ಕಾರವಾರ: ‘ಗಾಳಿ ಬೀಸಿದಾಗೆಲ್ಲ ಸಮೀಪದಲ್ಲಿನ ಮರಗಳತ್ತ ದೃಷ್ಟಿ ಹಾಯುತ್ತಿತ್ತು. ಭಯದಲ್ಲೇ ವಹಿವಾಟು ನಡೆಸುತ್ತಿದ್ದೆ. ಕಣ್ಣೆದುರೇ ದೊಡ್ಡ ಗಾತ್ರದ ಮರ ನೆಲಕ್ಕುರುಳಿದ್ದನ್ನು ಕಂಡಾಗ ಎದೆ ಝಲ್ಲೆಂದಿತು. ಓಡಲು ಯತ್ನಿಸುವಷ್ಟರಲ್ಲಿ ಟೊಂಗೆಯೊಂದು ಕೈಗೆ ಬಡಿದು ತರಚಿದ ಗಾಯವಾಯಿತು’
ಇಲ್ಲಿನ ಪಿಕಳೆ ರಸ್ತೆಯಲ್ಲಿ ಭಾನುವಾರ ನಡೆಯುವ ವಾರದ ಸಂತೆಯಲ್ಲಿ ಈರುಳ್ಳಿ ಮಾರಾಟಕ್ಕೆ ಕುಳಿತಿದ್ದ ಹಾವೇರಿ ಜಿಲ್ಲೆ ಸವಣೂರಿನ ಅಜಗರ್ ಸಾಬ್ ಹೇಳಿದರು. ಶತಮಾನದಷ್ಟು ಹಳೆಯದಾದ ಹುಣಸೆ ಮರ ಬಿದ್ದು ಘಟಿಸಿದ ಅವಘಡವನ್ನು ಅವರು ಕಣ್ಣಾರೆ ಕಂಡವರು. ದುರ್ಘಟನೆಯಲ್ಲಿ ಅವರಿಗೂ ಗಾಯವಾಗಿದೆ.
‘ಅಕ್ಕಪಕ್ಕದಲ್ಲಿನ ಅಂಗಡಿಕಾರರು ಮರ ಕಿತ್ತ ಶಬ್ದ ಬಂದೊಡನೆ ಓಡಿದರು. ತಕ್ಷಣಕ್ಕೆ ನನಗೆ ಕುಳಿತಲ್ಲಿಂದ ಏಳಲು ಆಗಲಿಲ್ಲ. ಆದರೆ, ಅಪಾಯ ಸಂಭವಿಸಿಲ್ಲ ಎಂಬುದೇ ಸಮಾಧಾನ. ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಘಟನೆ ನಡೆದಿದ್ದರಿಂದ ದೊಡ್ಡ ಅನಾಹುತ ತಪ್ಪಿತು. ಸಂತೆಯಲ್ಲಿ ಜನರ ಓಡಾಟ ಕಡಿಮೆ ಇತ್ತು’ ಎಂದರು.
ಪಿಕಳೆ ನರ್ಸಿಂಗ್ ಹೋಮ್ ಆವರಣದಲ್ಲಿದ್ದ ಮರವು ಕಾರಿನ ಮೇಲೆ ಬಿದ್ದು, ಅದರಲ್ಲಿದ್ದ ತಾಲ್ಲೂಕಿನ ಕುರ್ನಿಪೇಟ್ ಗ್ರಾಮದ ಲಕ್ಷ್ಮಿ ನಾಮ್ಸೇಕರ್ (56) ಮೃತಪಟ್ಟಿದ್ದಾರೆ. ಅವರ ಸೊಸೆ ಸುನಿತಾ, ಚಾಲಕ ಮಣಿ ಸ್ವಲ್ಪ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಮರದ ಕಾಂಡದ ಭಾಗವು ರಭಸವಾಗಿ ಬಿದ್ದಿದ್ದರಿಂದ ಕಾರಿನ ಹಿಂಭಾಗ ನುಜ್ಜುಗುಜ್ಜಾಗಿತ್ತು. ಅದರಲ್ಲಿ ಸಿಲುಕಿದ್ದ ಲಕ್ಷ್ಮಿ ಅವರನ್ನು ಹೊರಕ್ಕೆ ತರಲು ಅಗ್ನಿಶಾಮಕ ದಳ, ನಗರಸಭೆ ಸಿಬ್ಬಂದಿ ಹರಸಾಹಸಪಟ್ಟರು. ಕೆಲವೇ ನಿಮಿಷದೊಳಗೆ ಮರದ ಟೊಂಗೆಗಗಳನ್ನು ಕತ್ತರಿಸಿ, ಜೆಸಿಬಿ ಸಹಾಯದೊಂದಿಗೆ ಕಾರನ್ನು ಹೊರಕ್ಕೆ ಎಳೆಯಲಾಯಿತು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಲಕ್ಷ್ಮಿ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದರು.
‘ಕೆಲ ದಿನಗಳ ಹಿಂದೆ ತೆಂಗಿನ ಮರವೊಂದು ಬುಡ ಸಮೇತ ಬಿದ್ದು ಕಾರ್ಮಿಕನೊಬ್ಬ ಅಪಾಯಕ್ಕೆ ಸಿಲುಕಿದ್ದ. ಮಳೆಗಾಲದಲ್ಲಿ ಮರದ ಟೊಂಗೆಗಳು ಬೀಳುವುದು, ಬುಡ ಸಮೇತ ಬೀಳುವುದು ಸಾಮಾನ್ಯವಾಗುತ್ತಿದೆ. ಮುಖ್ಯ ರಸ್ತೆಗಳು, ವಾಣಿಜ್ಯ ಚಟುವಟಿಕೆಗಳು ಹೆಚ್ಚಿರುವ ಸ್ಥಳಗಳಲ್ಲೇ ಅಪಾಯಕಾರಿ ಸ್ಥಿತಿಯಲ್ಲಿ ಮರಗಳಿವೆ. ಅವುಗಳನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿಲ್ಲ’ ಎಂದು ಗಿಡ್ಡಾರಸ್ತೆ ನಿವಾಸಿ ಪ್ರೇಮಾನಂದ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಗ್ರೀನ್ ಸ್ಟ್ರೀಟ್, ಪಿಕಳೆ ರಸ್ತೆ, ಎಂ.ಜಿ.ರಸ್ತೆ ಸೇರಿದಂತೆ ಹಲವೆಡೆ 80ಕ್ಕೂ ಹೆಚ್ಚು ಅಪಾಯಕಾರಿ ಸ್ಥಿತಿಯಲ್ಲಿವೆ.
ಮರಗಳನ್ನು ತೆರವುಗೊಳಿಸಲು ನಗರಸಭೆಯಿಂದ ಒಪ್ಪಿಗೆ ಕೋರಿ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದ್ದರೂ ಮರ ತೆರವುಗೊಳಿಸಲು ಕೆಲ ಪರಿಸರವಾದಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆಗಣಪತಿ ಉಳ್ವೇಕರ್ ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.