ADVERTISEMENT

ಕಾರವಾರ|ಮಳೆಯ ಅಬ್ಬರ: ಇನ್ನೂ ನಾಲ್ಕು ದಿನ ರೆಡ್ ಅಲರ್ಟ್

​ಪ್ರಜಾವಾಣಿ ವಾರ್ತೆ
Published 23 ಮೇ 2025, 13:39 IST
Last Updated 23 ಮೇ 2025, 13:39 IST
ಕಾರವಾರ ತಾಲ್ಲೂಕಿನ ಅರಗಾದಲ್ಲಿ ಮಳೆ ಗಾಳಿಯ ಅಬ್ಬರಕ್ಕೆ ಮರ ಬಿದ್ದು ಹಾನಿಯಾದ ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪಂಚನಾಮೆ ನಡೆಸಿದರು
ಕಾರವಾರ ತಾಲ್ಲೂಕಿನ ಅರಗಾದಲ್ಲಿ ಮಳೆ ಗಾಳಿಯ ಅಬ್ಬರಕ್ಕೆ ಮರ ಬಿದ್ದು ಹಾನಿಯಾದ ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪಂಚನಾಮೆ ನಡೆಸಿದರು   

ಕಾರವಾರ: ಜಿಲ್ಲೆಯಾದ್ಯಂತ ಮಳೆ ಗಾಳಿಯ ಅಬ್ಬರ ಶುಕ್ರವಾರವೂ ಮುಂದುವರಿಯಿತು. ಇದರಿಂದ ವಿದ್ಯುತ್ ವ್ಯತ್ಯಯ ಸಮಸ್ಯೆ ಬಿಗಡಾಯಿಸಿತು.

ಜಿಲ್ಲೆಯಾದ್ಯಂತ ಶನಿವಾರದಿಂದ ಮುಂದಿನ ನಾಲ್ಕು ದಿನಗಳವರೆಗೆ ಭಾರಿ ಮಳೆ ಬೀಳಲಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ. ‘ಅರಬ್ಬಿ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳಲಿರುವ ಹಿನ್ನೆಲೆಯಲ್ಲಿ ಕಡಲತೀರದಲ್ಲಿನ ಜನರು ಸುರಕ್ಷಿತ ಸ್ಥಳಕ್ಕೆ ಸಾಗಬೇಕು. ದೋಣಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು’ ಎಂದೂ ಎಚ್ಚರಿಕೆ ನೀಡಲಾಗಿದೆ.

‘ಗಾಳಿಯ ಅಬ್ಬರಕ್ಕೆ ತಾಲ್ಲೂಕಿನ ಅರಗಾ ಗ್ರಾಮದಲ್ಲಿ ಎರಡು ಮನೆಗಳ ಮೇಲೆ ಮರಗಳು ಬಿದ್ದು ಭಾಗಶಃ ಹಾನಿ ಸಂಭವಿಸಿತು. ಜಿಲ್ಲೆಯಲ್ಲಿ ಒಂದೇ ದಿನ ಸುಮಾರು 15ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ’ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ನಿರಂತರವಾಗಿ ಸುರಿಯುತ್ತಿದ್ದ ಮಳೆ ಮತ್ತು ವೇಗದಿಂದ ಬೀಸಿದ ಗಾಳಿಯ ಪರಿಣಾಮ ವಿದ್ಯುತ್ ಮಾರ್ಗಗಳಲ್ಲಿ ಪದೇ ಪದೇ ಅಡಚಣೆ ಉಂಟಾಗುತ್ತಿದೆ. ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಹೆಸ್ಕಾಂ ಕಾರ್ಯವೈಖರಿಗೆ ಜನರು ಅಸಮಾಧಾನ ವ್ಯಕ್ತಪಡಿಸತೊಡಗಿದ್ದಾರೆ.

ಗುರುವಾರದಿಂದ ಶುಕ್ರವಾರ ಬೆಳಗಿನ ಜಾವದವರೆಗೆ ತಾಲ್ಲೂಕಿನ ವೈಲವಾಡಾದಲ್ಲಿ 15 ಸೆಂ.ಮೀ., ಅಮದಳ್ಳಿಯಲ್ಲಿ 14 ಸೆಂ.ಮೀ., ಕಡವಾಡ ಗ್ರಾಮದಲ್ಲಿ 11 ಸೆಂ.ಮೀ. ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.