ADVERTISEMENT

ಬೆಂಬಲಿಗರ ಸಂಭ್ರಮ; ಬಿಜೆಪಿ ಸೇರಲು ಸಿದ್ಧತೆ

ನ.18ರಂದು ಶಿವರಾಮ ಹೆಬ್ಬಾರ್ ನಾಮಪತ್ರ ಸಲ್ಲಿಕೆ

ಸಂಧ್ಯಾ ಹೆಗಡೆ
Published 1 ಡಿಸೆಂಬರ್ 2019, 12:46 IST
Last Updated 1 ಡಿಸೆಂಬರ್ 2019, 12:46 IST
ಶಿವರಾಮ ಹೆಬ್ಬಾರ್
ಶಿವರಾಮ ಹೆಬ್ಬಾರ್   

ಶಿರಸಿ: ಶಾಸಕರ ಅನರ್ಹತೆ ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಶಿವರಾಮ ಹೆಬ್ಬಾರ್ ಬೆಂಬಲಿಗರು ಚುರುಕುಗೊಂಡಿದ್ದಾರೆ. ಯಲ್ಲಾಪುರ ಕ್ಷೇತ್ರದ ಉಪಚುನಾವಣೆಗೆ ತೆರೆಮರೆಯಲ್ಲಿ ಸಿದ್ಧತೆ ಆರಂಭಿಸಿದ್ದ ಅವರು, ಬಹಿರಂಗವಾಗಿ ಮಾತನಾಡಲಾರಂಭಿಸಿದ್ದಾರೆ.

ಶಿವರಾಮ ಹೆಬ್ಬಾರ್ ಸೇರಿದಂತೆ ಅನರ್ಹಗೊಂಡಿರುವ ಎಲ್ಲ 17 ಶಾಸಕರು ಬಿಜೆಪಿ ಸೇರ್ಪಡೆಯಾಗುವ ನಿರ್ಧಾರ ಪ್ರಕಟಿಸುತ್ತಿದ್ದಂತೆ, ಹೆಬ್ಬಾರ್ ಬೆಂಬಲಿಗರು, ತಾವು ಕೂಡ ಬಿಜೆಪಿ ಸೇರುವುದಾಗಿ ಜನರ ಬಳಿ ಅಧಿಕೃತವಾಗಿ ಹೇಳುತ್ತಿದ್ದಾರೆ. ಇಲ್ಲಿಯವರೆಗೆ ತಟಸ್ಥವಾಗಿದ್ದ ಬಿಜೆಪಿಗರು, ಅನರ್ಹ ಶಾಸಕರ ವಿರುದ್ಧ ತೀರ್ಪು ಪ್ರಕಟಗೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದರು. ಒಂದೊಮ್ಮೆ ಹಾಗೆ ತೀರ್ಪು ಬಂದಲ್ಲಿ ಮೂಲ ಬಿಜೆಪಿ ನಾಯಕರನ್ನು ಕಣಕ್ಕಿಳಿಸಬಹುದೆಂಬ ಅವರ ಯೋಜನೆ ಹುಸಿಯಾಗಿದೆ.

‘ಹೆಬ್ಬಾರ್ ಬಿಜೆಪಿಗೆ ಬರುವುದಕ್ಕೆ ನಮ್ಮಲ್ಲೇ ಕೆಲವು ನಾಯಕರ ಆಂತರಿಕ ವಿರೋಧವಿದೆ. ಆದರೆ, ಸಿದ್ಧಾಂತವನ್ನು ಹೊಂದಿರುವ ಪಕ್ಷದ ಕಾರ್ಯಕರ್ತರು, ಯಾವತ್ತೂ ಹೈಕಮಾಂಡ್ ಆದೇಶವನ್ನು ಮೀರುವುದಿಲ್ಲ’ ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಉಪಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್ ಸ್ಪರ್ಧಿಸಲು ನನ್ನ ವಿರೋಧವಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಅವರು ತ್ಯಾಗ ಮಾಡಿ ಬಂದಿದ್ದಾರೆ. ಒಂದೊಮ್ಮೆ ಅವರಿಗೆ ಸ್ಪರ್ಧಿಸಲು ಅವಕಾಶವಾಗದಿದ್ದರೆ, ನಾನು ಟಿಕೆಟ್ ಆಕಾಂಕ್ಷಿ ಎಂದಿದ್ದು ನಿಜ. ಆದರೆ, ತೀರ್ಪು ಅವರ ಪರವಾಗಿ ಬಂದಿದೆ. ಹಿಂದೆ ಹೇಳಿರುವ ಮಾತಿಗೆ ಈಗಲೂ ಬದ್ಧನಿದ್ದು, ಚುನಾವಣೆಯಲ್ಲಿ ಅವರ ಪರವಾಗಿ ಕೆಲಸ ಮಾಡುತ್ತೇನೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಕ್ಕೆ ಜಯ ಸಿಕ್ಕಿದೆ. ಶಿವರಾಮ ಹೆಬ್ಬಾರ್ ಜತೆ, ಬನವಾಸಿ ಬ್ಲಾಕ್‌ನ 10 ಘಟಕಗಳಿಗೆ ಈ ಹಿಂದೆ ಅಧ್ಯಕ್ಷರಾಗಿದ್ದವರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿ ಸಾವಿರಕ್ಕೂ ಹೆಚ್ಚು ಮಂದಿ, ಶುಕ್ರವಾರ (ನ.15) ಬನವಾಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಜೆಪಿ ಸೇರುತ್ತೇವೆ’ ಎಂದು ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೆಬ್ಬಾರ್ ಜೊತೆ ಗುರುತಿಸಿಕೊಂಡಿರುವ ದ್ಯಾಮಣ್ಣ ದೊಡ್ಮನಿ ಹೇಳಿದರು.

