ಕಾರವಾರ: ‘ಡಿಜೆ ಬಳಕೆ ಮಾಡದಂತೆ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಬೇಕಿದ್ದು, ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ವೇಳೆ ಡಿಜೆ ಬಳಕೆಗೆ ಅವಕಾಶ ನೀಡಲಾಗದು’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸೌಹಾರ್ದ ಸಭೆಯಲ್ಲಿ ಅವರು ಹಿಂದೂ, ಮುಸ್ಲಿಂ ಸಮುದಾಯದ ಮುಖಂಡರಿಗೆ ಸೂಚನೆ ನೀಡಿದರು.
‘ಆ.27ರಂದು ನಡೆಯಲಿರುವ ಗಣೇಶ ಚತುರ್ಥಿ, ಸೆ.5ರಂದು ನಡೆಯಲಿರುವ ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಸರ್ಕಾರದ ಮಾರ್ಗಸೂಚಿಗಳ ಉಲ್ಲಂಘನೆ ಆಗದಂತೆ ಎಚ್ಚರವಹಿಸಬೇಕು. ಶಾಂತಿ, ಸೌಹಾರ್ದತೆಗೆ ಧಕ್ಕೆ ತರುವ ಯಾವುದೇ ಕೆಲಸಕ್ಕೆ ಅವಕಾಶ ನೀಡಬಾರದು’ ಎಂದರು.
‘ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಸಿದ್ಧಪಡಿಸಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಬಾರದು. ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಉತ್ಸವ ಆಯೋಜನೆಗೆ ಸಿದ್ಧಪಡಿಸುವ ಮಂಟಪ, ಪೆಂಡಾಲ್‌ಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಬಳಕೆ ಮಾಡಬಾರದು. ಪರಿಸರಕ್ಕೆ ಹಾನಿಕಾರಕವಾಗುವ ಬಣ್ಣ, ಇನ್ನಿತರ ರಾಸಾಯನಿಕ ಪದಾರ್ಥಗಳನ್ನು ಬಳಸಬಾರದು. ಹಸಿರು ಪಟಾಕಿಗಳ ಮಾರಾಟಕ್ಕೆ, ಬಳಕೆಗೆ ಮಾತ್ರ ಅವಕಾಶ ನೀಡಲಾಗುವುದು’ ಎಂದು ಸೂಚಿಸಿದರು.
‘ಡಿಜೆ ಬಳಕೆಗೆ ಸಂಪೂರ್ಣ ನಿರ್ಬಂಧ ವಿಧಿಸುವುದು ಸರಿಯಲ್ಲ. ತೀರಾ ದೊಡ್ಡದಾಗಿ, ಕರ್ಕಶ ಶಬ್ದ ಹೊರಡಿಸುವ ಧ್ವನಿವರ್ಧಕಬಳ ಬಳಕೆಗೆ ನಿರ್ಬಂಧಿಸಬಹುದು. ಆದರೆ, ಹಬ್ಬದ ವೇಳೆ ಮಾತ್ರ ಡಿಜೆ ಬಳಕೆಗೆ ಅವಕಾಶ ನೀಡಬೇಕು’ ಎಂದು ಗಣೇಶೋತ್ಸವ ಸಮಿತಿ ಪ್ರಮುಖರಾದ ಶ್ಯಾಮ ಸೈಲ್, ಆನಂದು ನಾಯ್ಕ, ಇತರರು ಒತ್ತಾಯಿಸಿದರು.
ಸಮಿತಿಯವರ ಬೇಡಿಕೆಗೆ ಒಪ್ಪದ ಜಿಲ್ಲಾಧಿಕಾರಿ, ‘ಕೋರ್ಟ್ ಸೂಚನೆ ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ರಾತ್ರಿ 10ರ ವರೆಗೆ ಹೆಚ್ಚು ಡೆಸಿಬಲ್ ಅಲ್ಲದ, ಸಾಧಾರಣ ಧ್ವನಿವರ್ಧಕ ಬಳಸಬಹುದು. ಡಿಜೆ ಮಾತ್ರ ಬಳಕೆ ಮಾಡುವಂತಿಲ್ಲ’ ಎಂದರು.
‘ಗಣೇಶ ಮೂರ್ತಿಗಳನ್ನು ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ವಿಸರ್ಜನೆ ಮಾಡಬೇಕು. ಗಣೇಶ ಮಂಟಪಗಳ ಬಳಿ ವಿದ್ಯುತ್ ತಂತಿಗಳು ಹಾದುಹೋಗದಂತೆ ಎಚ್ಚರವಹಿಸಬೇಕು’ ಎಂದೂ ಸೂಚಿಸಿದರು.
ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಪ್ರೊಬೇಷನರಿ ಐಎಎಸ್ ಅಧಿಕಾರಿ ಜೂಫಿಶಾನ್ ಹಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿ.ಕೃಷ್ಣಮೂರ್ತಿ, ಜಗದೀಶ ಎಂ., ಪರಿಸರ ಅಧಿಕಾರಿ ಬಿ.ಕೆ.ಸಂತೋಷ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ ಪಾಲ್ಗೊಂಡಿದ್ದರು.
ಸಿ.ಸಿಟಿವಿ ಕ್ಯಾಮೆರಾ ಅಳವಡಿಕೆ ಕಡ್ಡಾಯ
‘ಸಾರ್ವಜನಿಕ ಗಣೇಶೋತ್ಸವ ಸಮತಿಯವರು ಮೂರ್ತಿ ಪ್ರತಿಷ್ಠಾಪಿಸುವ ಮಂಟಪಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಹಬ್ಬದ ನೆಪದಲ್ಲಿ ಲಾಟರಿ ಡ್ರಾ ಚಟುವಟಿಕೆ ನಡೆಸಲು ಅವಕಾಶ ಇಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಹೇಳಿದರು.
‘ಪೆಂಡಾಲ್‌ಗಳ ಬಳಿ ಸ್ವಯಂ ಸೇವಕರನ್ನು ನಿಯೋಜಿಸಬೇಕು ಪೊಲೀಸ್ ಇಲಾಖೆಯ ಮಾರ್ಗಸೂಚಿಯಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.