ADVERTISEMENT

ಹೂಳಿನಿಂದ ಆವೃತ: ಕಾಯಕಲ್ಪಕ್ಕೆ ಕಾಯುತ್ತಿರುವ ಕದಂಬ ಕಾಲದ ಕೆರೆ

ರಾಜೇಂದ್ರ ಹೆಗಡೆ
Published 22 ಏಪ್ರಿಲ್ 2024, 7:50 IST
Last Updated 22 ಏಪ್ರಿಲ್ 2024, 7:50 IST
ಹೂಳಿನಿಂದ ತುಂಬಿರುವ ಶಿರಸಿ ತಾಲ್ಲೂಕಿನ ಗುಡ್ನಾಪುರ ಕೆರೆ ನೋಟ
ಹೂಳಿನಿಂದ ತುಂಬಿರುವ ಶಿರಸಿ ತಾಲ್ಲೂಕಿನ ಗುಡ್ನಾಪುರ ಕೆರೆ ನೋಟ   

ಶಿರಸಿ: ತಾಲ್ಲೂಕಿನ ಗುಡ್ನಾಪುರದ ಕೆರೆಯ ಬಹುಭಾಗ ಹೂಳಿನಿಂದ ತುಂಬಿದ್ದು, ಕಾಯಕಲ್ಪಕ್ಕೆ ಕಾಯುತ್ತಿದೆ.

ಕದಂಬ ರಾಜ ಮನೆತನದ ರಾಜಾ ರವಿವರ್ಮ ಆರನೇ ಶತಮಾನದಲ್ಲಿ ನಿರ್ಮಿಸಿದ್ದ ಎನ್ನಲಾದ ಈ ಕೆರೆ 168 ಎಕರೆ ವಿಸ್ತೀರ್ಣ ಹೊಂದಿದ್ದು, ರಾಜ್ಯದ ದೊಡ್ಡ ಕೆರೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ರಾಜಾ ರವಿವರ್ಮ ತನ್ನ ರಾಣಿಯ ಪರಿಸರ ಹಾಗೂ ಕೃಷಿ ಪ್ರೀತಿಗೆ ಗುಡ್ಡತಟಾಕ ಎಂಬ ಈ ಕೆರೆ ಕಟ್ಟಿಸಿದ್ದ. ಈ ಕೆರೆ ನೀರು ಸುತ್ತಲ ಮೂರು ಗ್ರಾಮಗಳಿಗೆ ನೀರಿನ ಬಲ ಒದಗಿಸುತ್ತಿತ್ತು  ಎಂಬುದು ಇತಿಹಾಸ. ಆದರೆ ಪ್ರಸ್ತುತ ಕೆರೆಯ ಕೆಲ ಭಾಗದಲ್ಲಿ ಮಾತ್ರ ನೀರು ಸಂಗ್ರಹವಿದೆ. ಉಳಿದಂತೆ ಸಂಪೂರ್ಣ ಹೂಳಿನಿಂದ ಕೂಡಿದ್ದು, ನೀರ ಕೊರತೆಯ ಪರಿಣಾಮ ಬಿರುಕು ಬಿಡುತ್ತಿದೆ. 

