ಹೊನ್ನಾವರ: ಕಾಸರಕೋಡ ಟೊಂಕ ಸಮೀಪ ಕಡಲ ತೀರದಲ್ಲಿ ಆಮೆಗಳ ಪ್ರಸವ ವೇದನೆ ಒಂದೆಡೆಯಾದರೆ ಇನ್ನೊಂದೆಡೆ ಇದೇ ಜಾಗದಲ್ಲಿ ಜನ್ಮ ತಳೆಯುತ್ತಿರುವ ವಾಣಿಜ್ಯ ಬಂದರು ಸ್ಥಳೀಯ ಮೀನುಗಾರರಲ್ಲಿ ನೋವಿನ ಅಲೆ ಹೆಚ್ಚಿಸುತ್ತಿದೆ.
‘ಕಾಸರಕೋಡ ಟೊಂಕ ಆಮೆಗಳ ತವರಾಗಿದ್ದು ತಾವು ಪೂಜಿಸುವ ಕಡಲಾಮೆಗಳು ಇಲ್ಲಿನ ಸಮುದ್ರ ತೀರಕ್ಕೆ ಬಂದು ಮೊಟ್ಟೆ ಇಡುತ್ತವೆ’ ಎಂದು ಸ್ಥಳೀಯ ಮೀನುಗಾರರು ಹೇಳುತ್ತಾರೆ.
ಇದಕ್ಕೆ ಪುಷ್ಟಿ ನೀಡುವಂತೆ ಇಲ್ಲಿನ ಕಡಲ ತೀರದಲ್ಲಿ ಆಮೆಗಳು ಮೊಟ್ಟೆ ಇಡುವ ಘಟನೆಗಳು ಅನೇಕ ಬಾರಿ ನಡೆದಿವೆ. ಡಿ. 24ರಂದು ಕಡಲಾಮೆಯೊಂದು ತೀರಕ್ಕೆ ಬಂದು ಒಟ್ಟೂ 124 ಮೊಟ್ಟೆಗಳನ್ನು ಇಟ್ಟಿರುವ ಪ್ರಸ್ತುತ ಹಂಗಾಮಿನ ಮೊದಲ ಘಟನೆ ವರದಿಯಾಗಿತ್ತು. ಅರಣ್ಯ ಇಲಾಖೆಯ ಸಹಯೋಗದಲ್ಲಿ ಗೂಡು ನಿರ್ಮಿಸಿ ಸ್ಥಳೀಯರು ಆಮೆಮೊಟ್ಟೆಗಳನ್ನು ಸಂರಕ್ಷಿಸುವ ಕಾರ್ಯ ಮಾಡಿದ್ದರು. ಮಂಗಳವಾರ ಒಟ್ಟೂ 95 ಮರಿಗಳು ಮೊಟ್ಟೆಯೊಡೆದು ಗೂಡಿನಿಂದ ಹೊರಬಂದಿದ್ದು ಇವುಗಳನ್ನು ಕಡಲಿಗೆ ಬಿಡಲಾಗಿದೆ.
‘ಅಳಿವಿನಂಚಿನಲ್ಲಿರುವ ಆಮೆಗಳು ಟೊಂಕದಲ್ಲಿ ಆಶ್ರಯ ಪಡೆದು ಮೊಟ್ಟೆಗಳನ್ನು ಇಡುತ್ತಿವೆ. ಸೂಕ್ಷ್ಮವಾಗಿರುವ ಇಲ್ಲಿಯ ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ’ ಎಂದು ಸ್ಥಳೀಯರೊಂದಿಗೆ ಆಮೆಗಳ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿರುವ ಹೊನ್ನಾವರ ಫೌಂಡೇಶನ್ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಬಂದರು ನಿರ್ಮಾಣದ ಗುತ್ತಿಗೆ ಪಡೆದಿರುವ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಕಾಮಗಾರಿ ಕೈಗೊಳ್ಳಲು ತಯಾರಿ ನಡೆಸುತ್ತಿದೆ. ಕಾಮಗಾರಿಯ ಪೂರ್ವಭಾವಿಯಾಗಿ ಐಜಿಪಿ ಅಮಿತ್ ಸಿಂಗ್, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಇತರ ಹಿರಿಯ ಅಧಿಕಾರಿಗಳ ಜೊತೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ವಿವಾದ ತಣ್ಣಗಾಗಿಸುವ ಪ್ರಯತ್ನ ಕೈಗೊಂಡಿದ್ದಾರೆ.
ಕಳೆದ ವರ್ಷ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸಂಬಂಧಿಸಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸರ್ವೆ ಕೈಗೊಂಡಾಗ ಸ್ಥಳೀಯರಿಂದ ಭಾರಿ ಪ್ರತಿಭಟನೆ ನಡೆದಿತ್ತು. ಘಟನೆಗೆ ಸಂಬಂಧಿಸಿ ಕೆಲ ಮೀನುಗಾರ ಮುಖಂಡರನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ಕೂಡ ದಾಖಲಿಸಲಾಗಿತ್ತು. ನಂತರದ ದಿನಗಳಲ್ಲಿ ಸ್ಥಗಿತವಾಗಿದ್ದ ಬಂದರು ನಿರ್ಮಾಣದ ಕೆಲಸ ಮತ್ತೆ ಆರಂಭವಾಗುವ ಹಂತದಲ್ಲಿದೆ.
ಮೀನುಗಾರಿಕೆ ಬಂದ್ ಮಾಡಿ ಪ್ರತಿಭಟನೆ: ಎಚ್ಚರಿಕೆ ‘ವಾಣಿಜ್ಯ ಬಂದರು ಪ್ರವಾಸೋದ್ಯಮ ಸೀಬರ್ಡ್ ನೌಕಾನೆಲೆ ಮೊದಲಾದ ಯೋಜನೆಗಳಿಗಾಗಿ ಜಿಲ್ಲೆಯಲ್ಲಿ ಮೀನುಗಾರರು ತಮ್ಮ ಪಾರಂಪರಿಕ ನೆಲೆ ಹಾಗೂ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಬಂಡವಾಳಶಾಹಿಗಳ ಕೈಗೊಂಬೆಯಂತೆ ವರ್ತಿಸುತ್ತಿರುವ ಅಧಿಕಾರಿಗಳು ಟೊಂಕ ಕೇಣಿ ಮೊದಲಾದಡೆಗಳಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ಯೋಜನೆ ಜಾರಿಗೆ ತರಲು ಮುಂದಾದರೆ ಜಿಲ್ಲೆಯಲ್ಲಿ ಮೀನುಗಾರಿಕೆ ಬಂದ್ ಮಾಡಿ ಪ್ರತಿಭಟಿಸಲಾಗುವುದು’ ಎಂದು ಮೀನುಗಾರ ಮುಖಂಡರಾದ ರಾಜೇಶ ತಾಂಡೇಲ ಹಾಗೂ ಉಮಾಕಾಂತ ಹೊಸ್ಕಟ್ಟಾ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.