ADVERTISEMENT

ಹಣ್ಣಿನ ಬೆಳೆಯತ್ತ ಚಿತ್ತ ಹರಿಸಿ

ಕೃಷಿ ಜಯಂತಿಯಲ್ಲಿ ಸ್ವರ್ಣವಲ್ಲಿಶ್ರೀ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಮೇ 2022, 15:35 IST
Last Updated 14 ಮೇ 2022, 15:35 IST
ಕೃಷಿ ಜಯಂತಿ ಅಂಗವಾಗಿ ಸ್ವರ್ಣವಲ್ಲಿ ಮಠದ ವತಿಯಿಂದ ಕೃಷಿ ಸಾಧಕರಿಗೆ ನೀಡುವ ‘ಕೃಷಿ ಕಂಠೀರವ ಪ್ರಶಸ್ತಿ’ಯನ್ನು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ಸಿದ್ದಾಪುರ ತಾಲ್ಲೂಕಿನ ಬಾಳೇಕೊಪ್ಪದ ಸುಬ್ರಾಯ ಗಣಪತಿ ಹೆಗಡೆ ಅವರಿಗೆ ಪ್ರದಾನ ಮಾಡಿದರು
ಕೃಷಿ ಜಯಂತಿ ಅಂಗವಾಗಿ ಸ್ವರ್ಣವಲ್ಲಿ ಮಠದ ವತಿಯಿಂದ ಕೃಷಿ ಸಾಧಕರಿಗೆ ನೀಡುವ ‘ಕೃಷಿ ಕಂಠೀರವ ಪ್ರಶಸ್ತಿ’ಯನ್ನು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ಸಿದ್ದಾಪುರ ತಾಲ್ಲೂಕಿನ ಬಾಳೇಕೊಪ್ಪದ ಸುಬ್ರಾಯ ಗಣಪತಿ ಹೆಗಡೆ ಅವರಿಗೆ ಪ್ರದಾನ ಮಾಡಿದರು   

ಶಿರಸಿ: ಬೆಟ್ಟ ಭೂಮಿಯನ್ನು ವ್ಯರ್ಥ ಮಾಡದೆ ಅಲ್ಲಿ ಹಣ್ಣಿನ ಗಿಡಗಳನ್ನು ಬೆಳೆಯುವತ್ತ ರೈತರು ಚಿತ್ತ ಹರಿಸಬೇಕು. ಆ ಮೂಲಕ ತೋಟಗಾರಿಕೆಗೆ ಪರ್ಯಾಯ ಚಟುವಟಿಕೆಗೂ ಉತ್ತೇಜನ ಸಿಕ್ಕಂತಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಲಕ್ಷ್ಮೀನರಸಿಂಹ ಜಯಂತಿ ಅಂಗವಾಗಿ ಶನಿವಾರ ಮಠದಲ್ಲಿ ಆಯೋಜಿಸಲಾಗಿದ್ದ ಕೃಷಿ ಜಯಂತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅನಿಶ್ಚಿತತೆಯಲ್ಲಿ ಇರುವ ಅಡಿಕೆ ಬೆಳೆಯನ್ನೇ ನೆಚ್ಚಿಕೊಂಡು ಕುಳಿತುಕೊಳ್ಳಬಾರದು. ಮಲೆನಾಡು, ಅರೆಮಲೆನಾಡು ಭಾಗದ ರೈತರಿಗೆ ಬೆಟ್ಟ ಭೂಮಿಯ ಲಭ್ಯತೆ ಇದೆ. ಅಲ್ಲಿ ಅನುಕೂಲಕರ ಬೆಳೆ ಬೆಳೆಯಲು ವಿಫುಲ ಅವಕಾಶವೂ ಇದೆ. ಅದರಿಂದ ಉಪಾದಾಯ ಗಳಿಕೆ ಜತೆಗೆ ಪರಿಸರ ಉಳಿಸಿದ ಸಂತೃಪ್ತಿಯೂ ಸಿಗುತ್ತದೆ’ ಎಂದರು.

ADVERTISEMENT

‘ಭಗವಂತನ ಧ್ಯಾನ ನಿರಂತರವಾಗಿರಬೇಕು. ಧ್ಯಾನ, ತಪಸ್ಸಿನ ಮೂಲಕ ಏಕಾಗ್ರತೆ ಸಾಧಿಸಿದರೆ ಜೀವನದಲ್ಲಿ ಎಲ್ಲ ಹಂತಗಳನ್ನೂ ದಾಟಿ ಯಶಸ್ಸಿನತ್ತ ಸಾಗಬಹುದು’ ಎಂದರು.

ಟಿಎಸ್ಎಸ್ ನಿರ್ದೇಶಕ ಶಶಾಂಕ ಹೆಗಡೆ ಶೀಗೇಹಳ್ಳಿ ಮಾತನಾಡಿ, ‘ಸಮಾಜದಲ್ಲಿ ಕೃಷಿಕರನ್ನು ಗುರುತಿಸಿ, ಗೌರವಿಸುವ ಪದ್ಧತಿ ಕಡಿಮೆಯಾಗುತ್ತಿದೆ. ಆದರೆ ಕೃಷಿ ಜಯಂತಿ ಮೂಲಕ ಸ್ವರ್ಣವಲ್ಲಿ ಮಠ ರೈತರ ಸಾಧನೆ ಗುರುತಿಸಿ ಪ್ರೋತ್ಸಾಹಿಸುತ್ತಿದೆ’ ಎಂದರು.

‘ಅಡಿಕೆ ಖರೀದಿಗೆ ಶೇ 5ರಷ್ಟು ಇದ್ದ ಜಿ.ಎಸ್.ಟಿ. ದರವನ್ನು ಶೇ 18ಕ್ಕೆ ಏರಿಕೆ ಮಾಡಲಾಗಿದೆ. ಇದು ಅಡಿಕೆ ವಹಿವಾಟು, ಉದ್ಯಮಗಳ ಮೇಲೆ ಡ್ಡಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಕೃಷಿ ಜಯಂತಿ ಅಂಗವಾಗಿ ನೀಡಲಾಗುವ ಕೃಷಿ ಕಂಠೀರವ, ಸಾಧಕ ಮಹಿಳೆ, ಕೃಷಿ ಕುಟುಂಬ, ಕುಶಲಕರ್ಮಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಕೃಷಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.