‘ಎಲ್ಲೆಡೆ ಬಿರುಬಿಸಿಲಿನ ಕುಡಿಯುವ ನೀರಿಗೆ ಬರ ಬಂದರೂ ತಾಲ್ಲೂಕಿನ ಬನವಾಸಿ ಸಮೀಪದ ಗುಡ್ನಾಪುರ ಕೆರೆಯಲ್ಲಿ ಮಾತ್ರ ಜೀವ ಜಲ ಸೆಲೆಯಾಗಿದೆ. ಪ್ರಸ್ತುತ ಈ ಕೆರೆಯ ಶೇ 20ರಷ್ಟು ಭಾಗದಲ್ಲಿ 10 ಅಡಿಗಳಷ್ಟು ನೀರು ತುಂಬಿದೆ. ಉಳಿದಂತೆ ನೂರಾರು ಎಕರೆ ಪ್ರದೇಶದಲ್ಲಿಯೂ ಸರಿಯಾದ ನಿರ್ವಹಣೆಯಿಲ್ಲದೆ ಹೂಳು ಆವರಿಸಿದ್ದು ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇಲ್ಲದಂತಾಗಿದೆ. ಹೂಳಿನ ಜತೆಗೆ ಸಾರ್ವಜನಿಕರು ಎಸೆದ ಪ್ಲಾಸ್ಟಿಕ್ ಮತ್ತು ಇನ್ನಿತರ ತ್ಯಾಜ್ಯಗಳು ಕೆರೆಯ ಒಡಲು ಸೇರುತ್ತಿವೆ. ರಸ್ತೆಯ ಪಕ್ಕದಲ್ಲಿ ಕೆರೆ ಇದ್ದರೂ ಸುರಕ್ಷಿತ ತಡೆಗೋಡೆಯೂ ಇಲ್ಲ. ಕೆರೆ ದಂಡೆಯಲ್ಲಿ ಬಂಗಾರೇಶ್ವರ ದೇವಾಲಯವಿದೆ. ವಾರ್ಷಿಕ ಸಾವಿರಾರು ಭಕ್ತರು ಆಗಮಿಸುತ್ತಾರೆ. ಹೀಗೆ ಬರುವ ಭಕ್ತರಲ್ಲಿ ಕೆಲವರು ಕೆರೆಗೆ ಕೋಳಿ, ಬಟ್ಟೆ ಇನ್ನಿತರ ತ್ಯಾಜ್ಯವನ್ನು ಎಸೆದು ನೀರನ್ನು ಕಲುಷಿತಗೊಳಿಸುತ್ತಿದ್ದಾರೆ’ ಎಂಬುದು ಸಾರ್ವಜನಿಕರ ದೂರು.

ADVERTISEMENT

‘20 ಅಡಿಗೂ ಮಿಕ್ಕಿ ಆಳವಿರುವ ಕೆರೆಯಲ್ಲಿ ತುಂಬಿದ ಹೂಳನ್ನು ತೆರವುಗೊಳಿಸಿ, ಕೆರೆ ಸುತ್ತ ದಂಡೆಯನ್ನು ಕಟ್ಟಿ ಸುತ್ತಲಿನ ಕೊಳಕು ನೀರು, ತ್ಯಾಜ್ಯ ಕೆರೆ ಸೇರದಂತೆ ಮಾಡಬೇಕು. ಕೃಷಿಗೆ ಕೆರೆಯ ನೀರನ್ನು ಹರಿದು ಹೋಗುವಂತೆ ವ್ಯವಸ್ಥೆ ಮಾಡುವ ಜತೆ ಕೆರೆಯ ಅಭಿವೃದ್ಧಿಯಿಂದ ಅಂತರ್ಜಲ ಹೆಚ್ಚಿ ಸುತ್ತ ಮುತ್ತಲಿನ ಬಾವಿಗಳಿಗೆ ನೀರಿನ ಸಮಸ್ಯೆ ನೀಗಿಸಬಹುದು. ಜತೆಗೆ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಬಹುದಾಗಿದೆ. ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಎದುರಿಸುತ್ತಿರುವುದರಿಂದ ಈ ಕೆರೆಯನ್ನು ಶೀಘ್ರದಲ್ಲಿ ಅಭಿವೃದ್ಧಿಪಡಿಸಬೇಕು’ ಎಂಬುದು ಗ್ರಾಮಸ್ಥರ ಆಗ್ರಹ.

ಕೆರೆ ಹೂಳೆತ್ತಿ ಮತ್ತು ನೀರು ಹಾಳಾಗದಂತೆ ಅಭಿವೃದ್ಧಿಗೊಳಿಸಬೇಕು. ಕೆರೆಯ ನೀರು ಅಂತರ್ಜಲ ಮಾತ್ರವಲ್ಲದೇ ತೋಟ ಕೃಷಿಗೂ ಅನುಕೂಲವಾಗುತ್ತದೆ
ರಾಘವೇಂದ್ರ ನಾಯ್ಕ ಸ್ಥಳೀಯ
ಅತಿ ದೊಡ್ಡ ಕೆರೆಯಾದ್ದರಿಂದ ಇದರ ಸಂಪೂರ್ಣ ಸರಿಪಡಿಸಲು ಕೋಟ್ಯಂತರ ರೂಪಾಯಿ ಅನುದಾನ ಬೇಕು. ಇದರ ಬಗ್ಗೆ ಗ್ರಾಮ ಪಂಚಾಯಿತಿಯಿಂದ ಹಲವಾರು ಬಾರಿ ಸರ್ಕಾರದ ಗಮನಕ್ಕೆ ತರಲಾಗಿದೆ
ನಿರ್ಮಲಾ ನಾಯ್ಕ ಗುಡ್ನಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.