ADVERTISEMENT

‘ಸಂಪನ್ಮೂಲ ಬಳಕೆಯಲ್ಲಿ ಹಿಂದುಳಿದ ದೇಶ’

ಜಿಲ್ಲಾಮಟ್ಟದ ಚರ್ಚಾಸ್ಪರ್ಧೆಯ ಕಾರ್ಯಕ್ರಮದಲ್ಲಿ ಪರಿಸರವಾದಿ ಸುರೇಶ ಹೆಬ್ಳೀಕರ್

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 13:37 IST
Last Updated 25 ಜನವರಿ 2020, 13:37 IST
ಕಾರವಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ, ‘ಜಿಲ್ಲಾಮಟ್ಟದ ಅಂತರಕಾಲೇಜು ಚರ್ಚಾ ಸ್ಪರ್ಧೆ’ಯಲ್ಲಿ ಮೇಧಾ ಭಟ್ಟ ತೃತೀಯ, ಸ್ನೇಹಲ್ ನಾಯ್ಕ ಪ್ರಥಮ ಹಾಗೂ ಗಜಾನನ ಹೆಗಡೆ (ಎಡದಿಂದ) ದ್ವಿತೀಯ ಬಹುಮಾನಗಳನ್ನು ಗೆದ್ದುಕೊಂಡರು.
ಕಾರವಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ, ‘ಜಿಲ್ಲಾಮಟ್ಟದ ಅಂತರಕಾಲೇಜು ಚರ್ಚಾ ಸ್ಪರ್ಧೆ’ಯಲ್ಲಿ ಮೇಧಾ ಭಟ್ಟ ತೃತೀಯ, ಸ್ನೇಹಲ್ ನಾಯ್ಕ ಪ್ರಥಮ ಹಾಗೂ ಗಜಾನನ ಹೆಗಡೆ (ಎಡದಿಂದ) ದ್ವಿತೀಯ ಬಹುಮಾನಗಳನ್ನು ಗೆದ್ದುಕೊಂಡರು.   

ಕಾರವಾರ: ‘ಆರ್ಥಿಕ ಅಭಿವೃದ್ಧಿ, ಸಂಪನ್ಮೂಲಗಳ ಬಳಕೆಯಲ್ಲಿ ಪಾಶ್ಚಿಮಾತ್ಯ ದೇಶಗಳ ಮಾದರಿ ಅನುಸರಿಸಬೇಕು’ ಎಂದುಚಿತ್ರನಟ ಹಾಗೂ ಪರಿಸರವಾದಿ ಸುರೇಶ ಹೆಬ್ಳೀಕರ್ ಅಭಿಪ್ರಾಯಪಟ್ಟರು.

ಅವರು ನಗರದಲ್ಲಿ ಶನಿವಾರ ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕೆನರಾ ವೆಲ್‌ಫೇರ್ ಟ್ರಸ್ಟ್ ಹಮ್ಮಿಕೊಂಡಿದ್ದ, ‘ಜಿಲ್ಲಾಮಟ್ಟದ ಅಂತರಕಾಲೇಜು ಚರ್ಚಾ ಸ್ಪರ್ಧೆ’ಯ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಣು ವಿದ್ಯುತ್ ಒಂದೇ ಭಾರತದ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಬಲ್ಲುದೇ’ ಎಂಬ ವಿಷಯದ ಮೇಲೆ ಚರ್ಚಾಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ADVERTISEMENT

‘ಜಿಲ್ಲೆಯಲ್ಲಿ ಪ್ರಸ್ತುತ ಹೆಚ್ಚು ಸುದ್ದಿಯಲ್ಲಿರುವ ಅಣುಸ್ಥಾವರದ ಬಗ್ಗೆ ಹಮ್ಮಿಕೊಂಡ ಚರ್ಚಾಸ್ಪರ್ಧೆಯಿಂದ, ಮಕ್ಕಳಿಂದ ಪಾಲಕರು, ಪಾಲಕರಿಂದ ಸಮುದಾಯದವರೆಗೆ ಅಣು ವಿಕಿರಣದ ಸಾಧಕ ಬಾಧಕಗಳ ವಿಶ್ಲೇಷಣೆಸಾಧ್ಯವಾಗಿದೆ. ದೇಶದ ಅಭಿವೃದ್ಧಿಯು ಪರಿಸರದ ಮೇಲೆ ಅವಲಂಬಿತವಾಗಿದೆ.ಪರಿಸರ ಪೂರಕ ಯೋಜನೆಗಳನ್ನುಜಾರಿಗೆ ತರಲು ಸರ್ಕಾರ ಮುಂದಾಗಬೇಕು’ ಎಂದರು.

‘1985ರಲ್ಲಿ ನಾನೂ ಕೈಗಾ ಅಣುಸ್ಥಾವರ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದೆ.ಅಭಿವೃದ್ಧಿ ನೆಪದಲ್ಲಿ ಕಾಡು, ಜೀವಿಸಂಕುಲದ ನಾಶದ ಅಗತ್ಯವಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ.ನಿಸರ್ಗ ಬಿಟ್ಟು ಮನುಷ್ಯ ಬದುಕಲಾರ, ಅಭಿವೃದ್ಧಿಯೂ ಸಾಧ್ಯವಿಲ್ಲ. ನಮ್ಮ ದೇಶವು ಸಂಪನ್ಮೂಲಗಳ ಬಳಕೆಯಲ್ಲಿ ಹಿಂದುಳಿದಿದೆ. ಕೈಗಾದಲ್ಲಿ ಐದು ಮತ್ತು ಆರನೇ ಘಟಕ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಏಕೆ ಬೇಕು ಎಂಬುದು ಇಲ್ಲಿ ಪ್ರಶ್ನಾತೀತ’ ಎಂದು ಹೇಳಿದರು.

