
ಶಿರಸಿ: ‘ಮಳೆ ಮುಗಿದು ಚಳಿಗಾಲ ಆರಂಭವಾಗಿದ್ದು, ಮಂಗನ ಕಾಯಿಲೆ (ಕೆಎಫ್‍ಡಿ) ಹರಡುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಕಾಡಿಗೆ ಹೋಗುವವರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಮಧುಕರ ಪಾಟೀಲ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿಯಲ್ಲಿ ಮಾತನಾಡಿದ ಅವರು, ‘ಕಳೆದ ಕೆಲ ವರ್ಷಗಳಿಂದ ಕೆಎಫ್‌ಡಿ ಚಳಿಗಾಲ ಆರಂಭದೊಂದಿಗೆ ಪ್ರಾರಂಭವಾಗುತ್ತಿದೆ. ರೋಗ ಕಾಣಿಸಿಕೊಳ್ಳುವ ಪ್ರದೇಶಗಳಲ್ಲಿ ಪ್ರಸ್ತುತ ವರ್ಷ ಈಗಾಗಲೇ ಡಿಎಫ್ಎ ತೈಲ ನೀಡಲಾಗಿದ್ದು, ಕಾಡಿಗೆ ಹೋಗುವ ಜನರು ಅದನ್ನು ಕಡ್ಡಾಯವಾಗಿ ಬಳಸುವಂತೆ ಸೂಚಿಸಲಾಗಿದೆ. ಕಾಯಿಲೆ ಬರದಂತೆ ಎಚ್ಚರಿಕೆ ವಹಿಸುವುದು ಅತಿ ಅವಶ್ಯ’ ಎಂದರು.
‘ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಜನೌಷಧ ಮಳಿಗೆ ಜಾಗದ ಕೊರತೆಯಿಂದ ಸ್ಥಗಿತವಾಗಿತ್ತು. ಆಸ್ಪತ್ರೆ ಕಟ್ಟಡ ನಿರ್ಮಾಣದ ನಂತರ ಮತ್ತೆ ಆರಂಭಿಸಲಾಗುವುದು’ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಸತೀಶ ಹೆಗಡೆ ಮಾತನಾಡಿ, ‘ಪ್ರಸ್ತುತ ವಾತಾವರಣದಲ್ಲಿ ಅಡಿಕೆಗೆ ಎಲೆಚುಕ್ಕಿ ರೋಗ ಹೆಚ್ಚಿನ ಪ್ರಮಾಣದಲ್ಲಿ ಹರಡುವ ಸಾಧ್ಯತೆ ಇದೆ. ಬೆಳೆಗೆ ಔಷಧ ಸಿಂಪಡಣೆ ಮಾಡುವಂತೆ ಸೂಚಿಸಲಾಗಿದೆ’ ಎಂದರು.
ಪಶುಸಂಗೋಪನಾ ಇಲಾಖೆ ಡಾ.ದಿನೇಶ ಮಾತನಾಡಿ, ‘ತಾಲ್ಲೂಕಿನ 41,500 ಜಾನುವಾರುಗಳಿಗೆ ಕಾಲು ಬಾಯಿ ರೋಗದ ಲಸಿಕೆ ಹಾಕಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ನಾಯಿ, ಬೆಕ್ಕುಗಳಿಗೆ ರೆಬೀಸ್ ಲಸಿಕೆ ಹಾಕಲಾಗಿದೆ’ ಎಂದರು.
ಕೃಷಿ ಇಲಾಖೆ ಅಧಿಕಾರಿ ಮಧುಕರ ನಾಯ್ಕ ಮಾತನಾಡಿ, ‘ಹೊರಗಿನ ತಾಲ್ಲೂಕಿನವರಿಗೆ ಈ ಬಾರಿ ರಸಗೊಬ್ಬರ ನೀಡದ ಕಾರಣಕ್ಕೆ ಸ್ಥಳೀಯ ರೈತರಿಗೆ ಗೊಬ್ಬರದ ಕೊರತೆಯಾಗಿಲ್ಲ’ ಎಂದರು.
‘ಈ ವರ್ಷದಿಂದ ತಾಲ್ಲೂಕಿನ 5 ಕ್ಲಸ್ಟರ್‌ಗಳಲ್ಲಿ ನೈಸರ್ಗಿಕ ಕೃಷಿ ಆರಂಭಿಸಲು ಕ್ರಮವಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಬಸ್ ನಿಲ್ದಾಣದಲ್ಲಿ ನಮ್ಮ ಕ್ಲಿನಿಕ್ ಆರಂಭಕ್ಕೆ ಎನ್.ಡಬ್ಲ್ಯು.ಕೆ.ಆರ್.ಟಿ.ಸಿ. ಅನುಮತಿಗಾಗಿ ಪ್ರಸ್ತಾವ ಕಳುಹಿಸಲಾಗಿದೆ. ಅನುಮತಿ ಕೊಡುವುದು ಬಹಳ ದಿನಗಳಿಂದ ಬಾಕಿಯಿದೆಡಾ.ಮಧುಕರ ಪಾಟೀಲ ತಾಲ್ಲೂಕು ಆರೋಗ್ಯಾಧಿಕಾರಿ
ನರೇಗಾ ಯೋಜನೆ; ಹಿನ್ನಡೆ
ಕೆಡಿಪಿಗೆ ಆರ್.ಎಫ್.ಒ.ಗಳು ಹಾಜರಾಗುತ್ತಿಲ್ಲ. ನರೇಗಾ ಯೋಜನೆ ಅನುಷ್ಠಾನದಲ್ಲಿ ಅರಣ್ಯ ಇಲಾಖೆ ತೀವ್ರ ಹಿಂದಿದೆ. ಸಭೆಗೆ ಕರೆದರೂ ಹಾಜರಾಗದೆ ಉದ್ಧಟತನ ತೋರುವುದು ಸರಿಯಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಇಒ ಚನ್ನಬಸಪ್ಪ ಹಾವಣಗಿ ಅಸಮಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.