ADVERTISEMENT

ಅಂತರ್ಜಾತಿ ವಿವಾಹ: ಕುಟುಂಬಗಳ ನಡುವೆ ಕಲಹ

​ಪ್ರಜಾವಾಣಿ ವಾರ್ತೆ
Published 20 ಮೇ 2019, 20:18 IST
Last Updated 20 ಮೇ 2019, 20:18 IST

ಶಿರಸಿ: ಅಂತರ್ಜಾತಿ ವಿವಾಹವಾಗಿರುವ ಯುವಕ–ಯುವತಿಯ ಕುಟುಂಬದವರ ನಡುವೆ ನಡೆದ ಹೊಡೆದಾಟದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಫಕೀರಪ್ಪ ಹರಿಜನ, ಬಂಗಾರಪ್ಪ ಚನ್ನಯ್ಯ ಗಾಯಗೊಂಡವರು.

ತಾಲ್ಲೂಕಿನ ಬನವಾಸಿ ಸಮೀಪ ಸಂತೊಳ್ಳಿಯ ಕೃಷ್ಣ ಚನ್ನಯ್ಯ ಎಂಬುವರು ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಮಡಿವಾಳ ಸಮುದಾಯ ಯುವತಿಯನ್ನು ಎಂಟು ದಿನಗಳ ಹಿಂದೆ ಬೆಂಗಳೂರಿನಲ್ಲಿ ವಿವಾಹವಾಗಿದ್ದರು. ಇದಕ್ಕೆ ಯುವತಿ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಪ್ರೀತಿಸಿದ ಇವರಿಬ್ಬರು ಬನವಾಸಿಗೆ ಬಂದಿರುವ ವಿಷಯ ತಿಳಿದ ಯುವತಿಯ ಚಿಕ್ಕಪ್ಪ ಹೊಳಿಯಪ್ಪ ಶಾನವಳ್ಳಿ, ಸೋಮವಾರ ಸಂಬಂಧಿಕರ ಜೊತೆಗೂಡಿ ಯುವಕನ ಮನೆಗೆ ಬಂದು, ಇವರಿಬ್ಬರೂ ವಿವಾಹವಾಗಿರುವುದಕ್ಕೆ ಯಾವುದೇ ಅಧಿಕೃತ ದಾಖಲೆಯ ಇಲ್ಲವೆಂದು ಹೇಳಿ, ಆಕೆಯನ್ನು ಅಪಹರಿಸುವ ಯೋಜನೆ ರೂಪಿಸಿದ್ದರು. ಆದರೆ, ಅವರು ಬಂದಾಗ ನವಜೋಡಿ ಮನೆಯಲ್ಲಿ ಇರಲಿಲ್ಲ. ಈ ಸಂದರ್ಭದಲ್ಲಿ ಕೃಷ್ಣ ಚನ್ನಯ್ಯ ಅವರ ಸಹೋದರ ಹಾಗೂ ಮಾವನ ಮೇಲೆ ಅವರು ಹಲ್ಲೆ ನಡೆಸಿದ್ದಾರೆ. ನಂತರ ಎರಡೂ ಕುಟುಂಬದವರು ಹೊಡೆದಾಡಿಕೊಂಡಿದ್ದಾರೆ ಎಂದು ಬನವಾಸಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ವಿವರಿಸಲಾಗಿದೆ. ಎರಡೂ ಕುಟುಂಬಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಗಾಯಾಳುಗಳನ್ನು ಶಿರಸಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಕೆಲವು ದಿನಗಳ ಹಿಂದಷ್ಟೇ ಯುವತಿಯ ಕಡೆಯವರು ಕೃಷ್ಣ ಚನ್ನಯ್ಯ ವಿರುದ್ಧ ಬನವಾಸಿ ಠಾಣೆಗೆ ದೂರು ನೀಡಿದ್ದರು. ಪ್ರೀತಿಸಿದ್ದ ಯುವಕ–ಯುವತಿ ಇಬ್ಬರೂ ವಯಸ್ಕರಾದ್ದರಿಂದ ಎರಡು ಕುಟುಂಬಗಳ ನಡುವೆ ರಾಜಿ ಮಾಡಿಸಿ, ಕಳುಹಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.