ADVERTISEMENT

ಕಾರವಾರ: ಹುಲಿ ಸಂರಕ್ಷಿತ ಪ್ರದೇಶದಲ್ಲಿ ಉದ್ಯಾನ ಅಕ್ರಮ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 20:03 IST
Last Updated 21 ಜುಲೈ 2023, 20:03 IST
   

ಕಾರವಾರ: ಕಾಳಿ ಹುಲಿ ಸಂರಕ್ಷಿತ ಪ್ರದೇಶದ (ಕೆಟಿಆರ್) ಕುಂಬಾರವಾಡಾ ವನ್ಯಜೀವಿ ವಲಯದ ಕೋರ್ ಪ್ರದೇಶದಲ್ಲಿ ಆರ್ಕಿಡ್ ಉದ್ಯಾನ ನಿರ್ಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅರಣ್ಯ ಸಚಿವರಿಗೆ ದೂರು ಸಲ್ಲಿಕೆಯಾಗಿದೆ.

ನುಜ್ಜಿ ನದಿ ದಡದ ಬಳಿ ಮರಗಳನ್ನು ಕಡಿದು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಆರ್ಕಿಡ್ ಉದ್ಯಾನ ಕಳೆದ ಫೆಬ್ರವರಿಯಲ್ಲಿ ಉದ್ಘಾಟನೆಗೊಂಡಿದ್ದು, 40ಕ್ಕೂ ಹೆಚ್ಚು ಬಗೆಯ ಆರ್ಕಿಡ್‍ಗಳನ್ನು ಸಂರಕ್ಷಿಸಲಾಗುತ್ತಿದೆ.

‘ಆರ್ಕಿಡ್ ಉದ್ಯಾನದ ಅಭಿವೃದ್ಧಿಗೆ ₹ 35 ಲಕ್ಷ ಮಂಜೂರು ಮಾಡಲು ಉಪ ಅರಣ್ಯ ಸಂರಕ್ಷಣಾಧಿಕಾರಿಯು (ಡಿಸಿಎಫ್‌) ಹುಲಿ ಸಂರಕ್ಷಣಾ ಪ್ರತಿಷ್ಠಾನದ ಕ್ರಿಯಾಯೋಜನೆಯ ಅನುಮೋದನೆಗೆ ಪ್ರಸ್ತಾವ ಸಲ್ಲಿಸಿದ್ದರು. ಇದರ ಅನುಮೋದನೆಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಕೆ.ವಿ.ವಸಂತ ರೆಡ್ಡಿ 13ನೇ ರಾಜ್ಯ ಹುಲಿ ಸಂರಕ್ಷಣಾ ಪ್ರತಿಷ್ಠಾನ ನಿಧಿಯ ಆಡಳಿತ ಮಂಡಳಿ ಸಭೆಯಲ್ಲಿ ಶಿಫಾರಸ್ಸು ಮಾಡಿದ್ದರು. ಆದರೆ, ಆರ್ಕಿಡ್ ಉದ್ಯಾನ ನಿರ್ಮಾಣವೇ ಕಾನೂನು ಬಾಹಿರ. ಇದಕ್ಕೆ ಲಕ್ಷಾಂತರ ವೆಚ್ಚ ಮಾಡಿದ್ದು ತಪ್ಪು’ ಎಂದು ಪರಿಸರವಾದಿಯೊಬ್ಬರು ದೂರಿದ್ದರು.

ADVERTISEMENT

‘ಬಂಡೀಪುರ ಹುಲಿ ಸಂರಕ್ಷಣಾ ಪ್ರತಿಷ್ಠಾನದ ನಿಧಿಯನ್ನು ನಿರ್ದೇಶಕ ರಮೇಶ್ ಕುಮಾರ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರು ಆದೇಶಿಸಿದ್ದಾರೆ. ಇದರ ಬೆನ್ನಲ್ಲೆ ಕೆಟಿಆರ್ ಕೋರ್ ಪ್ರದೇಶದ ವ್ಯಾಪ್ತಿಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇರದಿದ್ದರೂ ನಿಯಮಾವಳಿ ಉಲ್ಲಂಘನೆಯಾಗಿದ್ದರ ಬಗ್ಗೆ ಅರಣ್ಯ ಸಚಿವರಿಗೆ ದೂರು ಕೊಡಲಾಗಿದೆ’ ಎಂದರು.

‘ನೀರಿನ ಟ್ಯಾಂಕ್ ಸಂರಕ್ಷಣೆ ನೆಪದಲ್ಲಿ ಲಕ್ಷಾಂತರ ಮೌಲ್ಯದ ಮರಗಳನ್ನು ಕಡಿದು ಹಾಕಿದ್ದ ಅಧಿಕಾರಿಗಳು ಬಳಿಕ ಅದೇ ಜಾಗದಲ್ಲಿ ಆರ್ಕಿಡ್ ಕಟ್ಟಡ ನಿರ್ಮಿಸಿದ್ದರು. ಈ ಬಗ್ಗೆ ಪಿಸಿಸಿಎಫ್‍ಗೂ ದೂರು ಸಲ್ಲಿಸಲಾಗಿತ್ತು. ಕಡಿದು ಹಾಕಿದ್ದ ಮರಗಳು ಇದ್ದ ಜಾಗದಲ್ಲಿಯೇ ಇವೆ. ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕ್ರಮವಾಗದ್ದಕ್ಕೆ ಪುನಃ ಆಕ್ಷೇಪಣೆ ಸಲ್ಲಿಸಲಾಗಿದೆ’ ಎಂದು ಕಾಳಿ ಬ್ರಿಗೇಡ್ ಸಂಚಾಲಕ ರವಿ ರೇಡ್ಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.