
ಕಾರವಾರ: ಗೋವಾದಲ್ಲಿನ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ, ಕನ್ನಡ ಭಾಷಿಕರನ್ನು ನಿಂದಿಸುತ್ತಿರುವ ಗೋವನ್ ರೆವಲ್ಯೂಷನರಿ ಸಂಘಟನೆಯ ಮುಖ್ಯಸ್ಥ ಮನೋಜ ಪರಬ, ಹಾಸ್ಯ ಕಲಾವಿದ ಜಾನ್ ಡಿಸಿಲ್ವಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ ಶೆಟ್ಟಿ ಬಣ) ಜಿಲ್ಲಾ ಘಟಕದವರು ಜಿಲ್ಲಾಡಳಿತಕ್ಕೆ ಮಂಗಳವಾರ ದೂರು ನೀಡಿದರು.
‘ಕನ್ನಡಿಗರಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಗೋವನ್ನರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ರಾಜ್ಯದಿಂದ ಗೋವಾಕ್ಕೆ ಸರಬರಾಜಾಗುವ ಹಾಲು, ತರಕಾರಿ, ಹಣ್ಣು, ಇತರ ದಿನಸಿ ಸಾಮಗ್ರಿಗಳನ್ನು ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ತಡೆಹಿಡಿದು ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು.
‘ಗೋವಾ ರಾಜ್ಯದ ವಿವಿಧ ನಗರಗಳಲ್ಲಿ ಹೊಟ್ಟೆಪಾಡಿಗೆ ರಾಜ್ಯದ ಸಾವಿರಾರು ಕುಟುಂಬಗಳು ಉದ್ಯೋಗ, ವ್ಯಾಪಾರ, ಉದ್ಯಮ ನಡೆಸುತ್ತಿವೆ. ಅಲ್ಲಿ ನೆಲೆಸಿರುವ ಕನ್ನಡ ಭಾಷಿಕರಿಗೆ ಕಿರುಕುಳ ನೀಡುವ ಜೊತೆಗೆ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯದ ಲಮಾಣಿ ಜನಾಂಗದ ಜನರನ್ನು ಗುರಿಯಾಗಿಸಿಕೊಂಡು ಅವರನ್ನು ನಿಂದಿಸುವ ಕೆಲಸವನ್ನು ಮಾಡಲಾಗುತ್ತಿದೆ’ ಎಂದು ಜಿಲ್ಲಾ ಚುನಾವಣಾ ಶಾಖೆಯ ತಹಶೀಲ್ದಾರ್ ಪ್ರಮೋದ ನಾಯ್ಕ ಅವರಿಗೆ ದೂರಿದರು.
‘ಕನ್ನಡ ಭಾಷಿಕರನ್ನು ಘಾಟಿ ಎಂದು ನಿಂದಿಸುವ ಕೆಲಸವನ್ನು ಗೋವನ್ನರು ಮಾಡುತ್ತಿದ್ದಾರೆ. ಅದರಲ್ಲಿಯೂ ಮನೋಜ್ ಪರಬ, ಜಾನ್ ಡಿಸಿಲ್ವಾ ಹಲವು ವರ್ಷಗಳಿಂದ ರಾಜ್ಯದ ಜನರ ವಿರುದ್ಧ ಕೆಂಡ ಕಾರುವ ಜೊತೆಗೆ ಅವರನ್ನು ಅಪಹಾಸ್ಯ ಮಾಡಿ, ಕಿರುಕುಳ ನೀಡುತ್ತಿದ್ದಾರೆ. ಈ ಇಬ್ಬರ ವಿರುದ್ಧ ಹಾಗೂ ಇವರಿಗೆ ಬೆಂಬಲವಾಗಿ ನಿಂತಿರುವವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಅಕ್ಷಯ ನಾಗೇಕರ, ಲೋಕೇಶ ನಾಯ್ಕ, ಪ್ರಸಾದ, ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.