
ಕುಮಟಾ: ‘ಹೆಚ್ಚು ಆಮ್ಲಜನಕ ಉತ್ಪಾದಿಸುವ ಕಾಂಡ್ಲಾ ವನ ಸಾಗರ ತೀರಗಳ ರಕ್ಷಾ ಕವಚ ಇದ್ದಂತೆ. ಕಾಂಡ್ಲಾ ಪರಿಸರವನ್ನೊಳಗೊಂಡ ಅಘನಾಶಿನಿ ಹಿನ್ನೀರು ಪ್ರದೇಶ ವಿಶಿಷ್ಟ ಜೀವ ವೈವಿಧ್ಯ ಸಂಕುಲಗಳಿಂದ ಜಗತ್ತಿನ ಗಮನ ಸೆಳೆದಿದೆ' ಎಂದು ಕುಮಟಾ ಎ.ಸಿ.ಎಫ್ ಕೃಷ್ಣ ಗೌಡ ಹೇಳಿದರು.
ತಾಲ್ಲೂಕಿನ ಕಿಮಾನಿಯ ಅಘನಾಶಿನಿ ನದಿ ತೀರದಲ್ಲಿ ಬುಧವಾರ ಆಸ್ಟರ್ ಡಿ.ಎಂ.ಫೌಂಡೇಶನ್, ಸ್ಕೊಡ್‌ವೆಸ್ ಸಂಸ್ಥೆ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾಂಡ್ಲಾ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಶೇ 65 ಕ್ಕಿಂತ ಹೆಚ್ಚಿನ ಪ್ರಮಾಣದ ಅನಾಹುತಗಳನ್ನು ತಡೆಯುವ ಸಾಮರ್ಥ್ಯ ಕಾಂಡ್ಲಾ ವನಗಳಿಗಿವೆ. ಆದ್ದರಿಂದ ಸಹಜವಾಗಿ ಪ್ರಾಕೃತಿಕ ವಿಕೋಪ ತಡೆಯುವ ಕಾಂಡ್ಲಾ ಸಂರಕ್ಷಣಾ ಕಾರ್ಯ ಕರಾವಳಿ ಹಾಗೂ ನದಿ ಹಿನ್ನೀರು ಪ್ರದೇಶಗಳಲ್ಲಿ ಸಾರ್ವತ್ರಿಕಗೊಳ್ಳಬೇಕು’ ಎಂದರು.
ಆಸ್ಟರ್ ಡಿ.ಎಂ.ಫೌಂಡೇಶನ್ ಮುಖ್ಯಸ್ಥ ರೋಹನ್ ಪ್ರಾಂಕೋ, ‘ದೇಶದ ಪಶ್ಚಿಮ ಸಾಗರ ತೀರ ಪ್ರದೇಶಗಳ ಸಂರಕ್ಷಣೆಯಲ್ಲಿ ಕಾಂಡ್ಲಾ ನೆಡುತೋಪುಗಳು ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಅವುಗಳನ್ನು ಸಂರಕ್ಷಿಸುವ ಅವಶ್ಯಕತೆಯಿದೆ’ ಎಂದರು.
ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ, ‘ಕಾಂಡ್ಲಾ ಸಂರಕ್ಷಣಾ ಅಭಿಯಾನದಲ್ಲಿ 5 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಉದ್ದೇಶ ಹೊಂದಲಾಗಿದೆ’ ಎಂದರು.
ಸ್ಕೊಡ್‌ವೆಸ್‌ನ ಪ್ರಶಾಂತ ನಾಯಕ, ಗಂಗಾಧರ ನಾಯ್ಕ, ಮಿರ್ಜಾನ ಆರ್.ಎಫ್.ಒ ರಾಜು ನಾಯ್ಕ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.