ಶಿರಸಿ: ‘ರೈತರಿಗೆ ಹವಾಮಾನಾಧಾರಿತ ಬೆಳೆ ವಿಮೆ ಮೊತ್ತ ಕೊಡಿಸಲು ರಾಜ್ಯ ಸರ್ಕಾರದ ಸ್ಪಂದನೆಯೇ ಇಲ್ಲ. ಆದರೂ ಸಂಸದನಾಗಿ ಬೆಳೆ ವಿಮಾ ಪರಿಹಾರ ಕೊಡಿಸಲು ನಿರಂತರ ಪ್ರಯತ್ನ ಮಾಡುತ್ತಿರುವೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಹವಾಮಾನಾಧಾರಿತ ಬೆಳೆ ವಿಮಾ ಪರಿಹಾರ ಮೊತ್ತ ಈವರೆಗೂ ಕೈಸೇರಿಲ್ಲ. ಕೇಂದ್ರ ಸರ್ಕಾರದಿಂದ ಮೂರು ಬಾರಿ ವಿಮಾ ಕಂಪನಿಗೆ ಸೂಚನೆ ನೀಡಿದಾಗಲೂ ಮಳೆ ಮಾಪನದ ಕಾರಣ ಹೇಳಿ ವಿಮಾ ಕಂಪನಿ ಮೊತ್ತ ನೀಡಲು ವಿಳಂಬ ಮಾಡುತ್ತಿದೆ. ರಾಜ್ಯದಲ್ಲಿ ಮಳೆ ಮಾಪನ ಕೇಂದ್ರಗಳ ನಿರ್ವಹಣೆ ರಾಜ್ಯ ಸರ್ಕಾರದಿಂದ ಸಮರ್ಪಕವಾಗಿದ್ದರೆ ಇಂದು ರೈತರಿಗೆ ಇಂಥ ಸ್ಥಿತಿ ಬರುತ್ತಿರಲಿಲ್ಲ. ಇನ್ನಾದರೂ ಮಳೆ ಮಾಪನ ಘಟಕಗಳನ್ನು ದುರಸ್ತಿ ಮಾಡಿಸಬೇಕು’ ಎಂದರು.
‘ಲೋಕಸಭಾ ಅಧಿವೇಶನದಲ್ಲಿ ಸುದೀರ್ಘ ಚರ್ಚೆಗೆ ಒಳಪಡಿಸಿ ವಕ್ಫ್ ಕಾಯಿದೆ ತಿದ್ದುಪಡಿ ಅಂಗೀಕರಿಸಲಾಗಿದೆ. ಇದರಿಂದ ಕಾಂಗ್ರೆಸ್ ಅಲ್ಪಸಂಖ್ಯಾತ ಓಲೈಕೆ ರಾಜಕಾರಣದ ನಿಯಂತ್ರಣ ಸಾಧ್ಯವಾಗಿದೆ. ವಕ್ಫ್ ಮಂಡಳಿಗೆ ಸಂದಾಯವಾಗುವ ನ್ಯಾಯಯುತ ಹಣದಿಂದ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಅನುಕೂಲ ಆಗಲಿದೆ ಜತೆಗೆ ವಕ್ಫ್ ಆಸ್ತಿಗಳ ದಾಖಲೀಕರಣ ಆಗಲಿದೆ. ಈ ಬಗ್ಗೆ ಮುಸ್ಲಿಂ ಜನಾಂಗದಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಕಾಂಗ್ರೆಸ್ ಕೈಬಿಡಬೇಕು’ ಎಂದರು.
‘ಹುರಿದ ಅಡಿಕೆಗೆ ತೆರಿಗೆ ಹೆಚ್ಚಿಸಿದ ಕಾರಣ ದೇಸಿಯ ಅಡಿಕೆಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತಿದೆ. ಅಡಿಕೆ ಬೆಳೆಗಾರರ ಹಿತ ಕಾಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಜನಸಾಮಾನ್ಯರ ಆರ್ಥಿಕ ಶಕ್ತಿ ವೃದ್ದಿಸಲು ಸಹಕಾರ ಕ್ಷೇತ್ರದ ಕೊಡುಗೆ ಅಪಾರ. ಈ ಹಿನ್ನೆಲೆಯಲ್ಲಿ ಗುಜರಾತ್‍ನಲ್ಲಿ ತ್ರಿಭುವನ್ ಸಹಕಾರ ರಾಷ್ಟ್ರೀಯ ವಿಶ್ವವಿದ್ಯಾಲಯ ನಿರ್ಮಿಸಲು ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ಭವಿಷ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಹಕಾರ ಕ್ಷೇತ್ರದ ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ’ ಎಂದು ಹೇಳಿದರು.
ಪಕ್ಷದ ಪ್ರಮುಖರಾದ ಸದಾನಂದ ಭಟ್, ಶರ್ಮಿಳಾ ಮಾದನಗೇರಿ, ಉಷಾ ಹೆಗಡೆ, ನಾಗರಾಜ ನಾಯ್ಕ, ರಮಾಕಾಂತ ಭಟ್, ನವೀನ ಶೆಟ್ಟಿ, ನಾಗರಾಜ ಶೆಟ್ಟಿ, ಆರ್.ಡಿ.ಹೆಗಡೆ ಇದ್ದರು.
ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ನಡೆದ ಜಾತಿಗಣತಿ ಅವೈಜ್ಞಾನಿಕವಾಗಿದ್ದು ಇದು ಹಲವು ಗೊಂದಲಗಳಿಗೆ ಕಾರಣವಾಗಿದೆ. ವೈಜ್ಞಾನಿಕ ಸಮೀಕ್ಷೆ ನಡೆಸಬೇಕು. ಮುಸ್ಲಿಂ ಧರ್ಮದಲ್ಲಿನ ಉಪಪಂಗಡಗಳ ಸಮೀಕ್ಷೆಯೂ ಆಗಬೇಕುವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದ
‘ಜಾತಿಗಣತಿಗೆ ಸಮ್ಮತಿಯಿಲ್ಲ’
‘ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರದ ಖುರ್ಚಿ ಭದ್ರಪಡಿಸಲು ಜಾತಿಗಣತಿ ಮೂಲಕ ಸಮಾಜ ಒಡೆಯುವ ದ್ವೇಷ ಬೀಜ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ. ತಪ್ಪು ಅಂಕಿ–ಅಂಶ ನೀಡುವ ಕಾರ್ಯ ಗಣತಿಯಲ್ಲಾಗಿದೆ. ಎಡಪಂಥೀಯರ ಪ್ರಭಾವಕ್ಕೆ ಒಳಗಾಗಿ ಸಂಪುಟದ ಸಚಿವರ ವಿರೋಧವಿದ್ದರೂ ಜಾತಿಗಣತಿ ಅನುಷ್ಠಾನಕ್ಕೆ ಸಿ.ಎಂ ಮುಂದಾಗುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ಸಮರ್ಪಕ ಗಣತಿಯಾಗಿಲ್ಲ. ಪ್ರತಿಯೊಂದು ಜಾತಿಯವರು ಈ ಗಣತಿಗೆ ಸಮ್ಮತಿ ಸೂಚಿಸುತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.