ವಾಣಿಜ್ಯ ಬಂದರು ಯೋಜನೆ ವಿರೋಧಿಸಿ ಪ್ರತಿಭಟಿಸಿ ಹೊನ್ನಾವರದ ಟೊಂಕದಲ್ಲಿ ಸಮುದ್ರಕ್ಕೆ ಇಳಿಯಲು ಮುಂದಾಗಿದ್ದವರನ್ನು ಫೆ.25ರಂದು ಪೊಲೀಸರು ವಶಕ್ಕೆ ಪಡೆದಿದ್ದರು
ಕಾರವಾರ: ‘ಮೂರು ದಶಕದ ಹಿಂದೆ ವಾಸಕ್ಕೆ 30x40 ಅಳತೆ ಪ್ಲಾಟುಗಳನ್ನು ಹಂಚಿ, ಪಟ್ಟಾ ನೀಡಿದ್ದರು. ಈಗ ವಾಣಿಜ್ಯ ಬಂದರು ನಿರ್ಮಿಸಲು ಮನೆ ತೆರವಿಗೆ ಮುಂದಾಗಿದ್ದಾರೆ. ಹೋರಾಟ ನಡೆಸಿದ್ದಕ್ಕೆ ಸುಳ್ಳುಪ್ರಕರಣ ದಾಖಲಿಸಿದ್ದಾರೆ. ಭಯದಲ್ಲೇ ದಿನ ಕಳೆಯುತ್ತಿದ್ದೇವೆ’
-ಹೀಗೆಂದು ಹೊನ್ನಾವರ ತಾಲ್ಲೂಕಿನ ಟೊಂಕದಲ್ಲಿ ಮೀನುಗಾರರ ಕುಟುಂಬದ ಮಹಿಳೆಯರು ಕಣ್ಣೀರು ಸುರಿಸಿದರು. ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕಿದರು.
ಇದು ಹೊನ್ನಾವರದ ಸ್ಥಿತಿ. ಅತ್ತ, ಮೀನುಗಾರಿಕೆ ಚಟುವಟಿಕೆಯಿಂದ ಗಿಜಿ ಗಿಡುತ್ತಿದ್ದ ಅಂಕೋಲಾದ ಕೇಣಿ ಕಡಲ ತೀರದಲ್ಲಿ ಪೊಲೀಸರು ಕಾವಲಿದ್ದಾರೆ. ದೋಣಿಗಳು ಲಂಗರು ಹಾಕಿವೆ.
ವಾಣಿಜ್ಯ ಬಂದರು ನಿರ್ಮಾಣ ಯೋಜನೆಯು ಮೀನುಗಾರರನ್ನು ಆತಂಕಕ್ಕೆ ದೂಡಿದೆ. ಜೀವನಾಧಾರ ವಾಗಿದ್ದ ನೆಲೆ ಕಳೆದುಕೊಳ್ಳುವುದರ ವಿರುದ್ಧ ಹೋರಾಡದಂತೆ ನಿಷೇಧಾಜ್ಞೆ ನೆಪದಲ್ಲಿ ಹತ್ತಿಕ್ಕುವ ಕೆಲಸ ನಡೆದಿದೆ ಎಂಬುದು ಮೀನುಗಾರರ ದೂರು. ಇದರಿಂದಾಗಿ ಹೊನ್ನಾವರದ ಟೊಂಕ, ಅಂಕೋಲಾದ ಕೇಣಿಯಲ್ಲಿ ಮೀನುಗಾರಿಕೆ ಈಗ ಸ್ತಬ್ಧಗೊಂಡಿದೆ.
