ADVERTISEMENT

ಮತದಾರನಾಗಲು ’ಪದವೀಧರ’ರ ಹಿಂದೇಟು

ಪಶ್ಚಿಮ ಪದವೀಧರ ಕ್ಷೇತ್ರ:ಪದವಿ ಪಡೆದವರು ಲಕ್ಷ ದಾಟಿದ್ದರೂ ಪಟ್ಟಿಯಲ್ಲಿದ್ದವರು 13 ಸಾವಿರ

ಗಣಪತಿ ಹೆಗಡೆ
Published 4 ಅಕ್ಟೋಬರ್ 2025, 6:45 IST
Last Updated 4 ಅಕ್ಟೋಬರ್ 2025, 6:45 IST
<div class="paragraphs"><p>ಮತದಾನ</p></div>

ಮತದಾನ

   

– ‍ಪ್ರಜಾವಾಣಿ ಚಿತ್ರ

ಕಾರವಾರ: ಜಿಲ್ಲೆಯಲ್ಲಿ ಲಕ್ಷಾಂತರ ಪದವೀಧರರಿದ್ದರೂ ವಿಧಾನ ಪರಿಷತ್‌ನ ಪಶ್ಚಿಮ ಪದವೀಧರ ಕ್ಷೇತ್ರದ ಮತದಾರರ ಸಂಖ್ಯೆ ಮಾತ್ರ 13 ಸಾವಿರ ದಾಟುತ್ತಿಲ್ಲ. ಐದು ವರ್ಷಗಳ ಬಳಿಕ ಮತ್ತೆ ಪಟ್ಟಿ ಪರಿಷ್ಕರಣೆ ಆರಂಭಗೊಂಡಿದ್ದು ‘ಮತದಾರ’ರ ಹುಡುಕಾಟದಲ್ಲಿ ರಾಜಕೀಯ ಪಕ್ಷಗಳು ತೊಡಗಿವೆ.

ADVERTISEMENT

ಉತ್ತರ ಕನ್ನಡವನ್ನು ಒಳಗೊಂಡ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆ ಸೇರಿ ಪಶ್ಚಿಮ ಪದವೀಧರ ಕ್ಷೇತ್ರ ರಚನೆಯಾಗಿದೆ. 2020ರಲ್ಲಿ ನಡೆದ ಚುನಾವಣೆಗೆ ಮುನ್ನ ಸಿದ್ಧಗೊಂಡಿದ್ದ ಮತದಾರರ ಪಟ್ಟಿಯಲ್ಲಿ ಜಿಲ್ಲೆಯಿಂದ 7,113 ಪುರುಷ, 6,034 ಮಹಿಳಾ ಮತದಾರರು, ಒಬ್ಬರು ಲಿಂಗತ್ವ ಅಲ್ಪಸಂಖ್ಯಾತ ಸೇರಿ 13,148 ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದರು.

2026ರಲ್ಲಿ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಹೊಸದಾಗಿ ಮತದಾರರ ಪಟ್ಟಿ ಸಿದ್ಧಪಡಿಸುವ ಕೆಲಸ ಆರಂಭಗೊಂಡಿದೆ. ‘ಪದವೀಧರ ಮತದಾರ’ ಆಗಲು ಅರ್ಹತೆ ಹೊಂದಿರುವ ಸಾವಿರಾರು ಜನರಿದ್ದು ಎಷ್ಟು ಮಂದಿ ಮತದಾನದ ಹಕ್ಕು ಪಡೆಯಬಹುದು ಎಂಬ ನಿರೀಕ್ಷೆ ಇದೆ.

‘ಪದವೀಧರ ಮತದಾರರ ಪಟ್ಟಿಗೆ ಸೇರಿಸಲು ಪದವೀಧರರನ್ನು ಹುಡುಕಿ, ಅವರಿಂದ ದಾಖಲೆ ಸಂಗ್ರಹಿಸಿ, ಅವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಿಕೊಳ್ಳಲು ಸಾಕಷ್ಟು ಮನವೊಲಿಸಬೇಕಾಗುತ್ತದೆ. ಸರ್ಕಾರಿ ನೌಕರರ ಹೊರತಾಗಿ ಬಹುತೇಕ ಮಂದಿ ಸ್ವಯಂಪ್ರೇರಣೆಯಿಂದ ನೋಂದಣಿ ಮಾಡಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಅಂತಹವರನ್ನು ಬೆನ್ನಿಗೆ ಬಿದ್ದು ಹೆಸರು ನೋಂದಾಯಿಸುವ ಕೆಲಸ ನಾವೇ ಮಾಡಬೇಕಾಗುತ್ತದೆ’ ಎಂದು ರಾಜಕೀಯ ಪಕ್ಷವೊಂದರ ಮುಖಂಡರೊಬ್ಬರು ಹೇಳಿದರು.

‘ಪದವೀಧರ ಮತ ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾಯಿಸುವ ಅರ್ಹತೆ ಪಡೆಯಲು ದೇಶದ ಯಾವುದೇ ಅಧಿಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಮತದಾರರ ಪಟ್ಟಿ ಸಿದ್ಧಗೊಳ್ಳುವ ಪ್ರಕ್ರಿಯೆ ಕೊನೆಗೊಳ್ಳುವ ದಿನಕ್ಕಿಂತ 3 ವರ್ಷದ ಮೊದಲು ಅವರು ಪದವಿ ಪೂರೈಸಿದ ಪ್ರಮಾಣ ಪತ್ರ ಪಡೆದಿರಬೇಕು’ ಎಂದು ಚುನಾವಣೆ ಶಾಖೆಯ ಅಧಿಕಾರಿಗಳು ತಿಳಿಸಿದರು.

‘ಪದವೀಧರ ಕ್ಷೇತ್ರಕ್ಕೆ ಪ್ರತಿ 5 ವರ್ಷಕ್ಕೊಮ್ಮೆ ಮತದಾರರ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸಲಾಗುತ್ತದೆ. ಪದವೀಧರರು ಉದ್ಯೋಗದ ನಿಮಿತ್ತ ವಲಸೆ ಹೋಗುವುದು ಹೆಚ್ಚು. ಪದೇ ಪದೇ ಅವರ ಸ್ಥಳ ಬದಲಾಗುತ್ತಿರುತ್ತದೆ. ಅಲ್ಲದೇ ರಾಜ್ಯದಲ್ಲಿನ ಇತರ ಮೂರು ಪದವೀಧರ ಕ್ಷೇತ್ರಕ್ಕೂ ಬೇರೆ ಬೇರೆ ಸಮಯದಲ್ಲಿ ಚುನಾವಣೆ ನಡೆಯುತ್ತದೆ. ಹೀಗಾಗಿ, ಮತದಾನದಲ್ಲಿ ಗೊಂದಲಗಳು ಉಂಟಾಗಬಾರದು ಎಂಬ ಕಾರಣಕ್ಕೆ ಆಯಾ ಕ್ಷೇತ್ರ ವ್ಯಾಪ್ತಿಯ ಚುನಾವಣೆ ನಡೆಯುವ ಕೆಲ ತಿಂಗಳ ಮುಂಚೆ ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಈ ಹಿಂದೆ ಮತದಾರರಿದ್ದರೂ ಪುನಃ ಅಗತ್ಯ ದಾಖಲೆ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಇದೇ ವೇಳೆ ಹೊಸ ಮತದಾರರ ಹೆಸರನ್ನೂ ಪಟ್ಟಿಗೆ ಸೇರ್ಪಡೆಗೊಳಿಸಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.