ADVERTISEMENT

ಜಿಎಸ್‍ಟಿ ಸ್ಲ್ಯಾಬ್ | ಪರಿಷ್ಕರಣೆ ಅಗತ್ಯ: ಕೆಪಿಸಿಸಿ ಸದಸ್ಯ ದೀಪಕ ದೊಡ್ಡೂರು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 4:21 IST
Last Updated 6 ಸೆಪ್ಟೆಂಬರ್ 2025, 4:21 IST
ದೀಪಕ ದೊಡ್ಡೂರು
ದೀಪಕ ದೊಡ್ಡೂರು   

ಶಿರಸಿ: ಜಿಎಸ್‍ಟಿ ಪರಿಷ್ಕರಣೆ ಸ್ಲ್ಯಾಬ್‍ ಅನ್ನು ಕೇಂದ್ರ ಸರ್ಕಾರ ಏಕಾಏಕಿ ಜಾರಿ ಮಾಡುವ ಬದಲು ಕನಿಷ್ಠ ಮೂರು ತಿಂಗಳ ಸಮಯಾವಕಾಶ ನೀಡಿ ಜಾರಿ ಮಾಡಬೇಕಿತ್ತು. ಅದರಿಂದ ರಾಜ್ಯಗಳಿಗಾಗುವ ನಷ್ಟದ ಪ್ರಮಾಣ ಹೊಂದಿಸಿಕೊಳ್ಳಲು ಸಮಯ ಸಿಗುತ್ತಿತ್ತು ಎಂದು ಕೆಪಿಸಿಸಿ ಸದಸ್ಯ ದೀಪಕ ದೊಡ್ಡೂರು ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಜಿಎಸ್‍ಟಿ ಜಾರಿಯಾದಾಗ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದವು. ಅದರ ನಿವಾರಣೆಗೆ ಬಹಳ ಸಮಯ ಹಿಡಿದಿತ್ತು. ಪ್ರಸ್ತುತ ಸಮಯಾವಕಾಶ ನೀಡದೆ ಪರಿಷ್ಕೃತ ಸ್ಯಾಬ್ ಜಾರಿಮಾಡಿದರೆ ಮತ್ತೆ ಗೊಂದಲ ಸೃಷ್ಟಿಯಾಗುತ್ತದೆ. ಇದರ ಜತೆ, ರಾಜ್ಯಗಳಿಗಾಗುವ ನಷ್ಟ ಭರ್ತಿ ಮಾಡಿಕೊಳ್ಳಲು ಆಗುವುದಿಲ್ಲ. ಕಾರಣ ಜಿಎಸ್‍ಟಿ ಪರಿಷ್ಕರಣೆ ಸ್ಲ್ಯಾಬ್ ಮತ್ತೊಮ್ಮೆ ಚರ್ಚಿಸಿ ಜಾರಿ ಮಾಡುವ ಅಗತ್ಯವಿದೆ’ ಎಂದರು. 

‘ಬಿಜೆಪಿಯವರು ಕಾಂಗ್ರೆಸ್ಸಿನವರಿಗೆ ಹಿಂದುತ್ವ ಪಾಠ ಕಲಿಸುತ್ತಿದ್ದಾರೆ. ಧರ್ಮಸ್ಥಳ ಪ್ರಕರಣ ವಿಚಾರದಲ್ಲಿ ಎಸ್‍ಐಟಿ ರಚನೆ ಮಾಡಿದೆ. ಅಲ್ಲಿನ ಸತ್ಯಾಂಶ ಹೊರತರುವುದೇ ಎಸ್‍ಐಟಿ ಉದ್ದೇಶ. ಇದರಲ್ಲಿ ಯಾರೂ ರಾಜಕಾರಣ ಮಾಡಬಾರದು’ ಎಂದ ಅವರು, ‘ಧಾರ್ಮಿಕ ಭಾವನೆಯ ಪಾಠವನ್ನು ಹೇಳಿಕೊಡುವ ಅವಶ್ಯಕತೆ ನಮಗಿಲ್ಲ. ಹೆಗ್ಗಡೆ ಪರಿವಾರದ ಬಗ್ಗೆ ಆರೋಪ ಮಾಡುತ್ತಿರುವವರು ಯಾವ ಮೂಲದಿಂದ ಬಂದವರು? ಅದನ್ನು ನೋಡಬೇಕು’ ಎಂದರು. 

‘ಅನೇಕ ವರ್ಷಗಳಿಂದ ಸರ್ಕಾರದ ಕಾರ್ಯಕ್ರಮವನ್ನಾಗಿ ಮೈಸೂರು ದಸರಾವವನ್ನು ಆಚರಿಸಿಕೊಂಡು ಬರಲಾಗಿದೆ. ಈ ಬಾರಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಮುಖ್ಯಮಂತ್ರಿ ಆಯ್ಕೆ ಮಾಡಿದ್ದಾರೆ. ಇದರಲ್ಲೂ ಜಾತಿ ಧರ್ಮವನ್ನು ತರುವ ಕೆಲಸ ಬಿಜೆಪಿ ಮಾಡುತ್ತಿದೆ. ಸಮಾಜವನ್ನು ಬೇರೆ ದಿಕ್ಕಿಗೆ ಎಳೆಯುವ ಪ್ರಯತ್ನವನ್ನು ಬಿಜೆಪಿ ಬಿಡಬೇಕು’ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಜ್ಯೋತಿ ಪಾಟೀಲ, ಬಸವರಾಜ ದೊಡ್ಮನಿ, ಗಣೇಶ ದಾವಣಗೆರೆ, ಪ್ರದೀಪ ಶೆಟ್ಟಿ, ಗೀತಾ ಶೆಟ್ಟಿ, ಜಾಫೀ ಪೀಟರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.