಾಕಲಾಗುತ್ತದೆ. ಪೊಲೀಸ್ ಇಲಾಖೆಯಿಂದ ರಕ್ಷಿಸಲ್ಪಟ್ಟ ಗೋವುಗಳನ್ನು ಸಹ ಇಲ್ಲಿ ಸಾಕಲಾಗುವುದು’ ಎಂದರು.
ಶಾಸಕ ಸತೀಶ ಸೈಲ್, ಚಿತ್ತಾಕುಲ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತಿನ್ ಬಾಂದೇಕರ್, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ, ಪ್ರೊಬೇಷನರಿ ಐಎಎಸ್ ಅಧಿಕಾರಿ ಝುಪಿಶಾನ್ ಹಕ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಮೋಹನ ಕುಮಾರ್ ಇದ್ದರು.
ಜಿಲ್ಲೆಯ 6 ಕಡೆಗಳಲ್ಲಿ ಗೋಶಾಲೆ ಅನಾಥ ಗೋವುಗಳ ರಕ್ಷಣೆ ಗೋವು ಸಲಹುವವರ ಸಂಖ್ಯೆ ವೃದ್ಧಿಯಾಗಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.