‘ಕಾಸರಕೋಡದಿಂದ ಟೊಂಕ ದವರೆಗೆ ವಾಣಿಜ್ಯ ಬಂದರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಭೂಮಿ ಸ್ವಾಧೀನಕ್ಕಾಗಿ ಫೆ. 25ರಂದು ಸಮೀಕ್ಷೆ ನಡೆಸಲಾಗಿದೆ. ಆಗ ನಿಷೇಧಾಜ್ಞೆ ಹೇರಿದ್ದು, 45 ಜನರ ವಿರುದ್ಧ ಕೊಲೆ ಯತ್ನದಂತಹ ಗಂಭೀರ ಪ್ರಕರಣ ದಾಖಲಿಸಿ, 20ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಯೋಜನೆಯ ಪರಿಣಾಮಗಳನ್ನು ವಿವರಿಸಲು ಫೆ. 25ರಂದು ಸಿ.ಎಂ ಅವರನ್ನು ಭೇಟಿಯಾಗಲು ಬೆಂಗಳೂರಿಗೆ ತೆರಳಿದ್ದ ನನ್ನ ಮತ್ತು ಪತ್ನಿಯ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ’ ಎಂದು ಹೊನ್ನಾವರದ ಗಣಪತಿ ತಾಂಡೇಲ ಅವರು ತಿಳಿಸಿದರು.
‘ಈಗಲೂ ಗ್ರಾಮದಲ್ಲಿ ಪೊಲೀಸರ ಗಸ್ತು ಇದೆ. ಯೋಜನೆ ವಿರೋಧಿಸುವವರ ಮಾಹಿತಿ ಕಲೆ ಹಾಕುವ ಹಾಗೂ ಬೆದರಿಸುವ ಯತ್ನ ನಡೆದಿದೆ’ ಎಂದು ಕೇಣಿ ಗ್ರಾಮಸ್ಥರು ತಿಳಿಸಿದರು.
‘ಸ್ಥಳೀಯರ ವಿರೋಧದ ನಡುವೆಯೂ ಕೇಣಿಯಲ್ಲಿ ಸಮೀಕ್ಷೆ ಮುಂದುವರಿದಿದೆ. ಹೋರಾಟ ನಡೆಸದಂತೆ ನಿಷೇಧಾಜ್ಞೆ ವಿಧಿಸಲಾಗಿದೆ. ಇದರಿಂದ ನಾಲ್ಕೈದು ಜನರು ಒಟ್ಟುಗೂಡಿ ಮೀನುಗಾರಿಕೆಗೂ ತೆರಳಲಾಗದ ಸ್ಥಿತಿ ಇದೆ’ ಎಂದು ಕೇಣಿಯ ಹುವಾ ಖಂಡೇಕರ ದೂರಿದರು.
ಟೊಂಕ ಸಮೀಪದ ಮಲ್ಲುಕುರ್ವಾ ದಲ್ಲಿ 2010ರಲ್ಲಿ ವಾಣಿಜ್ಯ ಬಂದರು ನಿರ್ಮಿಸಲು ಹೊನ್ನಾವರ ಪೋರ್ಟ್ ಪ್ರೈವೆಟ್ ಲಿಮಿಟೆಡ್‍ಗೆ 93 ಎಕರೆ ಭೂಮಿ ಹಸ್ತಾಂತರಿಸಲಾಗಿತ್ತು.
ಪ್ರತಿಭಟನೆಯಿಂದಾಗಿ ಯೋಜನೆ ಸದ್ಯ ನನೆಗುದಿಗೆ ಬಿದ್ದಿದೆ. ಯೋಜನೆ ಕೈಬಿಡಲು ಕೋರಿ ರಾಷ್ಟ್ರೀಯ ಹಸಿರು ಪೀಠಕ್ಕೆ ಕಾಸರಕೋಡಿನ ವ್ಯಕ್ತಿಯೊಬ್ಬರು ದಾವೆ ಸಲ್ಲಿಸಿದ್ದಾರೆ. ಅದು ವಿಚಾರಣೆ ಹಂತದಲ್ಲಿ ಇರುವಾಗಲೇ, ಸಮೀಕ್ಷೆ ಪ್ರಕ್ರಿಯೆ ನಡೆದಿದೆ.
