ADVERTISEMENT

ಕೋಟಿ ಪ್ರವಾಸಿಗರ ಭೇಟಿ!

2018ರಲ್ಲಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯಲು ಯಶಸ್ವಿಯಾದ ಜಿಲ್ಲೆ

ಸದಾಶಿವ ಎಂ.ಎಸ್‌.
Published 4 ಜನವರಿ 2019, 20:15 IST
Last Updated 4 ಜನವರಿ 2019, 20:15 IST
ಮುರ್ಡೇಶ್ವರ ಕಡಲತೀರದ ವಿಹಂಗಮ ನೋಟ
ಮುರ್ಡೇಶ್ವರ ಕಡಲತೀರದ ವಿಹಂಗಮ ನೋಟ   

ಕಾರವಾರ: ಜಿಲ್ಲೆಯು 2018ರಲ್ಲಿ ದೇಶ, ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷ ಜ.1ರಿಂದ ಡಿ.31ರವರೆಗೆ 92.73 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ದಾಖಲಿಸಿದೆ. ಇದು ಕಳೆದ ವರ್ಷಕ್ಕಿಂತ 4.43 ಲಕ್ಷಗಳಷ್ಟು ಅಧಿಕ ಎಂಬುದು ಗಮನಾರ್ಹ.

ರಾಜ್ಯದ ಪ್ರವಾಸೋದ್ಯಮ ನಕ್ಷೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಜಿಲ್ಲೆಯಲ್ಲಿ ಜನಾಕರ್ಷಣೆಯ ಹತ್ತಾರು ತಾಣಗಳಿವೆ. ಇಲಾಖೆಯ ಪಟ್ಟಿಯಲ್ಲಿ ಜಿಲ್ಲೆಯ 25 ಪ್ರವಾಸಿ ತಾಣಗಳನ್ನು ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಕರಾವಳಿಯ ಕಾರವಾರ, ಅಂಕೋಲಾ, ಗೋಕರ್ಣ, ಮುರ್ಡೇಶ್ವರ, ಭಟ್ಕಳ ಸೇರಿದಂತೆ ವಿವಿಧ ಪ್ರದೇಶಗಳಿವೆ. ಘಟ್ಟದ ಮೇಲಿನ ಶಿರಸಿ, ಯಲ್ಲಾಪುರ, ದಾಂಡೇಲಿ, ಯಾಣ, ಸೋಂದಾ, ಸಿದ್ದಾಪುರ ತಾಣಗಳನ್ನೂ ಸೇರಿಸಲಾಗಿದೆ. ಇವುಗಳಲ್ಲಿ ಧಾರ್ಮಿಕ ಕ್ಷೇತ್ರಗಳು, ಜಲಪಾತಗಳು ಇರುವ ಪ್ರದೇಶಗಳು ಮುಖ್ಯವಾಗಿವೆ.

ಕಳೆದ ವರ್ಷ 13,861 ವಿದೇಶಿ ಪ್ರವಾಸಿಗರೂ ಜಿಲ್ಲೆಯ ಸೌಂದರ್ಯ ಸವಿದಿದ್ದಾರೆ. ಅವರಿಗೆ ಗೋಕರ್ಣ ಅತ್ಯಂತ ನೆಚ್ಚಿನ ಸ್ಥಳವಾಗಿದ್ದು, 5,383 ಮಂದಿ ಬಂದಿದ್ದಾರೆ.

ADVERTISEMENT

‘ಖಾಸಗಿತನಕ್ಕೆ ತೊಂದರೆಯಿಲ್ಲ’
‘ನಮ್ಮ ಜಿಲ್ಲೆಯ ಕಡಲತೀರಗಳು ಸುಂದರ ಹಾಗೂ ಸ್ವಚ್ಛವಾಗಿವೆ. ಅಲ್ಲದೇ ಇಲ್ಲಿ ಪ್ರವಾಸಿಗರ ಖಾಸಗಿತನಕ್ಕೂ ಧಕ್ಕೆಯಾಗುವುದಿಲ್ಲ. ಕೆಲವು ವರ್ಷಗಳಿಂದ ಗೋವಾಕ್ಕೆ ಬರುತ್ತಿರುವ ಪ್ರವಾಸಿಗರು ಕಾರವಾರಕ್ಕೂ ಭೇಟಿ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಕೈಗೊಂಡಿರುವ ಚಟುವಟಿಕೆಗಳು ಜನರನ್ನು ಆಕರ್ಷಿಸುತ್ತಿವೆ. ರಾಕ್ ಗಾರ್ಡನ್ ಆದ ಮೇಲೆ ಕಾರವಾರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ’ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಉಪ ನಿರ್ದೇಶಕ ಪುರುಷೋತ್ತಮ.

ಗೋಕರ್ಣದ ಓಂ ಬೀಚ್‌ನಲ್ಲಿ ವಿಹರಿಸುತ್ತಿರುವ ವಿದೇಶಿ ಪ್ರವಾಸಿಗರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.