ADVERTISEMENT

ಕಾರ್ಮಿಕ ಸಂಹಿತೆ ಶ್ರಮಿಕರ ಮೇಲಿನ ಪ್ರಹಾರ: ಮೀನಾಕ್ಷಿ ಸುಂದರಂ ಆರೋಪ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 4:52 IST
Last Updated 24 ನವೆಂಬರ್ 2025, 4:52 IST
ಮೀನಾಕ್ಷಿ ಸುಂದರಂ
ಮೀನಾಕ್ಷಿ ಸುಂದರಂ   

ಕಾರವಾರ: ‘ಬಂಡವಾಳಶಾಹಿಗಳ ಪರವಾಗಿರುವ ಕಾರ್ಮಿಕ ಸಂಹಿತೆ ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರವು ದೇಶದ ದುಡಿಯುವ ವರ್ಗದ ಮೇಲೆ ಪ್ರಹಾರ ಮಾಡಿದೆ’ ಎಂದು ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷ ಮೀನಾಕ್ಷಿ ಸುಂದರಂ ಆರೋಪಿಸಿದರು.

‘ಶ್ರಮಿಕ ವರ್ಗದ ಪಾಲಿಗೆ ಮರಣಶಾಸನ ಆಗಲಿರುವ ಹೊಸ ಕಾರ್ಮಿಕ ಸಂಹಿತೆ ಜಾರಿಗೆ ತಂದಿದ್ದನ್ನು ವಿರೋಧಿಸುತ್ತಿದ್ದೇವೆ. ನ.26ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ’ ಎಂದು ಇಲ್ಲಿ ಭಾನುವಾರ ಮಾಧ್ಯಮದವರಿಗೆ ಅವರು ತಿಳಿಸಿದರು.

‘ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರವಿದೆ. ಹೊಸ ಸಂಹಿತೆಯು ಕಡಿಮೆ ವೇತನಕ್ಕೆ ದುಡಿಯುವಂತೆ ಕಾಯ್ದೆ ರೂಪಿಸಿದೆ. ಹೊಸ ಕಾನೂನಿನ ಪ್ರಕಾರ ಕಾರ್ಖಾನೆ ಮುಚ್ಚುವ ಮೊದಲು ಸರ್ಕಾರದ ಅನುಮತಿ ಪಡೆಯುವ ಅಗತ್ಯವಿಲ್ಲ. ಆದರೆ, ಹಳೆಯ ಕಾಯ್ದೆ ಪ್ರಕಾರ 100ಕ್ಕಿಂತ ಹೆಚ್ಚು ಕಾರ್ಮಿಕರಿರುವ ಕಾರ್ಖಾನೆ ಮುಚ್ಚಲು ಪೂರ್ವ ಅನುಮತಿ ಬೇಕಿತ್ತು. ದೇಶದಲ್ಲಿನ ನೋಂದಾಯಿತ ಕಾರ್ಖಾನೆಗಳ ಪೈಕಿ ಶೇ 90ರಷ್ಟು ಕಾರ್ಖಾನೆಗಳು 300ಕ್ಕಿಂತ ಕಡಿಮೆ ಕಾರ್ಮಿಕರು ದುಡಿಯುವ ಕಾರ್ಖಾನೆಗಳಾಗಿವೆ’ ಎಂದರು.

ADVERTISEMENT

‘ಕೈಗಾರಿಕೆಗಳು ಗುತ್ತಿಗೆ ಆಧಾರಿತ ಅಥವಾ ನಿಗದಿತ ಅವಧಿಯ ಕೆಲಸದ ಕೈಗಾರಿಕೆಗಳಾಗಲಿವೆ. ಕಾರ್ಮಿಕರಿಗೆ ನಿವೃತ್ತಿ ಅವಧಿ ಇಲ್ಲದಂತೆ ಮಾಡುತ್ತಿದ್ದಾರೆ. ಕೆಲಸದ ಅಭದ್ರತೆ ಉಂಟಾಗಲಿದೆ. ಹೊಸ ಸಂಹಿತೆಯು ಸಂಪೂರ್ಣ ಉದ್ಯಮಿಗಳ ಪರವಾದ ಕಾನೂನು ಒಳಗೊಂಡಿದೆ’ ಎಂದು ದೂರಿದರು.

‘ಕಾರ್ಮಿಕರಿಗೆ ಮುಷ್ಕರ ಮಾಡುವ ಅವಕಾಶವನ್ನೂ ಕಸಿಯಲಾಗುವುದು. ಸಾಮಾಜಿಕ ರಕ್ಷಣೆಯೂ ಇಲ್ಲದಂತಾಗಲಿದೆ. ಭವಿಷ್ಯನಿಧಿ, ಇಎಸ್‌ಐ ಸೌಲಭ್ಯಗಳೂ ಉಳಿಯಬಹುದೇ ಎಂಬ ಆತಂಕವೂ ಇದೆ. ದೇಶದ ಕಾರ್ಮಿಕರ ದುಡಿಮೆಯನ್ನು ಅಗ್ಗದ ದರಕ್ಕೆ ಬಂಡವಾಳಶಾಹಿಗಳಿಗೆ ನೀಡಲು ಸರ್ಕಾರ ಮುಂದಾಗಿದೆ’ ಎಂದರು.

‘ದೇಶದಲ್ಲಿ ಕಾರ್ಮಿಕರ ಪ್ರಬಲ ಪ್ರತಿರೋಧ ಎದುರಾದ ಕಾರಣಕ್ಕೆ ಐದು ವರ್ಷಗಳಿಂದ ಕಾರ್ಮಿಕ ಸಂಹಿತೆ ಜಾರಿಗೆ ಮುಂದಾಗಿರಲಿಲ್ಲ. ಬಿಹಾರ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ, ವಿರೋಧದ ನಡುವೆಯೂ ಜಾರಿಗೊಳಿಸಿದೆ’ ಎಂದು ಟೀಕಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ತಿಲಕ್ ಗೌಡ, ಜಿಲ್ಲಾ ಘಟಕದ ಉಪಾಧ್ಯಕ್ಷೆ ಯಮುನಾ ಗಾಂವಕರ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಲೀಂ ಸೈಯದ್, ಶ್ಯಾಮನಾಥ ನಾಯ್ಕ, ಪ್ರೇಮಾನಂದ ವೆಳಿಪ್, ಸಿ.ಆರ್.ಶಾನಭಾಗ, ರಾಜೇಶ ಗಾವಡಾ ಇದ್ದರು.

ಮನುಸ್ಮೃತಿಯ ಅಂಶಗಳನ್ನೊಳಗೊಂಡ ಕಾರ್ಮಿಕರನ್ನು ಶೋಷಣೆಗೆ ಒಳಪಡಿಸುವ ಶ್ರಮ ಶಕ್ತಿ ನೀತಿಯನ್ನು ಈಗಿನ ಕೇಂದ್ರ ಸರ್ಕಾರ ಮಂಡಿಸಿದೆ
ಮೀನಾಕ್ಷಿ ಸುಂದರಂ ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.