ಕಾರವಾರ: ಇಲ್ಲಿನ ವಾಣಿಜ್ಯ ಬಂದರಿನ ಅಲ್ಪಭಾಗವನ್ನು 15 ವರ್ಷಗಳ ಅವಧಿಗೆ ಖಾಸಗಿಯವರಿಗೆ ಲೀಸ್‌ಗೆ ನೀಡಲು ರಾಜ್ಯ ಸಚಿವ ಸಂಪುಟ ಅನುಮೊದನೆ ನೀಡಿದೆ. ಲೀಸ್ ಮೊತ್ತ, ಅಭಿವೃದ್ಧಿ ಚಟುವಟಿಕೆಗೆ ಒಪ್ಪಂದ ಕೈಗೊಳ್ಳುವ ಸಲುವಾಗಿ ತಾಂತ್ರಿಕ ಸಲಹೆ ವರದಿ ಪಡೆಯಲು ಟೆಂಡರ್ ಪ್ರಕ್ರಿಯೆಗೆ ಬಂದರು ಜಲಸಾರಿಗೆ ಮಂಡಳಿ ಮುಂದಾಗಿದೆ.
ವಾಣಿಜ್ಯ ಬಂದರಿನಲ್ಲಿ 375 ಮೀಟರ್ ಉದ್ದದ ಹಡಗು ಕಟ್ಟೆ (ಬರ್ತ್) ಇದ್ದು, ಅದರೊಂದಿಗೆ ದೊಡ್ಡ ಉಗ್ರಾಣವೂ ಇದೆ. ಈ ಹಡಗುಕಟ್ಟೆಯ ಪೈಕಿ ಅಲ್ಪಭಾಗವನ್ನು ಭಾರತೀಯ ತಟರಕ್ಷಕ ದಳಕ್ಕೆ ಬಳಕೆಗೆ ಅವಕಾಶ ನೀಡಲಾಗಿದೆ. 150 ಮೀ. ಉದ್ದದಷ್ಟು ಹಡಗುಕಟ್ಟೆಯನ್ನು ಖಾಸಗಿಗೆ ನೀಡಲು ಜಲಸಾರಿಗೆ ಮಂಡಳಿ ಪ್ರಸ್ತಾವ ಸಿದ್ಧಪಡಿಸಿ, ಸರ್ಕಾರಕ್ಕೆ ಕೆಲ ತಿಂಗಳ ಹಿಂದೆ ಸಲ್ಲಿಸಿತ್ತು.
‘ವಾಣಿಜ್ಯ ಬಂದರಿನ ಹಡಗುಕಟ್ಟೆಯ ಪೈಕಿ ಸ್ವಲ್ಪಭಾಗವನ್ನು ಅಭಿವೃದ್ಧಿಪಡಿಸಿ, ಬಳಸಿ, ನಿರ್ವಹಿಸಿದ ಬಳಿಕ ಹಸ್ತಾಂತರಿಸುವ (ಆರ್‌ಒಎಂಟಿ) ಮಾದರಿಯಲ್ಲಿ ಖಾಸಗಿ ಕಂಪನಿಗೆ ಲೀಸ್‌ಗೆ ನೀಡಲು ಸಲ್ಲಿಸಿದ ಪ್ರಸ್ತಾವಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಲೀಸ್ ಮೊತ್ತ, ಬಂದರು ಲೀಸ್‌ಗೆ ಪಡೆಯುವವರು ಅಭಿವೃದ್ಧಿಪಡಿಸಲು ಅಗತ್ಯವಿರುವ ಅನುದಾನಗಳ ನಿಗದಿಗೆ ತಾಂತ್ರಿಕ ವರದಿ ಪಡೆಯಬೇಕಿದೆ. ಅದಕ್ಕಾಗಿ ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಟೆಂಡರ್‌ದಾರರು ನೀಡುವ ವರದಿ ಆಧರಿಸಿ ಲೀಸ್ ಮೊತ್ತ ನಿಗದಿಪಡಿಸಲಾಗುತ್ತದೆ. ನಂತರ ಲೀಸ್‌ಗೆ ಟೆಂಡರ್ ಕರೆಯಲಾಗುತ್ತದೆ’ ಎಂದು ಬಂದರು ಅಧಿಕಾರಿ ವಿನಾಯಕ ನಾಯ್ಕ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಬಂದರಿನಲ್ಲಿರುವ ಉಗ್ರಾಣ ಕಟ್ಟಡವೂ ಶಿಥಿಲಾವಸ್ಥೆಯಲ್ಲಿದೆ. ಅದು ಬಳಕೆಗೆ ಯೋಗ್ಯವಲ್ಲ ಎಂದು ಲೋಕೋಪಯೋಗಿ ಇಲಾಖೆ ವರದಿ ಸಲ್ಲಿಸಿದೆ. ಹೊಸ ಕಟ್ಟಡ ನಿರ್ಮಾಣದ ಅಗತ್ಯವಿದೆ. ಹಡಗುಕಟ್ಟೆ ಲೀಸ್‌ಗೆ ಪಡೆಯುವವರೇ ಉಗ್ರಾಣ ಕಟ್ಟಡ ತೆರವುಗೊಳಿಸಿ, ಹೊಸ ಕಟ್ಟಡ ನಿರ್ಮಿಸಲು ಒಪ್ಪಂದ ಮಾಡಿಕೊಳ್ಳಲು ನಿರ್ಣಯಿಸಲಾಗಿದೆ’ ಎಂದೂ ವಿವರಿಸಿದರು.
ವಾಣಿಜ್ಯ ಬಂದರಿನ ಸದ್ಯದ ಹಡಗುಕಟ್ಟೆ ಮುಂದಿನ 15 ವರ್ಷಗಳವರೆಗೆ ಮಾತ್ರ ಬಳಕೆಗೆ ಬರಲಿದೆ ಎಂದು ಎನ್‌ಐಟಿಕೆಯ ತಂತ್ರಜ್ಞರು ವರದಿ ನೀಡಿದ್ದಾರೆ. ಹೀಗಾಗಿ ಇಷ್ಟೇ ಅವಧಿಗೆ ಹಡಗುಕಟ್ಟೆ ಲೀಸ್‌ಗೆ ನೀಡಲಾಗುತ್ತಿದೆವಿನಾಯಕ ನಾಯ್ಕ, ಬಂದರು ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.