ADVERTISEMENT

ಕಾಂಗ್ರೆಸ್ ನೀಡಿದ್ದ ಪಟ್ಟಿಯಲ್ಲೇ ಆಝಾದ್ ಹೆಸರಿತ್ತು: ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 8:08 IST
Last Updated 13 ಆಗಸ್ಟ್ 2022, 8:08 IST
ಸಚಿವ ಕೋಟ ಶ್ರೀನಿವಾಸ ಪೂಜಾರಿ
ಸಚಿವ ಕೋಟ ಶ್ರೀನಿವಾಸ ಪೂಜಾರಿ   

ಕಾರವಾರ: 'ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಸ್ಥಾನಕ್ಕೆ, ವಿರೋಧ ಪಕ್ಷ ನೀಡಿದ ಪಟ್ಟಿಯಲ್ಲಿ ಪರೇಶ್ ಮೇಸ್ತ ಕೊಲೆ ಆರೋಪಿ ಆಝಾದ್ ಅಣ್ಣಿಗೇರಿ ಹೆಸರು ಸೇರಿತ್ತು. ಈ ವಿಚಾರ ಸುದ್ದಿಯಾದ ತಕ್ಷಣ ಆದೇಶ ರದ್ದು ಮಾಡಿದ್ದೇವೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ‌್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ವಕ್ಫ್ ಮಂಡಳಿಯು ಆಡಳಿತಾತ್ಮಕ ಚುನಾವಣೆ ನಡೆಯಬೇಕಾದ ವ್ಯವಸ್ಥೆ ಹೊಂದಿದೆ. ಸ್ವಾಭಾವಿಕವಾಗಿ ಆಡಳಿತ ಪಕ್ಷಕ್ಕೆ ಬಹುಮತ ಇರಲಿಲ್ಲ. ಸಂಧಾನದ ಮೂಲಕ ನಾಮನಿರ್ದೇಶನ ಮಾಡಲು ತೀರ್ಮಾನಿಸಲಾಗಿತ್ತು. ನಮ್ಮ ಪಟ್ಟಿಯಲ್ಲಿ ಗೊಂದಲಗಳಿರಲಿಲ್ಲ. ಆದರೆ, ವಿರೋಧ ಪಕ್ಷದವರು ನೀಡಿದ ಪಟ್ಟಿಯಲ್ಲಿ ಆಝಾದ್ ಹೆಸರಿತ್ತು' ಎಂದು ಸಮರ್ಥನೆ ನೀಡಿದರು.

'ಪರೇಶ್ ಮೇಸ್ತ ಕೊಲೆ ಆರೋಪಿ ಆಝಾದ್ ಅಣ್ಣಿಗೇರಿಯನ್ನು ವಕ್ಫ್ ಬೋರ್ಡ್‌ಗೆ ನೇಮಕ ಮಾಡುವ ಮೂಲಕ ಬಿಜೆಪಿಯ ಕೋಮು ಕಾರ್ಯಸೂಚಿ ಮತ್ತೊಮ್ಮೆ ಬಯಲಾಗಿದೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, 'ಸಿದ್ದರಾಮಯ್ಯ ಅವರ ಪಕ್ಷದವರೇ ಪಟ್ಟಿ ನೀಡಿದ್ದರು' ಎಂದು ಹೇಳಿದರು.

ಹೈಕೋರ್ಟ್, ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ) ರದ‌್ದು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, 'ಎ.ಸಿ.ಬಿ ರದ್ದುಪಡಿಸುವ ಬಗ್ಗೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಬೇರೆಬೇರೆ ಕಾರಣಗಳಿಗೆ ಎ.ಸಿ.ಬಿ ಸಂಬಂಧಿತ ಪ್ರಕರಣಗಳು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿಯಿವೆ. ನ್ಯಾಯಾಲಯ ಹೇಳಿದಂತೆ ಎ.ಸಿ.ಬಿ ರದ್ದು ಮಾಡಿ ಲೋಕಾಯುಕ್ತ ಬಲಪಡಿಸುತ್ತೇವೆ' ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.