ಯಲ್ಲಾಪುರ ಕ್ಷೇತ್ರ ವ್ಯಾಪ್ತಿಯ ಮುಂಡಗೋಡ, ಯಲ್ಲಾಪುರ ತಾಲ್ಲೂಕುಗಳ ಹಲವಾರು ಕಾಂಗ್ರೆಸ್ ಕಾರ್ಯಕರ್ತರು, ಈ ಹಿಂದೆ ಪದಾಧಿಕಾರಿಗಳಾಗಿದ್ದವರು, ಬಿಜೆಪಿ ಸೇರಲು ಅಣಿಯಾಗಿದ್ದಾರೆ. ಹೆಬ್ಬಾರ್ ಕ್ಷೇತ್ರಕ್ಕೆ ಬಂದ ಮೇಲೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.

ಚುರುಕಿನ ಚಟುವಟಿಕೆ

ಮುಂಚಿತವಾಗಿ ಅಭ್ಯರ್ಥಿ ಘೋಷಣೆ ಮಾಡಿರುವ ಕಾಂಗ್ರೆಸ್, ಕ್ಷೇತ್ರದ ಪ್ರತಿಸ್ಪರ್ಧಿ ಅಭ್ಯರ್ಥಿ ಯಾರೆಂದು ಖಚಿತವಾಗುತ್ತಿದ್ದಂತೆ ಚುನಾವಣೆ ಸಿದ್ಧತೆಯನ್ನು ಚುರುಕುಗೊಳಿಸಿದೆ. ಈಗಾಗಲೇ ಮನೆ–ಮನೆ ಭೇಟಿ, ಕ್ಷೇತ್ರ ಸಂಚಾರ ನಡೆಸಿರುವ ಕಾರ್ಯಕರ್ತರು ಇನ್ನಷ್ಟು ಸಕ್ರಿಯರಾಗಿದ್ದಾರೆ.

‘ನ್ಯಾಯ ಸಿಗುವ ವಿಶ್ವಾಸವಿತ್ತು...’

‘ಸುಪ್ರೀಂ ಕೋರ್ಟ್ ತೀರ್ಪನ್ನು ವಿನಮ್ರತೆಯಿಂದ ಸ್ವಾಗತಿಸುತ್ತೇನೆ. ತೀರ್ಪು ಇದೇ ರೀತಿ ಬರಬಹುದೆಂದು ನಿರೀಕ್ಷೆಯಿತ್ತು. ನಾನು ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯಲಾಗುವುದಿಲ್ಲ ಎಂಬ ಮಾತನ್ನು ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಹೇಳಿದ್ದೆ. ನ್ಯಾಯ ಸಿಗುವ ವಿಶ್ವಾಸವಿತ್ತು, ಸಿಕ್ಕಿದೆ. ಕ್ಷೇತ್ರದ ಜನರ ಪ್ರೀತಿ, ವಿಶ್ವಾಸದ ಆಧಾರದ ಮೇಲೆ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಸೋಮವಾರ (ನ.18) ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಸಲ್ಲಿಸುತ್ತೇನೆ’ ಎಂದು ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.