ADVERTISEMENT

ಶಿರಸಿ: ಕದಂಬೋತ್ಸವದಲ್ಲಿ ಕಲಾ ವೈವಿಧ್ಯ

ಫೆ.6ರಿಂದ ಅನಾವರಣಗೊಳ್ಳಲಿರುವ ಉತ್ಸವದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 14:06 IST
Last Updated 4 ಫೆಬ್ರುವರಿ 2020, 14:06 IST
ಹರೀಶ ನಾಯ್ಕ
ಹರೀಶ ನಾಯ್ಕ   

ಶಿರಸಿ: ತಾಲ್ಲೂಕಿನ ಬನವಾಸಿಯಲ್ಲಿ ಫೆ.8 ಮತ್ತು 9ರಂದು ನಡೆಯುವ ಕದಂಬೋತ್ಸವದಲ್ಲಿ ಈ ಬಾರಿ ವೈವಿಧ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಫೆ.8ರ ಬೆಳಿಗ್ಗೆ 6 ಗಂಟೆಗೆ ಗುಡ್ನಾಪುರ ರಾಣಿ ನಿವಾಸದಿಂದ ಬನವಾಸಿ ಮಧುಕೇಶ್ವರ ದೇವಾಲಯದವರೆಗೆ ಐದು ಕಿ.ಮೀ ಮ್ಯಾರಥಾನ್ ಸ್ಪರ್ಧೆ ನಡೆಯಲಿದೆ. ಪ್ರೊ ಕಬಡ್ಡಿ ಆಟಗಾರ ಹರೀಶ ನಾಯ್ಕ ಉದ್ಘಾಟಿಸುವರು. ಆಸಕ್ತರು ದೈಹಿಕ ಶಿಕ್ಷಣ ಶಿಕ್ಷಕ ಬಿ.ವಿ.ಗಣೇಶ (9448893933) ಅವರನ್ನು ಸಂಪರ್ಕಿಸಬಹುದು. ಪ್ರಥಮ ಬಹುಮಾನ ₹ 11ಸಾವಿರ, ದ್ವಿತೀಯ ₹ 7000, ತೃತೀಯ ₹ 5000 ಮೊತ್ತ ನಿಗದಿಪಡಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಮಾಹಿತಿ ನೀಡಿದ ಅವರು, ‘ಫೆ. 6ರ ಬೆಳಿಗ್ಗೆ ಗುಡ್ನಾಪುರದಲ್ಲಿ ಕದಂಬ ಜ್ಯೋತಿ ಉದ್ಘಾಟನೆ, ನಂತರ ಸಂಜೆ 6ರಿಂದ ಶಿರಸಿಯ ಮಿತ್ರಾ ಮ್ಯೂಸಿಕಲ್ಸ್ ಪ್ರಕಾಶ ಹೆಗಡೆ ಅವರಿಂದ ಭಕ್ತಿಗೀತೆ, ಗುಡ್ನಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಪರಿಸರದ ಕುರಿತು ಕಿರು ನಾಟಕ, ಶಿರಸಿಯ ಅಭಿಷೇಕ ನೇತ್ರೇಕರ ಶಿವತಾಂಡವ ನೃತ್ಯ, ತನುಶ್ರೀ ನಾಯ್ಕ ಭರತನಾಟ್ಯ, ಸ್ನೇಹಶ್ರೀ ಹೆಗಡೆ ರಿಂಗ್ ಡಾನ್ಸ್, ಸ್ಮಾರ್ಟ್ ಗ್ರೂಪ್ ಕಲಾವಿದರಿಂದ ಆಧುನಿಕ ನೃತ್ಯ, ನೈದಿಲೆ ಹೆಗಡೆ ಹಿಂದುಸ್ತಾನಿ ಸಂಗೀತ, ದಿವ್ಯಶ್ರೀ ಶೇಟ್ ದೇವಿ ನೃತ್ಯ ವೈಭವ ರೂಪಕ, ಶ್ರುತಿ ಭಟ್ಟ ಸಂಗಡಿಗರಿಂದ ಸುಗಮ ಸಂಗೀತ, ಭಟ್ಕಳದ ಫ್ರೆಂಡ್ಸ್ ಮೆಲೋಡಿಸ್‌ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಸಂಘಟಿಸಲಾಗಿದೆ’ ಎಂದರು.