ಕಾರ್ಯಕ್ರಮದ ಪ್ರಾಯೋಜಕ ಸುಪ್ರೀಂಕೋರ್ಟ್ ವಕೀಲ ದೇವದತ್ತ ಕಾಮತ್ ಮಾತನಾಡಿ, ‘ಗ್ರಾಮಮಟ್ಟದಿಂದಲೂ ವಿಷಯಾಧಾರಿತ ಚರ್ಚೆ ನಡೆಯುವ ರೂಢಿ ಬೆಳೆಯಬೇಕು. ಇದೇ ಉದ್ದೇಶದಿಂದಇಂತಹ ಸ್ಪರ್ಧೆಯನ್ನು ಆಯೋಜಿಸುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಎಲ್ಲ ತರಹದ ಆಗುಹೋಗುಗಳಿಗೆ ಪ್ರತಿ ಪ್ರಜೆಯೂ ಹೊಣೆಗಾರನಾಗಿದ್ದಾನೆ’ ಎಂದರು.

ಕೆನರಾ ವೆಲ್‌ಫೇರ್ ಟ್ರಸ್ಟಿನ ಅಧ್ಯಕ್ಷ ಎಸ್.ಪಿ.ಕಾಮತ್, ಸಾಹಿತಿ ವಿಷ್ಣು ನಾಯ್ಕ,ಕೆ.ವಿ.ಶೆಟ್ಟಿ, ಚರ್ಚಾ ಸ್ಪರ್ಧೆಯ ಸಂಯೋಜಕಿ ಪೂಜಾ ನಾಯ್ಕ ಇದ್ದರು.ಈಶ್ವರ ಹೆಗಡೆ, ಅಶೋಕ ಶಾನಭಾಗ, ಅಂಜಲಿ ಮಾನೆ ಅವರು ಚರ್ಚಾಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

ದಿವೇಕರ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ.ಕೇಶವ ಕೆ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸ್ವಾತಿ ವೆರ್ಣೇಕರ್ ಅತಿಥಿಗಳನ್ನು ಪರಿಚಯಿಸಿದರು.ಟ್ರಸ್ಟ್‌ನ ಆಡಳಿತಾಧಿಕಾರಿ ಕೆ.ವಿ.ಶೆಟ್ಟಿ ವಂದಿಸಿದರು.

ಸ್ನೇಹಲ್ ನಾಯ್ಕ ಪ್ರಥಮ:ಚರ್ಚಾಸ್ಪರ್ಧೆಯಲ್ಲಿಅಂಕೋಲಾ ಜಿ.ಸಿ.ಕಾಲೇಜಿನ ಸ್ನೇಹಲ್ ನಾಯಕ ಪ್ರಥಮ ಸ್ಥಾನ ಗೆದ್ದುಕೊಂಡು, ₹50 ಸಾವಿರ ನಗದು ಬಹುಮಾನಪಡೆದುಕೊಂಡರು. ಶಿರಸಿ ಎಂ.ಇ.ಎಸ್. ಕಾಲೇಜಿನ ಗಜಾನನ ಹೆಗಡೆ ದ್ವಿತೀಯ ಸ್ಥಾನದೊಂದಿಗೆ ₹30 ಸಾವಿರ ಹಾಗೂ ಹೊನ್ನಾವರ ಎಸ್.ಡಿ.ಎಂ. ಕಾಲೇಜಿನ ಮೇಧಾ ಭಟ್ಟ ತೃತೀಯ ಸ್ಥಾನ ಗೆದ್ದು₹ 20 ಸಾವಿರವನ್ನು ತಮ್ಮದಾಗಿಸಿಕೊಂಡರು.

ಯಲ್ಲಾಪುರದ ವೈ.ಟಿ.ಎಸ್.ಎಸ್ ಕಾಲೇಜಿನ ಸಹನಾ ನಾಯಕ ಹಾಗೂ ಕುಮಟಾದ ಕಮಲಾಬಾಯಿ ಬಿ.ಇಡಿ ಕಾಲೇಜಿನ ಸಂಗೀತಾ ಶೆಟ್ಟಿ ಸಮಾಧಾನಕರ ಬಹುಮಾನ ಪಡದರು. ಅವರಿಗೆತಲಾ₹ 5ಸಾವಿರ ನಗದುವಿತರಿಸಲಾಯಿತು.

ಸ್ಪರ್ಧೆಗೆ ವಿವಿಧ ತಾಲ್ಲೂಕುಗಳ 15 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಅವರಲ್ಲಿ 14 ಸ್ಪರ್ಧಿಗಳು ಬಾಲಕಿಯರೇ ಆಗಿದ್ದು ವಿಶೇಷವಾಗಿತ್ತು. ಪಾಲ್ಗೊಂಡಿದ್ದ ಎಲ್ಲಾ 15 ಸ್ಪರ್ಧಿಗಳಿಗೂ ತೆಂಗಿನ ಗಿಡ, ಬ್ಯಾಗ್‌ಹಾಗೂ₹ 2,000 ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.