ಅಂಕೋಲಾದ ಕೇಣಿಯಲ್ಲಿ ₹4,200 ಕೋಟಿ ವೆಚ್ಚದಲ್ಲಿ ಜೆಎಸ್‌ಡಬ್ಲ್ಯು ಕಂಪನಿ ಗ್ರೀನ್ ಫೀಲ್ಡ್ ಬಂದರು ಸ್ಥಾಪನೆಗೆ ಭೌಗೋಳಿಕ ಕಾರ್ಯಸಾಧ್ಯತೆ ಸಮೀಕ್ಷೆಯನ್ನು ನಡೆಸುತ್ತಿದೆ.
ಕುಮಟಾ: ‘ಅಂಕೋಲಾದ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣದಿಂದ ಪಶ್ಚಿಮ ಘಟ್ಟ ಮತ್ತು ಕರಾವಳಿ ಪ್ರದೇಶದಲ್ಲಿ ಪರಿಸರ ನಾಶವಾಗುತ್ತದೆ. ಈ ಯೋಜನೆ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸಲು ಜಿಲ್ಲೆಗೆ ಭೇಟಿ ನೀಡುತ್ತೇನೆ’ ಎಂದು ಪರಿಸರವಾದಿ ಸುರೇಶ ಹೆಬ್ಳೀಕರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
‘ಕೇಣಿ ಬಂದರು ಪ್ರದೇಶವು ದೇಶದಲ್ಲೇ ಪ್ರಾಕೃತಿಕವಾಗಿ ಸುಂದರ ತಾಣ. ಅಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬಹುದು. ಕರಾವಳಿ ಮತ್ತು ಪಶ್ಚಿಮಘಟ್ಟ ಸೇರುವ ರಾಜ್ಯದ ಸುಂದರ ಪ್ರದೇಶವಾದ ಜಿಲ್ಲೆಯ ಎಲ್ಲ ಸಮುದ್ರ ತೀರ ನಾಶ ಮಾಡಿ ಬಂದರು ನಿರ್ಮಿಸುತ್ತಿರುವುದು ಸರಿಯಲ್ಲ’ ಎಂದು ಅವರು ತಿಳಿಸಿದರು.
‘ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣದಿಂದ ಮೀನುಗಾರರು ಬೇರೆ ಉದ್ಯೋಗಕ್ಕೆ ಪಟ್ಟಣ ಸೇರಬೇಕಾಗುತ್ತದೆ. ಹೆದ್ದಾರಿಗಳ ವಿಸ್ತರಣೆಗೆ ಇನ್ನಷ್ಟು ಕಾಡು ನಾಶವಾಗುತ್ತದೆ. ಅದರ ಬದಲು ಈಗಿರುವ ಕಾರವಾರ, ಮಲ್ಪೆ, ಮಂಗಳೂರು ಬಂದರನ್ನು ವ್ಯಾಪಾರಕ್ಕೆ ಬಳಸಲು ಸಾಧ್ಯವಿದೆ’ ಎಂದರು.
ಟೊಂಕದಲ್ಲಿ ಯೋಜನೆಗೆ ಮನೆ ಕಳೆದುಕೊಳ್ಳುವವರಿಗೆ ಪರಿಹಾರ ನೀಡುವ ಬಗ್ಗೆ ಯೋಜನೆಕ್ಯಾಪ್ಟನ್ ಸಿ.ಸ್ವಾಮಿ, ನಿರ್ದೇಶಕ,ಬಂದರು ಮತ್ತು ಜಲಸಾರಿಗೆ ಮಂಡಳಿ
ಯಲ್ಲಿ ಪ್ರಸ್ತಾಪವಿಲ್ಲ. ಸರ್ಕಾರದ ಮಟ್ಟದಲ್ಲಿ ನಿರ್ಣಯ ಆಗಬೇಕಿದೆ
ವಾಣಿಜ್ಯ ಬಂದರು ಯೋಜನೆ ಜಾರಿಯಿಂದ ಜಿಲ್ಲೆಯ ಪರಿಸರ ನಾಶವಾಗಲಿದೆ. ಉಪಯೋಗಕ್ಕೆ ಬಾರದ ಯೋಜನೆಯು ಜನ ಜೀವನದ ಮೇಲೆ ಪರಿಣಾಮ ಬೀರಲಿದೆವಿ.ಎನ್.ನಾಯಕ ಪರಿಸರ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.