ADVERTISEMENT

ಫೆ.7ರ ಕ್ರೀಡಾಕೂಟದಲ್ಲಿ ಪುರುಷರ ಕಬಡ್ಡಿ, ಮಹಿಳೆಯರಿಗೆ ಹಗ್ಗಜಗ್ಗಾಟ, ಮಡಿಕೆ ಒಡೆಯುವ, ಸಂಗೀತ ಕುರ್ಚಿ, ಸ್ಲೊ ಮೊಪೆಡ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಫೆ.8ರಂದು ಬನವಾಸಿ ಮಯೂರವರ್ಮ ವೇದಿಕೆಯಲ್ಲಿ ಸಂಜೆ 4ರಿಂದ ಎನ್.ವಿ.ಲಲಿತಾ ತಂಡದವರ ಭಕ್ತಿಗೀತೆ, ಅನುಷಾ ಸುರೇಶ ತಂಡದ ನೃತ್ಯರೂಪಕ, ಉಡುಪಿಯ ದುರ್ಗಾ ಪರಮೇಶ್ವರಿ ಚಂಡೆ ಬಳಗದ ಮಹಿಳಾ ಚಂಡೆ ವಾದ್ಯ, ಬೆಂಗಳೂರಿನ ನಾರಾಯಣ ಭಟ್ಟ ತಂಡದವರಿಂದ ಜಾದು ಪ್ರದರ್ಶನ, ಮಂಜುನಾಥ ಭಜಂತ್ರಿ ಶಹನಾಯಿ ವಾದನ, ಚಿತ್ರದುರ್ಗದ ನಾಗಶ್ರೀ ಎಂ.ಪಿ ತಂಡದಿಂದ ಮೋಹಿನಿ ಅಟ್ಟಂ ಡಾನ್ಸ್, ಶಿರಸಿಯ ಯಕ್ಷಗೆಜ್ಜೆಯ ಯಕ್ಷ ರೂಪಕ, ಯಲ್ಲಾಪುರದ ಭಾರತೀಯ ನೃತ್ಯ ಕಲಾ-ಕೇಂದ್ರದಿಂದ ನೃತ್ಯ ರೂಪಕ, ಬಳ್ಳಾರಿಯ ಜಿ.ಚಂದ್ರಕಾಂತ ಗಝಲ್ ಗಾಯನ ನಡೆಯಲಿದೆ. ನಂತರ ಮುಂಬೈನ ಎಂಜೆ5 ಕಲಾವಿದರಿಂದ ನೃತ್ಯ, ರಾತ್ರಿ 8.30ರಿಂದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ತಂಡದಿಂದ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಫೆ.9ರ ಸಂಜೆ 4ರಿಂದ ಹೆಗ್ಗಾರ ಅನಂತ ಹೆಗಡೆ ಭಕ್ತಿಗೀತೆ, ಮಂಗಳೂರಿನ ಅಂಜಲಿ ವಿಲ್ಸನ್ ವಾಜ್ ತಂಡದಿಂದ ಸತ್ಯಮೇವ ಜಯತೆ ಫ್ಯೂಷನ್ ಡಾನ್ಸ್, ಶಿವಮೊಗ್ಗದ ದೀಪಿಕಾ ಶ್ರೀಕಾಂತ ಸುಗಮ ಸಂಗೀತ, ನಿಖಿಲ್ ಹೆಗಡೆ ಭರತನಾಟ್ಯ, ಉಡುಪಿಯ ರಿದಂ ಡ್ಯಾನ್ಸ್ ಅಕಾಡೆಮಿ ಕಲಾವಿದರಿಂದ ರಿದಂ ಡಾನ್ಸ್, ಸಾಗರದ ಸಹನಾ ಪಿ.ಜಿ ಸುಗಮ ಸಂಗೀತ, ಲಾಸಿಕಾ ಫೌಂಡೇಷನ್‌ನಿಂದ ಶ್ರೀ ಕೃಷ್ಣ ಲೀಲೋತ್ಸವ ನೃತ್ಯ ರೂಪಕ, ಭಟ್ಕಳದ ನಾಗಪ್ಪ ಗೊಂಡ ಅವರಿಂದ ಬುಡಕಟ್ಟು ಡೆಕ್ಕೆ ಕುಣಿತ, ಸಂಜೆ 6ರಿಂದ ಪ್ರವೀಣ ಗೋಡಕಿಂಡಿ ತಂಡದಿಂದ ಕೊಳಲು ವಾದನ, ರಿಕಿ ಕೇಜ್ ತಂಡದಿಂದ ಗಾಯನ ಹಾಗೂ ನೃತ್ಯ ಕಾರ್ಯಕ್ರಮ ಸಂಘಟನೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚಿನ್ನಣ್ಣನವರ್, ಕೃಷಿ ಅಧಿಕಾರಿ ನಟರಾಜ, ಉಪತಹಶೀಲ್ದಾರ್ ಶ್ರೀಕೃಷ್ಣ ಕಾಮಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.