ADVERTISEMENT

ಹೊಸ ಕಾಯ್ದೆ ಜಾರಿಗೆ ಪರಿಣತರ ಸಮಿತಿ ರಚಿಸಿ

ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 16:50 IST
Last Updated 25 ಸೆಪ್ಟೆಂಬರ್ 2021, 16:50 IST
ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳದವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು. ಮಂಡಳಿಯ ಕಾರ್ಯಾಧ್ಯಕ್ಷ ರವೀಂದ್ರ ಜಿ.ನಾಯ್ಕ, ಕಾರ್ಯದರ್ಶಿ ಗೋಪಾಲಕೃಷ್ಣ ವೈದ್ಯ ಇದ್ದಾರೆ
ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳದವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು. ಮಂಡಳಿಯ ಕಾರ್ಯಾಧ್ಯಕ್ಷ ರವೀಂದ್ರ ಜಿ.ನಾಯ್ಕ, ಕಾರ್ಯದರ್ಶಿ ಗೋಪಾಲಕೃಷ್ಣ ವೈದ್ಯ ಇದ್ದಾರೆ   

ಶಿರಸಿ: ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಬರದಂತೆ ತಿದ್ದುಪಡಿ ಕಾನೂನು ಜಾರಿಗೆ ತರುವ ಸಲುವಾಗಿ ಶೀಘ್ರದಲ್ಲಿಪರಿಣತರ ಸಮಿತಿ ರಚಿಸಿ ಸಲಹೆ ಪಡೆಯುವಂತೆ ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳದವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಭೇಟಿಯಾಗಿ ಮನವಿ ಪತ್ರ ಸಲ್ಲಿಸಲಾಗಿದೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಅಧಿನಿಯಮ 1997 ಹಾಗೂ ತಿದ್ದುಪಡಿ ಅಧಿನಿಯಮದ ಬದಲು ಬೇರೊಂದು ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

‘ದೇವಸ್ಥಾನಗಳ ಆಡಳಿತ ಮಂಡಳಿಗೆ ಆಯಾ ದೇವಾಲಯದ ವ್ಯಾಪ್ತಿಯಲ್ಲಿರುವವರನ್ನು ಮಾತ್ರ ಪರಿಗಣಿಸಬೇಕು. ಪ್ರಧಾನ ಅರ್ಚಕರೊಬ್ಬರು ಕಡ್ಡಾಯವಾಗಿ ಆಡಳಿತ ಮಂಡಳಿಯಲ್ಲಿರಬೇಕು. ಸಂಪೂರ್ಣ ಆಡಳಿತದ ಅಧಿಕಾರ ಮಂಡಳಿಗೆ ಇರಬೇಕು‌. ಕಾರ್ಯನಿರ್ವಹಣಾಧಿಕಾರಿ ನೇಮಕಾತಿ ಮಾಡಬಾರದು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಸರ್ಕಾರಿ ಅಧಿಕಾರಿಗಳನ್ನು ಒಳಗೊಳ್ಳದೆ ಧಾರ್ಮಿಕ ಪರಿಷತ್ ರಚಿಸಬೇಕು. ಅಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿಷ್ಕಳಂಕ ಚರಿತ್ರೆಯ ವ್ಯಕ್ತಿಗಳು ಸದಸ್ಯರಾಗಬೇಕು. ರಾಜಕೀಯ ಹಿನ್ನೆಲೆ ಹೊಂದಿದವರಿಗೆ ಅವಕಾಶ ನೀಡಬಾರದು’ ಎಂದು ಮನವಿ ಮಾಡಿದ್ದಾರೆ.

‘ಅರ್ಚಕರ ನೇಮಕಾತಿ ಅಧಿಕಾರವನ್ನು ಆಡಳಿತ ಮಂಡಳಿಗೆ ನೀಡಬೇಕು. ದೇವಸ್ಥಾನಗಳು ನೀಡುವ ಸಾಮಾನ್ಯ ಸಂಗ್ರಹಣಾ ನಿಧಿಯ ಹಣವನ್ನು ಇತರ ಧರ್ಮಗಳ ಧಾರ್ಮಿಕ ಸಂಸ್ಥೆಗೆ ನೀಡದೇ ಅಗತ್ಯವಿರುವ ಹಿಂದೂ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಮಾತ್ರ ಬಳಸಬೇಕು’ ಎಂದೂ ಒತ್ತಾಯಿಸಿದ್ದಾರೆ.

ಮಹಾಮಂಡಳದ ಕಾರ್ಯಾಧ್ಯಕ್ಷ ಆರ್.ಜಿ.ನಾಯ್ಕ, ಕಾರ್ಯದರ್ಶಿ ಗೋಪಾಲಕೃಷ್ಣ ವೈದ್ಯ, ಸದಸ್ಯರಾದ ಮಾರುತಿ ಓಂಕಾರ, ವಿನಾಯಕ ಮಹಾಲೆ, ವಿ.ಆರ್.ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.