ADVERTISEMENT

ಅವಘಡ ನಡೆದರೆ ಕಂಪನಿ ವಿರುದ್ಧ FIR ದಾಖಲಿಸಿ : ಅಧಿಕಾರಿಗಳಿಗೆ ಸಚಿವ ವೈದ್ಯ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಮೇ 2025, 15:10 IST
Last Updated 22 ಮೇ 2025, 15:10 IST
ಮಂಕಾಳ ವೈದ್ಯ
ಮಂಕಾಳ ವೈದ್ಯ   

ಕಾರವಾರ: ‘ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಯಿಂದಾಗಿ ಅವಘಡ ಸಂಭವಿಸಿದರೆ ಹೆದ್ದಾರಿ ನಿರ್ಮಿಸಿದ ಗುತ್ತಿಗೆ ಕಂಪನಿಯ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧಿಕಾರಿಗಳಿಗೆ ಸೂಚಿಸಿದರು.

‘ಕಳೆದ ವರ್ಷ ಮಳೆಗಾಲದಲ್ಲಿ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಜಿಲ್ಲೆ ದೊಡ್ಡ ಅವಘಡ ಎದುರಿಸಿದೆ. ಈ ಬಾರಿ ಅಂತಹ ಸ್ಥಿತಿ ಉಂಟಾಗದಂತೆ ಎಚ್ಚರವಹಿಸಿ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ’ ಎಂದು ವರ್ಚುವಲ್ ಮೂಲಕ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಸೂಚನೆ ನೀಡಿದರು.

‘ಪ್ರಸಕ್ತ ಸಾಲಿನ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಮಾನವ ಜೀವ ಹಾನಿ ಆಗದಂತೆ ಅಗತ್ಯವಿರುವ ಎಲ್ಲಾ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಶಾಲೆಗಳು ಮತ್ತು ಅಂಗನವಾಡಿ ಕಟ್ಟಡಗಳ ಬಳಿ ಇರುವ ಅಪಾಯಕಾರಿ ಮರಗಳನ್ನು ತಕ್ಷಣ ತೆರವುಗೊಳಿಸಬೇಕು. ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದರೆ ಪರ್ಯಾಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು. ಅರಣ್ಯ ಇಲಾಖೆಯವರು ಅಪಾಯಕಾರಿ ಮರಗಳನ್ನು ತಕ್ಷಣವೇ ತೆರವುಗೊಳಿಸಬೇಕು’ ಎಂದರು.

ADVERTISEMENT

‘ಮಳೆಯಿಂದ ಹಾನಿ ಸಂಭವಿಸಿದ್ದಲ್ಲಿ ಸಂಬಂಭಪಟ್ಟವರಿಗೆ ತಕ್ಷಣವೇ ಪರಿಹಾರವನ್ನು ವಿತರಿಸಬೇಕು. ನೌಕಾನೆಲೆ ಪ್ರದೇಶದಲ್ಲಿನ ಜನಸವತಿ ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಪ್ರಸ್ತುತ ಈ ಪ್ರದೇಶಗಳಲ್ಲಿ ಈ ಬಾರಿ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದರು.

‘ಜಲಾಶಯಗಳಿಂದ ನೀರು ಹೊರಬಿಡುವ ಸಮಯದಲ್ಲಿ ಸಮುದ್ರದ ಉಬ್ಬರ ಮತ್ತು ಇಳಿತವನ್ನು ತಿಳಿದುಕೊಂಡು ನೀರು ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ವಿದ್ಯುತ್ ನಿಗಮಕ್ಕೆ (ಕೆಪಿಸಿ) ನಿರ್ದೇಶನ ನೀಡಿ’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಮಳೆಗಾಲದ ಪೂರ್ವಸಿದ್ಧತೆ ಕಾಮಗಾರಿಗಳ ಕುರಿತು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ವಿವರಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ವಿಭಾಗಾಧಿಕಾರಿ ಕನಿಷ್ಕ ಇದ್ದರು.

ಶಿರೂರು: ವಾಹನ ನಿಲುಗಡೆ ನಿಷೇಧ

ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಕಳೆದ ವರ್ಷ ಗುಡ್ಡ ಕುಸಿತ ದುರಂತ ನಡೆದ ಸ್ಥಳ ಮತ್ತು ಸುತ್ತಲಿನ ಒಂದೂವರೆ ಕಿ.ಮೀ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಆದೇಶಿಸಿದ್ದಾರೆ. ‘ಶಿರೂರಿನ ಗುಡ್ಡದ ತಪ್ಪಲಿನಲ್ಲಿ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡಬಾರದು. ಹೆದ್ದಾರಿಯ ಅಂಚಿನಲ್ಲಿ ನಿಂತು ಭಾವಚಿತ್ರಗಳನ್ನು ತೆಗೆಯುವುದಕ್ಕೂ ಅವಕಾಶ ಇಲ್ಲ. ಸಮೀಪದಲ್ಲಿರುವ ಗಂಗಾವಳಿ ನದಿಯಲ್ಲಿಯೂ ಮೀನುಗಾರಿಕೆ ಚಟುವಟಿಕೆ ನಡೆಸಲು ಅವಕಾಶವಿಲ್ಲ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.