ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಹೊಸ ಕಟ್ಟಡದ ಸರ್ಜರಿ ವಿಭಾಗದ ಕೊಠಡಿಯ ಹೊರ ಆವರಣ ಚಾವಣಿ ಮಂಗಳವಾರ ಕುಸಿತವಾಗಿದೆ.
ಆವರಣದ ಮುಖ್ಯ ಚಾವಣಿಯ ಕೆಳಭಾಗದಲ್ಲಿ ಸುಮಾರು 20 ಮೀ.ಉದ್ದದವರೆಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿ ನಿರ್ಮಿಸಿದ ಚಾವಣಿ ಕುಸಿತವಾಗಿದೆ. ಘಟನೆ ನಡೆದ ವೇಳೆ ಈ ಸ್ಥಳದಲ್ಲಿ ಯಾರೂ ಇಲ್ಲದ ಕಾರಣದಿಂದ ದೊಡ್ಡ ಅವಘಡ ಸಂಭವಿಸಿಲ್ಲ.
ಘಟನೆ ನಡೆದ ಸ್ಥಳ ಪರಿಶೀಲಿಸಿದ ತಹಶೀಲ್ದಾರ್ ನಿಶ್ಚಲ್ ನೊರ‍್ಹೋನಾ ಚಾವಣಿಯ ಗುಣಮಟ್ಟದ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
‘ಹೊಸ ಕಟ್ಟಡದ ಕಾಮಗಾರಿ ಗುಣಮಟ್ಟದ ಬಗ್ಗೆ ಶಂಕೆ ಇದೆ. ಶೌಚಾಲಯ ತ್ಯಾಜ್ಯ ಶುದ್ಧೀಕರಣ ಘಟಕ (ಎಸ್‌ಟಿಪಿ) ನಿರ್ಮಾಣ ಮಾಡದೆ ಕಟ್ಟಡ ಬಳಕೆ ಮಾಡಲಾಗುತ್ತಿದೆ. ಹೊರರೋಗಿ ವಿಭಾಗ ಹಳೆಯ ಕಟ್ಟಡದಲ್ಲೇ ಇಟ್ಟು ಹೊಸ ಕಟ್ಟಡಕ್ಕೆ ಒಳರೋಗಿ ವಿಭಾಗ ಸ್ಥಳಾಂತರಿಸಲಾಗಿದೆ. ಕಟ್ಟಡದ ಗುಣಮಟ್ಟದ ಬಗ್ಗೆ ಮರುಪರಿಶೀಲನೆ ನಡೆಸಬೇಕು’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಒತ್ತಾಯಿಸಿದ್ದಾರೆ.
‘ಕಟ್ಟಡ ಪರಿಶೀಲಿಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವರದಿ ನೀಡಿದ ಬಳಿಕವೇ ಹಸ್ತಾಂರಿಸಿಕೊಂಡು, ಕೆಲ ವಾರ್ಡ್‌ಗಳನ್ನು ಸ್ಥಳಾಂತರಿಸಲಾಗಿದೆ’ ಎಂದು ಕ್ರಿಮ್ಸ್ ನಿರ್ದೇಶಕಿ ಡಾ.ಪೂರ್ಣಿಮಾ ಆರ್.ಟಿ. ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.